ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: 4 ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

5 ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ; ತಡೋಳಾ ಅಧ್ಯಕ್ಷ, ಉಪಾಧ್ಯಕ್ಷರಿಗೆ ಒಲಿದ ಅದೃಷ್ಟ
Last Updated 5 ಫೆಬ್ರುವರಿ 2021, 5:40 IST
ಅಕ್ಷರ ಗಾತ್ರ

ಆಳಂದ: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಜಾರಿ ಅನ್ವಯ ಗುರುವಾರ 9 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಜರುಗಿತು. ಇದರಲ್ಲಿ ಒಟ್ಟು 4 ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯು ಅವಿರೋಧವಾಗಿ ನಡೆಯಿತು.

ತೀವ್ರ ಕುತೂಹಲ ಕೆರಳಿಸಿದ ನಿಂಬಾಳ, ನಿಂಬರ್ಗಾ, ಬೆಳಮಗಿ,ಹಿರೋಳಿ ಹಾಗೂ ತಡೋಳಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಆದರೆ ತಡೋಳಾ ಪಂಚಾಯಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಸಮ ಮತ ಲಭಿಸಿದ ಹಿನ್ನಲೆಯಲ್ಲಿ ಅಂತಿಮವಾಗಿ ಲಾಟರಿ ಆಯ್ಕೆ ಮೂಲಕ ಆಯ್ಕೆ ನಡೆಯಿತು. ಉಳಿದಂತೆ ಕೊಡಲ ಹಂಗರಗಾ, ಜಿಡಗಾ, ಮುನ್ನೋಳ್ಳಿ, ದರ್ಗಾ ಶಿರೂರು ಗ್ರಾಮ ಪಂಚಾಯಿತಿ ಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯು ಅವಿರೋಧವಾಗಿ ನಡೆಯಿತು.

ತಡೋಳಾ: ಒಟ್ಟು 14 ಸದಸ್ಯಬಲ ಹೊಂದಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮೈಲಾರಿ ಜೋಗೆ, ಸುನೀತಾ ಬನಸೋಡೆ, ಕೇತಕಿ ಅವಟೆ ನಾಮಪತ್ರ ಸಲ್ಲಿಸಿದರು. ಇವರಲ್ಲಿ ಕೇತಕಿ ಅವಟೆ ತಮ್ಮ ನಾಮಪತ್ರ ಹಿಂಪಡೆದ ನಂತರ ಅಧ್ಯಕ್ಷ ಸ್ಥಾನಕ್ಕೆ ಮೈಲಾರಿ ಜೋಗೆ ಹಾಗೂ ಸುನೀತಾ ಬನಸೋಡೆ ನಡುವೆ ಸ್ಪರ್ಧೆ ನಡೆದು ತಲಾ 7 ಮತಗಳು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ವಿಜಯಾಬಾಯಿ ನಾಗ್ಮೋಡೆ ಹಾಗೂ ಪೂಜಾ ಪ್ರವೀಣ ಕಾಂಬಳೆ ಅವರಿಗೂ ಗೌಪ್ಯ ಮತದಾನದಲ್ಲಿ ತಲಾ 7 ಮತಗಳು ಬಂದವು. ಚುನಾವಣಾಧಿಕಾರಿ ನಾಗಮೂರ್ತಿ ಅವರು ಲಾಟರಿ ಮೂಲಕ ಆಯ್ಕೆ ಮಾಡಲು ಮುಂದಾದರು. ಮೈಲಾರಿ ಜೋಗೆ ಅವರಿಗೆ ಅಧ್ಯಕ್ಷ ಸ್ಥಾನ ಒಲಿದರೆ, ಉಪಾಧ್ಯಕ್ಷ ಸ್ಥಾನವು ಪೂಜಾ ಪ್ರವೀಣ ಕಾಂಬಳೆ ಅವರಿಗೆ ಒಲಿಯಿತು.

ಬೆಳಮಗಿ: ಒಟ್ಟು 16 ಸದಸ್ಯ ಬಲದ ಬೆಳಮಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಪಾರ್ವತಿ ಅಂಬಾರಾಯ ಜಿಂಧೆ ಹಾಗೂ ಪ್ರೀತಿ ಸೈಬಣ್ಣಾ ಡೋಲೆ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಅ)ಕ್ಕೆ ಮೀಸಲಿರಿಸಿದ ಪರಿಣಾಮ ಆಶಾರಾಣಿ ಸಿದ್ದಾರೂಡ ಹಲಕಟ್ಟಿ ಮಾತ್ರ ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಪ್ರೀತಿ ಸೈಬಣ್ಣಾ ಡೋಲೆ 13 ಮತ ಪಡೆದು ಅಧ್ಯಕ್ಷೆಯಾಗಿ ಗೆಲುವು ಸಾಧಿಸಿದರು. ಪಾರ್ವತಿ ಜಿಂಧೆ ಅವರಿಗೆ 3 ಮತ ಬಂದವು.

ನಿಂಬಾಳ: ಇಲ್ಲಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿತ್ತು. ಅಧ್ಯಕ್ಷ ಸ್ಥಾನಕ್ಕೆ ಯಲ್ಲಾಬಾಯಿ ಮಲ್ಕಣ್ಣಾ ಹಾಗೂ ಸುಜಾತಾ ಹೊಳ್ಕರ್ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ಪಾಟೀಲ, ವಿರೂಪಾಕ್ಷಯ್ಯ ಹಿರೇಮಠ ನಾಮಪತ್ರ ಸಲ್ಲಿಸಿದರು. ಯಲ್ಲಾಬಾಯಿ ಮಲ್ಕಣ್ಣಾ ಅವರು 8 ಮತ ಪಡೆದು ಅಧ್ಯಕ್ಷರಾದರೆ ಹಾಗೂ ಚಂದ್ರಶೇಖರ ಅಣ್ಣಯ್ಯ ಅವರು 8 ಮತ ಪಡೆದು ಉಪಾಧ್ಯಕ್ಷರಾಗಿ ಗೆಲುವು ಸಾಧಿಸಿದರು.

ಹಿರೋಳ್ಳಿ: ಒಟ್ಟು 16 ಸದಸ್ಯ ಬಲ ಹೊಂದಿರುವ ಇಲ್ಲಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮತದಾನ ನಡೆದರೂ ಉಪಾಧ್ಯಕ್ಷ ಸ್ಥಾನವು ಲಾಟರಿ ಮೂಲಕ ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ಸೋಮಲಿಂಗ ಕೌಲಗಿ ಹಾಗೂ ಕಾಶಿನಾಥ ವಾಡೇದ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಎಸ್.ಹುಡುಗಿ ಹಾಗೂ ವಿದ್ಯಾ ದಯಾನಂದ ಹಾಸು ನಾಮಪತ್ರ ಸಲ್ಲಿಸದರು. ಅಧ್ಯಕ್ಷ ಸ್ಥಾನದ ಮತದಾನದಲ್ಲಿ ಸೋಮಲಿಂಗ ಕೌಲಗಿ ಅವರಿಗೆ 9 ಮತ ಪಡೆದು ಗೆಲುವು ಪಡೆದರು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಇಬ್ಬರಿಗೂ ತಲಾ 8 ಮತ ಬಂದವು. ಹೀಗಾಗಿ ಚುನಾವಣಾಧಿಕಾರಿಗಳು ಲಾಟರಿ ಮೂಲಕ ಜ್ಯೋತಿ ಶಿವಶರಣಪ್ಪ ಹುಡುಗಿ ಅವರ ಆಯ್ಕೆ ಪ್ರಕಟಿಸಿದರು. ಆಯಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಚುನಾವಣಾಧಿಕಾರಿಗಳು ಫಲಿತಾಂಶ ಪ್ರಕಟಿಸಿದ ಬೆನ್ನಲ್ಲೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಬೆಂಬಲಿಗರು ಸಂಭ್ರಮದಿಂದ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT