ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮಾನವತಾವಾದಿಗೆ ಭಕ್ತಿಪೂರ್ವಕ ನಮನ

ಜಿಲ್ಲಾಡಳಿತ, ವಿವಿಧ ಸಂಘ ಸಂಸ್ಥೆಗಳಿಂದ ಜಗತ್ ವೃತ್ತದಲ್ಲಿರುವ ಬಸವೇಶ್ವರರ ಪ್ರತಿಮೆಗೆ ನಮನ
Last Updated 26 ಏಪ್ರಿಲ್ 2020, 15:26 IST
ಅಕ್ಷರ ಗಾತ್ರ

ಕಲಬುರ್ಗಿ: ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ... ಎಂಬ ವಚನವನ್ನು ಸಾರುವ ಮೂಲಕ ಸರಳ ಆಚರಣೆಯನ್ನು ಬಯಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸರಳವಾಗಿ ಆಚರಿಸಲಾಯಿತು.

ಕೊರೊನಾ ವೈರಸ್‌ ಹರಡುತ್ತಿರುವುದರಿಂದ ರಾಜ್ಯದಾದ್ಯಂತ ಭಾನುವಾರ ಬಸವ ಜಯಂತಿಯನ್ನು ಸರಳವಾಗಿ, ಪರಸ್ಪರ ಅಂತರವನ್ನು ಕಾಯ್ದುಕೊಂಡು ಆಚರಿಸಬೇಕು ಎಂದು ಸರ್ಕಾರ ಸೂಚನೆ ನೀಡಿತ್ತು. ಅದರಂತೆ ಕಲಬುರ್ಗಿಯ ಜಗತ್ ವೃತ್ತದಲ್ಲಿ ಬಸವೇಶ್ವರ ಪ್ರತಿಮೆ ಬಳಿ ಹೆಚ್ಚು ಜನರು ಸೇರದಂತೆ ಜಿಲ್ಲಾಡಳಿತ ಮನವಿ ಮಾಡಿಕೊಂಡಿತ್ತು. ಹೀಗಾಗಿ, ಪ್ರತಿವರ್ಷ ಅದ್ಧೂರಿ ಬಸವ ಜಯಂತಿಗೆ ಹೆಸರಾಗಿದ್ದ ನಗರದಲ್ಲಿ ಎಂದಿನ ಸಂಭ್ರಮ ಕಂಡು ಬರಲಿಲ್ಲ.

ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಪ್ರಿಯಾಂಕ್‌ ಖರ್ಗೆ, ಡಾ.ಅಜಯ್ ಸಿಂಗ್, ದತ್ತಾತ್ರೇಯ ಪಾಟೀಲ ರೇವೂರ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿ ಸೇರಿದಂತೆ ಹಲವರು ಬಸವೇಶ್ವರರ ಪುತ್ಥಳಿಗೆ ನಮನ ಸಲ್ಲಿಸಿದರು.

ಇದಕ್ಕೂ ಮುನ್ನಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಶರತ್ ಬಿ., ಪೊಲೀಸ್‌ ಕಮಿಷನರ್ ಸತೀಶಕುಮಾರ್ ಎನ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ರಾಜಾ ಪಿ, ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಗೋಪಾಲಕೃಷ್ಣ ಅವರು ಬಸವೇಶ್ವರರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.

ಮನೆಗಳಲ್ಲಿ ಬಸವಣ್ಣನ ಸ್ಮರಣೆ: ಬಹಿರಂಗ ಕಾರ್ಯಕ್ರಮಕ್ಕೆ ನಿರ್ಬಂಧ ಇದ್ದುದರಿಂದ ಬಸವಣ್ಣನವರ ಅನುಯಾಯಿಗಳು ತಮ್ಮ ಮನೆಗಳಲ್ಲಿಯೇ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ನಗರದ ವಕೀಲ ಭೀಮನಗೌಡ ಪರಗೊಂಡ, ಬಸವಾನುಯಾಯಿ ಶಿವರಂಜನ್ ಸತ್ಯಂಪೇಟೆ,ಅಶ್ವಿನಿ ಮದನಕರ, ರೇಣುಕಾ ಸಿಂಗೆ ಸೇರಿದಂತೆ ಹಲವರು ಬಸವಣ್ಣನವರ ವಚನಗಳನ್ನು ಓದಿ, ಅದರ ಅರ್ಥವನ್ನು ಪ್ರಸ್ತುತಪಡಿಸಿದರು.

ಆಹಾರ ಧಾನ್ಯ ವಿತರಣೆ: ಬಸವ ಜಯಂತಿ ಅಂಗವಾಗಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ನಗರದಲ್ಲಿ ಬಡಕುಟುಂಬಗಳು ಹಾಗೂ ಪೌರಕಾರ್ಮಿಕರಿಗೆ 500 ಕಿಟ್‌ ಆಹಾರ ಧಾನ್ಯಗಳನ್ನು ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿ ನೇತೃತ್ವದಲ್ಲಿ ವಿತರಿಸಲಾಯಿತು. ಈ ಕಿಟ್‌ನಲ್ಲಿ ಮೂರು ಕಿಲೊ ಜೋಳ, ಮೂರು ಕಿಲೊ ಗೋಧಿ ಹಿಟ್ಟು, ಎರಡು ಕಿಲೊ ಸಕ್ಕರೆ, ಒಂದು ಕಿಲೊ ತೊಗರಿ ಬೇಳೆ ಹಾಗೂ ಒಂದು ಕಿಲೊ ಎಣ್ಣೆಯನ್ನು ಇರಿಸಲಾಗಿದೆ.

ಬೆಳಿಗ್ಗೆಯಿಂದ ಸಂಜೆಯವರೆಗೂ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿ ಬಳಿ ಸಾರ್ವಜನಿಕರು, ವಿವಿಧ ಸಂಘಟನೆಗಳವರು ಪುಷ್ಪಾರ್ಪಣೆ ಮಾಡಿ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT