ಶನಿವಾರ, ಮೇ 28, 2022
26 °C
ಅಖಿಲ ಭಾರತ ಲಿಂಗಾಯತ ಮಹಾಸಭಾ ಉಪನ್ಯಾಸದಲ್ಲಿ ಜೆ.ಎಸ್‌. ಪಾಟೀಲ

ಸ್ವಾತಂತ್ರ್ಯ ಹೋರಾಟದ ಕಹಳೆ ಊದಿದ್ದ ಚನ್ನಮ್ಮ

‍ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಬ್ರಿಟಿಷರ ವಿರುದ್ಧ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಶುರುವಾಯಿತು ಎಂದು ಕೆಲವರು ಇತಿಹಾಸ ತಿರುಚಿ ಬರೆಯುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. 1824ರಲ್ಲೇ ಥ್ಯಾಕರೆ ವಿರುದ್ಧ ಹೋರಾಟಕ್ಕೆ ಇಳಿಯುವ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಕಹಳೆ ಉದಿದ್ದು ಕಿತ್ತೂರು ರಾಣಿ ಚನ್ನಮ್ಮ’ ಎಂದು ವಿಜಯಪುರದ ಚಿಂತಕ ಪ್ರೊ.ಜೆ.ಎಸ್.ಪಾಟೀಲ ಹೇಳಿದರು.

ನಗರದ ಜಗತ್ ವೃತ್ತದಲ್ಲಿ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಬಸವ ಜಯಂತಿ ಪ್ರಯುಕ್ತ ಜಾಗತಿಕ ಲಿಂಗಾಯತ ಮಹಾಸಭಾ, ಕಾಯಕ ಸಮಾಜ ಸಂಘಟನೆಗಳು ಹಮ್ಮಿಕೊಂಡಿರುವ ಸರಣಿ ವಿಚಾರ ಸಂಕಿರಣದಲ್ಲಿ ಭಾನುವಾರ ಅವರು ವಿಶೇಷ ಉಪನ್ಯಾಸ ನೀಡಿದರು.

ಇತಿಹಾಸವನ್ನು ವೇದಗಳ ಕಾಲದಿಂದಲೂ ತಿರುಚಿ ಬರೆಯಲಾಗುತ್ತಿದೆ. ಆರ್ಯರು ದೇಶದ ಜನರನ್ನು ಒಡೆದು ಆಳುವ ಹುನ್ನಾರ ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಭಾವನಾತ್ಮಕವಾಗಿ, ಆಹಾರದ ವಿಷಯ ಹೀಗೆ ಇಲ್ಲದ್ದನ್ನು ತಲೆಗೆ ತುಂಬುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ಯುವ ಸಮುದಾಯ ಚಿಂತನಾ ಶೀಲತೆ ಬೆಳೆಸಿಕೊಂಡು ಇತಿಹಾಸವನ್ನು ಅರಿತುಕೊಳ್ಳಬೇಕು ಎಂದರು.

ಮಾಜಿ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ‘ಲಿಂಗಾಯತ ಎನ್ನುವುದು ಜಾತಿ ಸೂಚಕವಲ್ಲ, ಧರ್ಮ ಸೂಚಕ. ಬಸವಣ್ಣವರು ಸ್ಥಾಪಿಸಿದ ವೈಜ್ಞಾನಿಕ ತಳಹದಿಯ ಧರ್ಮವಾಗಿದೆ. ವೈಚಾರಿಕ ಹೋರಾಟದಲ್ಲಿ ಗೆಲುವು ಸಿಗಲಿದೆ. ಅದಕ್ಕಾಗಿ ನಾವೆಲ್ಲ ತಾಳ್ಮೆಯಿಂದ ಹೋರಾಟವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.

’ವಚನಗಳು ಪ್ರತಿಯೊಬ್ಬರಿಗೂ ಬಲ ತುಂಬುತ್ತವೆ. ಮಾನಸಿಕವಾಗಿ ಗಟ್ಟಿಗೊಳಿಸುತ್ತವೆ. 12ನೇ ಶತಮಾನದಲ್ಲಿಯೇ ಬಸವಾದಿ ಶರಣರು ಕಾಯಕ, ದಾಸೋಹ ಪರಿಕಲ್ಪನೆಯನ್ನು ನೀಡಿದರು. ಲಿಂಗಾಯತರಿಗೆ ಇದು ಹೊಸದಲ್ಲ. ವರ್ಣ ಜತೆಗೆ ವರ್ಗ ವ್ಯತ್ಯಾಸ ಹೋರಾಟವನ್ನು ಬಲಗೊಳಿಸಬೇಕು. ಆಗಲೇ ಏನಾದರೂ ಸಿಗಲಿದೆ’ ಎಂದು ತಿಳಿಸಿದರು.

ನಿವೃತ್ತ ಎಸ್ಪಿ ಎಸ್.ಬಿ.ಸಾಂಬಾ ಮಾತನಾಡಿದರು. ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಆರ್.ಜಿ.ಶೆಟಗಾರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸೋಮಣ್ಣ ನಡಕಟ್ಟಿ, ಬಸವರಾಜ ದಣ್ಣೂರೆ, ರಮೇಶ ಧುತ್ತರಗಿ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಶಿವಶರಣ ಮೋತಕಪಲ್ಲಿ, ಶಂಕ್ರಪ್ಪ ಪಾಟೀಲ, ಈರಣ್ಣ ಹಡಪದ, ಶರಣಬಸಪ್ಪ ನಾಗೂರ, ರಾಜಶೇಖರ ಯಂಕಂಚಿ, ಪ್ರಭುಲಿಂಗ ಮಹಾಗಾಂವಕರ್, ರವೀಂದ್ರ ಶಾಬಾದಿ, ಶರಣು ಕಲ್ಲಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.