ಗುರುವಾರ , ಆಗಸ್ಟ್ 5, 2021
24 °C
ಮಾರಕಾಸ್ತ್ರಗಳಿಂದ ಹಲ್ಲೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ

ಕೊಲೆ ಯತ್ನ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮಾರಣಾಂತಿಕ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಹೀರಾಪುರ ಕ್ರಾಸ್‌ನ ನಿವಾಸಿ, ಟಂಟಂ ಚಾಲಕನಾದ ಶಿವಕುಮಾರ ರಾಜು ಹೈಬತಿ (22) ಹಾಗೂ ಜಿಲಾನಿ ದರ್ಗಾ ಪ್ರದೇಶದ ನಿವಾಸಿ, ಎಲೆಕ್ಟ್ರಿಷಿಯನ್‌ ಆದ ಮಹಮದ್‌ ಶಾಹಿದ್‌ ತಾಜೋದ್ದಿನ್‌ (21) ಬಂಧಿತರು.

ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಇಬ್ಬರೂ ರಾಮನಗರದ ನಿವಾಸಿ ಸಾಗರ ಮಹಾಂತೇಶ ಬೈರಮಡಗಿ (22) ಎಂಬ ಯುವಕನ ಮೇಲೆ ಹಲ್ಲೆ ಮಾಡಿದ್ದರು. ತೀವ್ರ ಗಾಯಗೊಂಡ ಸಾಗರ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೂನ್‌ 29ರಂದು ರಾತ್ರಿ 11.30ರ ಸುಮಾರಿಗೆ ಸಾಗರ ಹಾಗೂ ಅವರ ಸ್ನೇಹಿತರು ಇಲ್ಲಿನ ಜೇವರ್ಗಿ ರಸ್ತೆಯ ಅಂಡರ್‌ ಬ್ರಿಜ್‌ ಬಳಿ ಹೋಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಆರೋಪಿಗಳು ಏಕಾಏಕಿ ದಾಳಿ ಮಾಡಿದರು. ಮಾರಕಾಸ್ತ್ರಗಳಿಂದ ಸಾಗರ್‌ ಅವರ ಕುತ್ತಿಗೆ, ತಲೆ, ಕೈಗಳಿಗೆ ಹೊಡೆದರು. ತೀವ್ರ ರಕ್ತಸ್ರಾವದಿಂದ ಸಾಗರ ನೆಲಕ್ಕೆ ಬಿದ್ದ ಮೇಲೆ ಪರಾರಿಯಾದರು. ಇದು ಕೊಲೆ ಯತ್ನ ಎಂದು ಸಾಗರ ಅವರ ತಂದೆ ಮಹಾಂತೇಶ ದೂರು ನೀಡಿದ್ದರು.

ನಗರ ಪೊಲೀಸ್‌ ಕಮಿಷನರ್‌ ಸತೀಶಕುಮಾರ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪಿಎಸ್‌ಐ ವಿಜಯಕುಮಾರ, ಇನ್‌ಸ್ಪೆಕ್ಟರ್‌ ಎಲ್‌.ಎಚ್. ಗೌಂಡಿ ಅವರ ತಂಡ ಆರೋಪಿಗಳನ್ನು ಬಂಧಿಸಿದೆ. ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 ಬೈಕ್ ವಶ: ಆರೋಪಿ ಬಂಧನ

ಕಲಬುರ್ಗಿ: ನಗರ ಹಾಗೂ ಜಿಲ್ಲೆಯ ವಿವಿಧೆಡೆ ಬೈಕ್‌ ಕಳವು ಮಾಡಿದ ಆರೋಪಿಯನ್ನು ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ನಗರದ ಬೆಂಡಿ ಬಜಾರ್ ನಿವಾಸಿ ಉಮರ್ ಅಲಿ ಬಂಧಿತ. ಈತನಿಂದ 14 ಬೈಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಕಲಬುರ್ಗಿ ನಗರ ಹಾಗೂ ಶಹಬಾದ್‌ ಪಟ್ಟಣಗಳಲ್ಲಿ ಈ ಬೈಕ್‌ಗಳನ್ನು ಕದ್ದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್‌ ಬಿ.ಅಮರೇಶ, ಪಿಎಸ್‍ಐ ಮಹಾಂತೇಶ ಪಾಟೀಲ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಶಹಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.