ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ನೇ ದಿನ ಪೂರೈಸಿದ ಆಶಾ ಕಾರ್ಯಕರ್ತೆಯರ ಹೋರಾಟ: ಸಂಸದ ಉಮೇಶ ಜಾಧವ್ ಅವರಿಗೆ ಮನವಿ

ಸಂಸದ ಡಾ. ಉಮೇಶ ಜಾಧವ್ ಅವರಿಗೆ ಮನವಿ ಸಲ್ಲಿಸಿದ ಆಶಾ
Last Updated 24 ಜುಲೈ 2020, 16:21 IST
ಅಕ್ಷರ ಗಾತ್ರ

ಕಲಬುರ್ಗಿ: ಮಾಸಿಕ ₹ 12 ಸಾವಿರ ಗೌರವ ಧನ ನೀಡಬೇಕು. ಕೊರೊನಾ ಸೋಂಕಿತರ ಮನೆಗೆ ತೆರಳುವ ಸಂದರ್ಭದಲ್ಲಿ ಸುರಕ್ಷಿತ ಕಿಟ್‌ಗಳನ್ನು ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯಕರ್ತೆಯರು ಕರೆ ನೀಡಿರುವ ಕೆಲಸ ಬಂದ್‌ ಚಳವಳಿ ಶುಕ್ರವಾರ 15ನೇ ದಿನಕ್ಕೆ ಕಾಲಿಟ್ಟಿದ್ದು, ನಗರದಲ್ಲಿ ಸಂಸದ ಡಾ. ಉಮೇಶ ಜಾಧವ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ನಂತರ ಇನ್ನೊಂದು ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಲ್ಲಿಸಲಾಯಿತು.

‌ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಮುಖಂಡ ಎಸ್‌.ಎಂ. ಶರ್ಮಾ, ರಾಜ್ಯ ವ್ಯಾಪಿಯಾಗಿ ಜೂನ್ 30ರಂದು ಮತ್ತು ಕಳೆದ 15 ದಿನಗಳಿಂದ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಮತ್ತು ರಾಜ್ಯದ ಹಲವಾರು ಸಚಿವರು, ಶಾಸಕರಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಮೇಲಿನ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗಿತ್ತು. ಬೇಡಿಕೆಗಳ ಕುರಿತು ಕಳೆದ 4 ದಿನಗಳ ಹಿಂದೆ ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್‌ ಅವರು, ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, 2–3 ದಿನಗಳಲ್ಲಿ ಸರ್ಕಾರದ ಕ್ರಮದ ಬಗ್ಗೆ ತಿಳಿಸುವುದಾಗಿ ಮಾಧ್ಯಮದಲ್ಲಿ ತಿಳಿಸಿರುತ್ತಾರೆ. ನಂತರ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಈ ಬಗ್ಗೆ ಇಲ್ಲ’ ಎಂದರು.

ಈಗಾಗಲೇ ವೈದ್ಯರ ಸಂಬಳವನ್ನು ಹೆಚ್ಚಿಸಲಾಗಿದೆ. ಅದರಂತೆ ಆರೋಗ್ಯ ಕ್ಷೇತ್ರದ ಭಾಗವೇ ಆಗಿರುವ ಆಶಾ ಕಾರ್ಯಕರ್ತೆಯರ ನೆರವಿಗೆ ಸರ್ಕಾರ ಬರಬೇಕು. ಬೇಡಿಕೆ ಈಡೇರುವವರಿಗೂ ಹೋರಾಟ ಸ್ಥಗಿತಗೊಳಿಸುವುದಿಲ್ಲ ಎಂದರು.

ಆಶಾ ಕಾರ್ಯಕರ್ತೆಯರ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಸಂಸದ ಡಾ. ಉಮೇಶ ಜಾಧವ್, ‘ನಿಮ್ಮ ಸಮಸ್ಯೆಗಳ ಬಗ್ಗೆ ನಾನು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಬೇಡಿಕೆಗಳನ್ನು ಈಡೇರಿಸಲು ನಾವು ಯೋಜನೆ ರೂಪಿಸಿದ್ದೇವೆ. ನೀವು ಕೇಳಿದ್ದಕಿಂತಲೂ ಹೆಚ್ಚಿಗೆ ಮಾಡಿದ್ದೇವೆ. ಶೀಘ್ರವೇ ಈ ಬಗ್ಗೆ ಘೋಷಣೆ ಮಾಡುತ್ತಾರೆ ಕಾಯಿರಿ’ ಎಂದರು.

ಹೋರಾಟವನ್ನು ಬೆಂಬಲಿಸಿ ವಿದ್ಯಾರ್ಥಿ ಸಂಘಟನೆ ಎ.ಐ.ಡಿ.ಎಸ್.ಒನ ಜಿಲ್ಲಾ ಕಾರ್ಯದರ್ಶಿ ಈರಣ್ಣ ಇಸಬಾ ಮಾತನಾಡಿದರು. ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ ಎಸ್.ಎಚ್., ರೇವಣಸಿದ್ದ, ನಾಗೇಶ ವಾಡಿ ಬೆಂಬಲಿಸಿದರು.

ಶಿವಲಿಂಗಮ್ಮ ನಂದೂರ ಸೇರಿದಂತೆ ಹಲವು ‘ಆಶಾ’ಗಳು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT