ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಪ್ರಕರಣದ ಆರೋಪಿಗಳ ಪತ್ತೆ ಹಚ್ಚಿ

ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಎಡಿಜಿಪಿ ಆರ್.ಹಿತೇಂದ್ರ ತಾಕೀತು
Last Updated 7 ಜುಲೈ 2021, 8:54 IST
ಅಕ್ಷರ ಗಾತ್ರ

ಕಲಬುರ್ಗಿ: ‘ಹಲವಾರು ವರ್ಷಗಳಿಂದ ಬಾಕಿ ಉಳಿದುಕೊಂಡಿರುವ ಹಳೆಯ ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಬೇಕು. ಎಲ್ಲ ಪ್ರಕರಣಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಅಪರಾಧ ಮತ್ತು ತಾಂತ್ರಿಕ ಸೇವೆಗಳು) ಆರ್.ಹಿತೇಂದ್ರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಪೊಲೀಸ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಕಮಿಷನರೇಟ್ ಮತ್ತು ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳ ಸಭೆ ಹಾಗೂ ಅಪರಾಧ ಪ್ರಕರಣಗಳ ನಿಗ್ರಹ ಮತ್ತು ಪತ್ತೆ ಮಾಡಿರುವ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಹಲವು ವರ್ಷಗಳಿಂದ ಪ್ರಕರಣಗಳು ಯಾಕೆ ಬಾಕಿ ಉಳಿದುಕೊಂಡಿವೆ ಎಂಬುದನ್ನು ಅರಿತುಕೊಂಡು, ಅವನ್ನು ಪತ್ತೆ ಮಾಡಬೇಕು’ ಎಂದು ಎಚ್ಚರಿಕೆ ನೀಡಿದರು.

‘ನಗರ ಮತ್ತು ಜಿಲ್ಲೆಯಲ್ಲಿ ಎಷ್ಟು ಸ್ವತ್ತಿನ ಅಪರಾಧಗಳು ನಡೆದಿವೆಯೋ ಅವುಗಳಲ್ಲಿ ಎಲ್ಲವನ್ನೂ ಪತ್ತೆ ಮಾಡಿ ಪ್ರಕರಣಗಳನ್ನು ವಿಲೇವಾರಿ ಮಾಡಬೇಕು. ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಿದಾಗ, ಸೂಕ್ತವಾಗಿರುವ ಸಾಕ್ಷಿಗಳನ್ನು ಸಂಗ್ರಹಿಸಿ ದೋಷಾರೋಪ ಪಟ್ಟಿ ಸಿದ್ಧಪಡಿಸಬೇಕು’ ಎಂದು ಸಲಹೆ ನೀಡಿದರು.

‘ಹಲವು ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗಿ ನಂತರ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರ ಬಂದ ನಂತರ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಮಾಡಬೇಕು. ಈಗ ಸಾಕಷ್ಟು ತಂತ್ರಜ್ಞಾನ ಲಭ್ಯವಿವೆ. ಅವನ್ನು ಬಳಸಿಕೊಂಡು ಪತ್ತೆ ಮಾಡುವ ಕೆಲಸ ಮಾಡಬೇಕು. ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆಯ ಜಾಡು ಹಿಡಿದು ತನಿಖೆ ಚುರುಕುಗೊಳಿಸಬೇಕು’ ಎಂದು ಹಿತೇಂದ್ರ ತಿಳಿಸಿದರು.

‘ಕಳ್ಳತನ, ಸುಲಿಗೆ, ದರೋಡೆ ಇನ್ನಿತರ ಪ್ರಕರಣಗಳಲ್ಲಿ ಶಾಮೀಲಾಗಿ ತಲೆ ಮರೆಸಿಕೊಂಡವರ ಮಾಹಿತಿ ಲಭ್ಯವಾದರೆ, ಅವರನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪತ್ತೆ ಮಾಡಬೇಕು’ ಎಂದರು.

ಈಶಾನ್ಯ ವಲಯದ ಐಜಿಪಿ ಮನೀಷ್ ಖರ್ಬೀಕರ್, ಕಲಬುರ್ಗಿ ಪೊಲೀಸ್ ಕಮಿಷನರ್ ಡಾ.ವೈ.ಎಸ್.ರವಿಕುಮಾರ, ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ್, ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸಲು, ಶ್ರೀಕಾಂತ ಕಟ್ಟಿಮನಿ, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಡಿಎಸ್ಪಿಗಳಾದ ಉಮೇಶ ಚಿಕ್ಕಮಠ, ತಾಯಪ್ಪ ದೊಡ್ಡಮನಿ, ಬಸವೇಶ್ವರ ಹೀರಾ, ಮಲ್ಲಿಕಾರ್ಜುನ ಸಾಲಿ, ಎಸಿಪಿಗಳಾದ ಅಂಶುಕುಮಾರ್, ಜೆ.ಎಚ್.ಇನಾಮದಾರ, ಗಿರೀಶ ಎಸ್.ಬಿ, ಸುಧಾ ಆದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT