ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಪ್ರತಿಜ್ಞೆ ಓದಿದವರಿಗೆ ಜೈಲು ಶಿಕ್ಷೆ; ಕನ್ಹಯ್ಯ ಕುಮಾರ್

Last Updated 14 ಏಪ್ರಿಲ್ 2023, 8:02 IST
ಅಕ್ಷರ ಗಾತ್ರ

ಕಲಬುರಗಿ: ‘ದೇಶದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 22 ಪ್ರತಿಜ್ಞೆಗಳನ್ನು ಓದಿದವರನ್ನು ಅಪರಾಧಿ ಎಂದು ಘೋಷಿಸಿ ಅವರನ್ನು ಜೈಲಿಗೆ ತಳ್ಳಲಾಗುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ಕನ್ಹಯ್ಯ ಕುಮಾರ್ ಹೇಳಿದರು.

ನಗರದಲ್ಲಿ ಗುರುವಾರ ಡಾ.ಅಂಬೇಡ್ಕರ್ ಅವರ 132ನೇ ಜಯಂತ್ಯುತ್ಸವ ಸಮಿತಿಯು ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಚಾರಣ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಬೇಡ್ಕರ್ ಅವರ ಜಯಂತಿ ನೆನಪಾಗಿ ಸರ್ಕಾರಿ ಒಂದು ಒಂದು ಕಡೆ ರಜೆ ಘೋಷಿಸುತ್ತದೆ. ದೊಡ್ಡ ಮೂರ್ತಿ ಮಾಡಿ ನಾಯಕರು ಮಾಲೆ ಹಾಕಿ ಫೋಟೋ ತೆಗೆಸಿಕೊಂಡು ಪ್ರಚಾರ ಪಡೆಯುತ್ತಾರೆ. ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಳ್ಳುತ್ತಾರೆ. ಯಾರಾದರು ಎದ್ದು ನಿಂತು ಅಂಬೇಡ್ಕರ್ ಅವರ ಪ್ರತಿಜ್ಞೆಗಳನ್ನು ಓದಿದರೆ ಅವರನ್ನು ಜೈಲಿಗೆ ಹಾಕಲಾಗುತ್ತದೆ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

‘ನಾವು ಯಾವುದೇ ಸಾಂಸ್ಕೃತಿ, ಧರ್ಮದ ವಿರುದ್ಧ ಇಲ್ಲ. ಯಾರ ಭಾವನೆಗಳು, ಪೂಜೆ, ಸಂಸ್ಕೃತಿ, ಪರಂಪರೆ ಅಪಮಾನ ಮಾಡುವುದಿಲ್ಲ. ಸಂವಿಧಾನ ಎಲ್ಲರಿಗೂ ಒಂದೇ ಸಮಾನ ಮತದಾನ ಹಕ್ಕು ಕೊಟ್ಟಿದೆ. ಪ್ರಕೃತಿಯೂ ಎಲ್ಲರನ್ನೂ ಸಮನಾಗಿ ನೋಡುತ್ತದೆ. ನಮ್ಮ ಸಮಾನತೆಯ ವಿರುದ್ಧ ಸವಾಲು ಹಾಕಿದರೆ ಕೆಲವರಿಗೆ ಹೊಟ್ಟೆ ಹುರಿಯುತ್ತದೆ’ ಎಂದರು.

‘ನಾನು ಹೈದರಾಬಾದ್‌ನಿಂದ ಬರುವಾಗ ಪೊಲೀಸರು ನಮ್ಮ ವಾಹನ ತಡೆದು ತಪಾಸಣೆ ನಡೆಸಿದರು. ಏನು ಇಲ್ಲದೆ ಇದ್ದರೂ ತಪಾಸಣೆ ಮಾಡಿದರು. ಹಾಗೆಯೇ ಮೋದಿ ಸ್ನೇಹಿತರಾದ ಅದಾನಿ, ಅಂಬಾನಿಯಂತವರು ಹೇಗೆ ಶ್ರೀಮಂತರಾದರು ಎಂಬ ಪರೀಕ್ಷೆಯು ದೇಶದ ಜನರ ಮುಂದೆ ನಡೆಯಲಿ’ ಎಂದು ಪ್ರತಿಪಾದಿಸಿದರು.

‘ಯಾರ ಖಾತೆಗೂ ₹15 ಲಕ್ಷ ಜಮಾ ಆಗದಿದ್ದರೂ ಮೋದಿ ಸ್ನೇಹಿತರ ಖಾತೆಗೆ ₹20 ಸಾವಿರ ಕೋಟಿ ಜಮೆಯಾಗುತ್ತಿದೆ. ದೇಶದ ಶೇ 70ರಷ್ಟು ಸಂಪತ್ತು ಕೆಲವರ ಕೈಯಲ್ಲಿದೆ. ನಮ್ಮ ಜೇಬು ಕತ್ತರಿಸಿ ಅವರ ಸ್ನೇಹಿತರ ಖಜಾನೆ ತುಂಬಿಸುತ್ತಿದ್ದಾರೆ. ಈ ಬಗ್ಗೆ ಸವಾಲು ಹಾಕಿದರೆ ನೀವು ವಿಕಾಸದ ವಿರೋಧಿಗಳು ಎನ್ನುವ ಪಟ್ಟಕಟ್ಟುತ್ತಾರೆ’ ಎಂದು ಟೀಕಿಸಿದರು.

ಕುಟುಂಬ ರಾಜಕಾರಣ ಪೋಷಣೆ: ಕುಟುಂಬ ರಾಜಕಾರಣ ಬಗ್ಗೆ ಬಹಳ ದೊಡ್ಡದಾಗಿ ಮಾತನಾಡುವ ಬಿಜೆಪಿ ನಾಯಕರೇ ಕುಟುಂಬ ರಾಜಕಾರಣವನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಅದನ್ನು ಮರೆ ಮಾಚಲು ಕಾಂಗ್ರೆಸ್ ಕಡೆಗೆ ಬೆರಳು ಮಾಡುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರ ತಂದೆಯೂ ಮುಖ್ಯ ಮಂತ್ರಿ ಆಗಿದ್ದರು. ಸಿ.ಎಂ ಪುತ್ರನನ್ನು ಸಿ.ಎಂ ಮಾಡಿದ್ದು ಬಿಜೆಪಿಯವರು. ಇದೆಲ್ಲವೂ ನೋಡಿದಾಗ ಬಿಜೆಪಿ ಏನು ಮಾಡುತ್ತಿದೆ ಎಂಬುದು ಜನರೇ ಹೇಳಲಿ ಎಂದರು.

ಶಾಸಕರಿಗೆ ಪಿಂಚಣಿ ನೀಡಲಾಗುತ್ತದೆ. ಆದರೆ, ನಾಡಿಗಾಗಿ ಶ್ರಮಿಸುವ ಸರ್ಕಾರಿ ನೌಕರರು ಸೇರಿದಂತೆ ಹಲವು ಕಡೆಗಳಲ್ಲಿ ದುಡಿಯುವವರಿಗೆ ಪಿಂಚಣಿ ನೀಡುತ್ತಿಲ್ಲ. ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು.

‘ಸೀತೆಯಂತೆ ಅದಾನಿಯ ಅಗ್ನಿ ಪರೀಕ್ಷೆಯಾಗಲಿ’

‘ಪ್ರಧಾನಿ ನರೇಂದ್ರ ಮೋದಿ ಅವರದ್ದು ರಾಮರಾಜ್ಯ ಆಡಳಿತ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ರಾಮರಾಜ್ಯದಲ್ಲಿ ಮಾತೆ ಸೀತೆಯನ್ನು ಅಗ್ನಿ ಪರೀಕ್ಷೆಗೆ ಒಳಪಡಿಸಿದಂತೆ ಉದ್ಯಮಿ ಗೌತಮ ಅದಾನಿ ಅವರನ್ನೂ ಅಗ್ನಿಪರೀಕ್ಷೆ ಮಾಡಿ’ ಎಂದು ಕಾಂಗ್ರೆಸ್ ಮುಖಂಡ ಕನ್ಹಯ್ಯ ಕುಮಾರ್ ಆಗ್ರಹಿಸಿದರು.

‘ದೇಶ ಬಡವಾಗಿ ಜನರ ಆದಾಯ ಕ್ಷೀಣಿಸಿ ಉದ್ಯೋಗ ಸಿಗದಂತಹ ಸ್ಥಿತಿಯಲ್ಲಿದೆ. ಆದರೆ, ಅದಾನಿ ಅವರು ಜಾಗತಿಕ ಶ್ರೀಮಂತ ಹೇಗಾದರು? ಅವರ ಬಳಿ ವಿಶೇಷ ಮಾಯ ಮಂತ್ರ ಇದೆಯಾ? ನಾವು ದುಡಿದು ಬೆವರು ಸುರಿಸಿ ವ್ಯವಹಾರ, ನೌಕರಿ ಮಾಡುತ್ತಿದ್ದೇವೆ. ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಪದವೀಧರರಿಗೆ ನೌಕರಿ ಸಿಗುತ್ತಿಲ್ಲ. ನಮ್ಮ ಜೀವನದಲ್ಲಿ ಸಮಸ್ಯೆ ಹೆಚ್ಚಾಗುತ್ತಿದ್ದರೇ ನಿಮ್ಮ ಸ್ನೇಹಿತರ ಸಂಪತ್ತು ಹೇಗೆ ಏರಿಕೆ ಆಗುತ್ತಿದೆ? ಇದೆಲ್ಲವನ್ನು ಅಗ್ನಿ ಪರೀಕ್ಷೆಗೆ ಒಳಪಡಿಸಿ’ ಎಂದರು. ‘ಮೋದಿ ಅವರು ರೈಲು ನಿಲ್ದಾಣದಲ್ಲಿ ಚಹಾ ಮಾರಾಟ ಮಾಡಿದ್ದನ್ನು ನಾವ್ಯಾರು ನೋಡಿಲ್ಲ. ಆದರೆ, ಇವತ್ತು ಅದೇ ರೈಲು ನಿಲ್ದಾಣಗಳನ್ನು ಏಕೆ ಮಾರುತ್ತಿದ್ದೀರಾ? ಸಾರ್ವಜನಿಕ ಸ್ವತ್ತುಗಳನ್ನು ಮಾರಾಟ ಮಾಡಿದರೆ ಬಡವರಿಗೆ ನಷ್ಟವಾಗುತ್ತದೆ’ ಎಂದರು.

ಬೀದರ್‌ನ ಅಣದೂರ ಬುದ್ಧವಿಹಾರದ ಭಂತೆ ಜ್ಞಾನಸಾಗರ, ಹತ್ಯಾಳ ಬುದ್ಧವಿಹಾರದ ಭಂತೆ ದಮ್ಮನಾಗ, ಶಾಸಕಿ ಖನೀಜ್ ಫಾತಿ ಮಾ, ಸಮಿತಿಯ ಗೌರವಾಧ್ಯಕ್ಷ ವಿಠ್ಠಲ ದೊಡ್ಡಮನಿ, ಸಮಿತಿ ಅಧ್ಯಕ್ಷ ದಿನೇಶ ಎಸ್‌. ದೊಡ್ಡಮನಿ, ಸಮಿತಿ ಮುಖಂಡರಾದ ಸುರೇಶ ಹಾದಿಮನಿ, ಗುಂಡಪ್ಪ ಲಂಡನಕರ್, ರಾಹುಲ್ ಉಪಾರೆ, ಅರ್ಜುನ ಭದ್ರೆ, ಅಶೋಕ ಕಪನೂರು, ಸಂಜೀವ ಕುಮಾರ ಮೇಲಿನಮನಿ, ಸಂತೋಷ ಮೇಲಿನಮನಿ, ರುಕ್ಮೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT