ಶನಿವಾರ, ಅಕ್ಟೋಬರ್ 23, 2021
20 °C
ಎಐಎಂಐಎಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ ವ್ಯಂಗ್ಯ

‘ಸಾವರ್ಕರ್‌ ಕ್ಷಮಾಪಣೆ: ಗಾಂಧೀಜಿ ಹೇಳಲು ಸಾಧ್ಯವೇ?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ವಿ.ಡಿ.ಸಾವರ್ಕರ್ ಅವರು ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಾಗ ಮಹಾತ್ಮ ಗಾಂಧೀಜಿ ದೇಶಕ್ಕೆ ಮರಳಿ ಬಂದಿರಲಿಲ್ಲ. ಗಾಂಧೀಜಿ ಆಫ್ರಿಕಾದಿಂದ ದೇಶಕ್ಕೆ ಬರುವ ಮುಂಚೆಯೇ ಸಾವರ್ಕರ್‌ ಜೈಲಿನಿಂದ ಕ್ಷಮಾಪಣೆ ಪತ್ರ ಬರೆದಿದ್ದರು. ಆದರೆ, ಕ್ಷಮಾಪಣೆ ಪತ್ರ ಬರೆಯುಂತೆ ಗಾಂಧೀಜಿ ಸಲಹೆ ನೀಡಿದ್ದರು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಸುಳ್ಳು ಹೇಳಲು ಹೇಳಿಕೊಟ್ಟಿದ್ದು ಯಾರು ಎಂದು ಅಖಿಲ ಭಾರತ ಮಜ್ಲಿಸ್ ಇತ್ತೇಹಾದ್ ಉಲ್ ಮುಸ್ಲಿಮಿನ್ (ಎಐಎಂಐಎಂ) ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ರಿಂಗ್ ರಸ್ತೆಯ ಮೆಟ್ರೊ ಪ್ಯಾಲೇಸ್ ಫಂಕ್ಷನ್ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, 1911ರಲ್ಲಿ ಸಾರ್ವಕರ್‌ ಮೊದಲ ಕ್ಷಮಾಪಣೆ ಪತ್ರವನ್ನು ಬ್ರಿಟಿಷರಿಗೆ ಬರೆದಿದ್ದರು. 1912ರಲ್ಲಿ ಎರಡನೇ ಕ್ಷಮಾಪಣೆ ಪತ್ರ ಬರೆದಿದ್ದರು. ಈ ಎರಡೂ ಸಂದರ್ಭದಲ್ಲೂ ಗಾಂಧೀಜಿ ದೇಶದಲ್ಲೇ ಇರಲಿಲ್ಲ. ಗಾಂಧೀಜಿ ಭಾರತಕ್ಕೆ ಬಂದಿದ್ದೇ 1915ರ ಜ 9ರಂದು. ಜೈಲಿಗೆ ಹೋಗುವುದೇ ಅಹಿಂಸೆಯ ದಾರಿ ಎಂದು ಗಾಂಧೀಜಿ ಹೇಳಿದ್ದರು. ಅದೂ 1920ರಲ್ಲಿ ಸಾವರ್ಕರ್‌ಗೆ ಪತ್ರ ಬರೆಯಲು ಹೇಳಿದ್ದರು. ಆದರೆ, ಬಿಜೆಪಿಯವರು ಬರೀ ಸುಳ್ಳನ್ನೇ ಹರಿಡುವ ಕೆಲಸ ಮಾಡುತ್ತಿದ್ದಾರೆ. 1947ರಲ್ಲಿ ತಿರಂಗಾ ಒಪ್ಪುವುದಿಲ್ಲ ಎಂದು ಇದೇ ವ್ಯಕ್ತಿ ಹೇಳಿದ್ದರೋ, ಇಲ್ಲವೋ ಎಂದಾದರೂ ಬಿಜೆಪಿಯವರೇ ಹೇಳಲಿ ಎಂದು ಸವಾಲು ಹಾಕಿದರು.

ಬಿಜೆಪಿ ವಿರುದ್ಧ ಒಟ್ಟಾಗಬೇಕು: ‘ಜಾತ್ಯತೀತ ಪಕ್ಷಗಳೆಂದು ಕರೆದುಕೊಳ್ಳುವವರೂ ಹಿಂದು ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕಾಗಿ ಪಕ್ಷಗಳ ನಡುವೆಯೇ ಸ್ಪರ್ಧೆ ಏರ್ಪಟ್ಟಿದೆ. ಕೊನೆಗೆ ಮುಸ್ಲಿಮರು ಎಲ್ಲಿ ಹೋಗುತ್ತಾರೆ ಎಂಬ ಭ್ರಮೆಯಲ್ಲಿ ಇದ್ದಾರೆ. ಆದರೆ, ಬಿಜೆಪಿಯನ್ನು ಸೋಲಿಸಲು ಮುಸ್ಲಿಮರು, ದಲಿತರು, ಹಿಂದುಳಿದ ವರ್ಗದವರು ಒಟ್ಟಾಗಬೇಕಿದೆ ಎಂದು ಓವೈಸಿ ಹೇಳಿದರು.

‘ನಾನು ಕಾಂಗ್ರೆಸ್ ವಿರುದ್ಧ ಮಾತ್ರ ಮಾತನಾಡುತ್ತೇನೆ. ಬಿಜೆಪಿ ವಿರುದ್ಧ ಮಾತನಾಡಲ್ಲ ಎಂಬ ಆರೋಪಗಳಿವೆ. ಆದರೆ, ಸಂಸತ್ತಿನಲ್ಲಿ ಬಿಜೆಪಿ ಸರ್ಕಾರ ಮತ್ತು
ಪ್ರಧಾನಿ ಮೋದಿ ಅವರನ್ನು ಅತಿ ಹೆಚ್ಚು ಟೀಕೆ ಮಾಡುವುದೇ ನಾನು. ಅದೇ ಸಂಸತ್ತಿನಲ್ಲಿ ಮೋದಿಯನ್ನು ಅಪ್ಪಿಕೊಂಡಿದ್ದು ಯಾರು ಎನ್ನುವುದು ಎಲ್ಲರಿಗೂ ಗೊತ್ತಾಗಿದೆ’ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಭೆಯಲ್ಲಿ ಹೈದರಾಬಾದ್ ಶಾಸಕ ಕೌಸರ್ ಮೋಹಿವುದ್ದೀನ್, ಮುಖಂಡರಾದ ಇಲಿಯಾಸ್ ಸೇಠ್, ಸಲೀಂಸಾಬ್, ಮೋಹಿನ್, ಮೊಹಮ್ಮದ್ ಅಜೀಮ್, ಇಕ್ಬಾಲ್ ಅಹ್ಮದ್ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು