ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವೀರಭದ್ರ ಸಿಂಪಿ ಹೇಳಿಕೆ

Last Updated 5 ಏಪ್ರಿಲ್ 2021, 13:09 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕನ್ನಡ ಸಾಹಿತ್ಯ ಪರಿಷತ್‌ ಮೂಲಕ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಸಾಂಸ್ಕೃತಿಕ ಉದ್ಯೋಗ ಕಲ್ಪಿಸುವ ಗುರಿ ಹೊಂದಿದ್ದೇನೆ’ ಎಂದು ವೀರಭದ್ರ ಸಿಂಪಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಮಹನೀಯರ ಕುರಿತು ಗ್ರಂಥ ಹೊರತರುವ ಕೆಲಸ ಮಾಡಲಾಗುವುದು’ ಎಂದು ಹೇಳಿದರು.

‘ ಸಾಹಿತಿಗಳು, ಕಲಾವಿದರು, ಮುಖಂಡರು, ಸಂಘ ಸಂಸ್ಥೆಗಳ ಮುಖ್ಯಸ್ಥರು, ಸಾಹಿತ್ಯಾಸಕ್ತರ ಅಭಿಪ್ರಾಯ ಸಂಗ್ರಹಿಸಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಏಪ್ರಿಲ್ 6ರಂದು ನಗರದ ಜಗತ್‌ ವೃತ್ತದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್ ಮತ್ತು ಬಸವಣ್ಣನವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ನಂತರ ತಹಶೀಲ್ದಾರ್‌ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಾಗುವುದು’ ಎಂದರು.

‘ಈ ಹಿಂದೆ ನಾಲ್ಕು ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೆ. ಅದರಲ್ಲಿ ಮೂರು ಬಾರಿ ಗೆದ್ದಿದ್ದೇನೆ. ಪರಿಷತ್‌ನ ತಾಲ್ಲೂಕು, ಜಿಲ್ಲಾ ಘಟಕಗಳಿಗೆ ಆರ್ಥಿಕ ನೆರವು ಇಲ್ಲದಿದ್ದರೂ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಅವುಗಳನ್ನು ಜನರು ಗುರುತಿಸುತ್ತಿದ್ದಾರೆ. ಶೇ 70ರಷ್ಟು ಮತದಾರರು ನಾನು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಬೆಂಬಲಿಸುವ ವಿಶ್ವಾಸ ಇದೆ’ ಎಂದರು.

‘ನನ್ನ ಅವಧಿಯಲ್ಲಿ 16 ಕೃತಿಗಳು, 10 ಸ್ಮರಣ ಸಂಚಿಕೆಗಳನ್ನು ಹೊರ ತಂದಿದ್ದೇನೆ. ಅಪೂರ್ಣಗೊಂಡಿದ್ದ ಬಾಪುಗೌಡ ದರ್ಸನಾಪುರ ರಂಗಮಂದಿರದ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇನೆ. 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಲಾಗಿದೆ’ ಎಂದು ಹೇಳಿದರು.

‘ಪರಿಷತ್‌ನ ಮತದಾರರ ಪಟ್ಟಿಯನ್ನು ಈ ಬಾರಿ ಮೊಬೈಲ್‌ ಆ್ಯಪ್‌ (kaspa election 2021) ಮೂಲಕ ಪಡೆಯಲು ಪರಿಷತ್‌ ಚುನಾವಣೆಯ ಚುನಾವಣಾಧಿಕಾರಿ ಅವರು ವ್ಯವಸ್ಥೆ ಮಾಡಿದ್ದಾರೆ. ಇದು ಉತ್ತಮ ಕೆಲಸ’ ಎಂದರು.

ಸಾಹಿತಿ ಕೆ.ಎಸ್.ಬಂಧು, ಡಾ.ಸೂರ್ಯಕಾಂತ ಪಾಟೀಲ, ಲಿಂಗರಾಜ ಸಿರಗಾಪುರ, ದೌಲತರಾಯ ಮಾಲಿಪಾಟೀಲ, ಆನಂದ ನಂದೂರಕರ, ಅಂಬಜಿ ಕೌಲಗಿ, ಸಂಜೀವರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT