ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ದಾಹ ನೀಗಿಸುವ ತಂಪು ಪಾನೀಯ; ಇರಲಿ ಜಾಗ್ರತೆ

ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನ; ಆಯಾಸ ನೀಗಿಸಲು ಕಬ್ಬಿನ ಹಾಲು, ಸೇಬು ಹಣ್ಣಿನ ಜ್ಯೂಸ್‌ಗೆ ಮೊರೆಯಿಟ್ಟ ಜನ
Last Updated 8 ಏಪ್ರಿಲ್ 2022, 5:42 IST
ಅಕ್ಷರ ಗಾತ್ರ

ಕಲಬುರಗಿ: ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಬ್ಬಿನ ಹಾಲು, ಹಣ್ಣಿನ ರಸ ಸೇರಿ ವಿವಿಧ ಬಗೆಯ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಿದೆ. ಮುಖ್ಯರಸ್ತೆಗಳಲ್ಲಿ ಮತ್ತು ವೃತ್ತಗಳಲ್ಲಿ ತಂಪು ಪಾನೀಯ ಅಂಗಡಿಗಳ ಸಂಖ್ಯೆ ದ್ವಿಗುಣಗೊಂಡಿದ್ದು, ದಾಹ ತೀರಿಸಿಕೊಳ್ಳಲು ಪಾನೀಯಕ್ಕೆ ಮೊರೆ ಹೋಗುವವರ ಸಂಖ್ಯೆಯೂ ವೃದ್ಧಿಸಿದೆ.

ಬಿಸಿಲಿನ ತಾಪ ತಾಳದ ಬಹುತೇಕ ಮಂದಿ ಐಸ್‌ವುಳ್ಳ ಕಬ್ಬಿನ ಹಾಲು, ಸೇಬು ಹಣ್ಣಿನ ಪಾನೀಯ ಸೇವಿಸುಸತ್ತಾರೆ. ಕೆಲ ನಿಮಿಷಗಳ ಮಟ್ಟಿಗೆ ಆಯಾಸ ತಣಿದರೆ ಸಾಕೆಂದು ಬಯಸುವ ಅವರು ಪಾನೀಯ ಶುದ್ಧವಾಗಿದೆಯೇ? ಬಳಸಲಾದ ಐಸ್‌ ಗುಣಮಟ್ಟದಿಂದ ಕೂಡಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಗಮನ ಹರಿಸುತ್ತಿಲ್ಲ.

ನಗರದ ಸಂತ್ರಾಸವಾಡಿ ಸೇರಿದಂತೆ ವಿವಿಧೆಡೆ ಇರುವ ಐಸ್‌ ಫ್ಯಾಕ್ಟರಿಗಳಲ್ಲಿ ಸಿದ್ಧಪಡಿಸಲಾಗುವ ಐಸ್‌ನ್ನು ತಂಪು ಪಾನೀಯ ಮಾರಾಟಗಾರರಿಗೆ ಪೂರೈಸಲಾಗುತ್ತದೆ. ಸರಕು ಸಾಗಣೆ ವಾಹನಗಳಲ್ಲಿ
ಐಸ್‌ನ್ನು ಸಾಗಿಸಲಾಗುತ್ತದೆ ಅಲ್ಲದೇ, ಅದರ ಶುಚಿತ್ವಕ್ಕೆ ಆದ್ಯತೆ ನೀಡುವುದು ತುಂಬಾನೇ ಕಡಿಮೆ.

ಆಹಾರ ಮತ್ತು ಪಾನೀಯ ಶುದ್ಧತೆ ಮತ್ತು ಗುಣಮಟ್ಟದಿಂದ ಕೂಡಿರಬೇಕೆಂದು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಾಗ್ಗೆ ಮಾರಾಟಗಾರರಿಗೆ ಸೂಚಿಸುತ್ತಾರೆ. ಬೇಸಿಗೆ ದಿನಗಳಲ್ಲಿ ಹೆಚ್ಚು ಕಾಳಜಿ ತೋರುವಂತೆ ಹೇಳುತ್ತಾರೆ. ಆದರೆ, ಸೂಚನೆ ಪಾಲನೆಯಾಗುವುದು ತುಂಬಾನೇ ಕಡಿಮೆ.

‘ಆಯಾ ದಿನಕ್ಕೆ ಪಾನೀಯ ಮಾರಿದರೆ ಸಾಕು ಎಂಬಂತೆ ಮಾರಾಟಗಾರರು ಪೈಪೋಟಿಯಲ್ಲಿ ಐಸ್‌ ಖರೀದಿಸುತ್ತಾರೆ. ಐಸ್‌ ಯಾವ ಬಣ್ಣದ್ದು ಇದೆ ಮತ್ತು ಯಾವ ನೀರಿನಿಂದ ಸಿದ್ಧಪಡಿಸಲಾಗಿದೆ ಎಂಬುದನ್ನು ಪರೀಕ್ಷಿಸುವುದಿಲ್ಲ. ಶುದ್ಧವ‌ಲ್ಲದ ಐಸ್‌ ಸೇವನೆಯಿಂದ ಜನರಿಗೆ ಅನಾರೋಗ್ಯ ಕಾಡುವ ಸಾಧ್ಯತೆ ಇರುತ್ತದೆ’ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

‘ಉಳಿದ ದಿನಗಳಿಗಿಂತ ಬೇಸಿಗೆ ದಿನಗಳಲ್ಲಿ ಹೆಚ್ಚು ಕಬ್ಬಿನ ಹಾಲು ಮಾರಾಟವಾಗುತ್ತದೆ. ಕೆಲವರು ಹಾಲಿನೊಂದಿಗೆ ಐಸ್‌ ಬಯಸಿದರೆ, ಇನ್ನೂ ಕೆಲವರು ಇಷ್ಟಪಡುವುದಿಲ್ಲ. ಬಹುತೇಕ ಕಬ್ಬಿನ ಹಾಲು ಮಾರಾಟಗಾರರಿಗೆ ಸಂತ್ರಾಸವಾಡಿಯಿಂದಲೇ ಐಸ್‌ ಪೂರೈಕೆಯಾಗುತ್ತದೆ’ ಎಂದು ಕಬ್ಬಿನ ಹಾಲು ಮಾರಾಟಗಾರ ಸುನೀಲ್ ಹೇಳಿದರು.

‘ಸೇಬು ಹಣ್ಣಿನ ರಸ (ಆಪಲ್ ಜ್ಯೂಸ್‌) ₹ 10ರ ದರದಲ್ಲಿ, ಕಬ್ಬಿನ ಹಾಲು ₹ 15 ರಿಂದ ₹ 20ರ ದರದಲ್ಲಿ ಸಿಗುತ್ತದೆ. ಅತ್ಯಂತ ಕಡಿಮೆ ದರದಲ್ಲಿ ಇವು ಲಭ್ಯವಾಗುತ್ತದೆ ಅಲ್ಲದೇ ಆಯಾಸವೂ ತಣಿಯುತ್ತದೆ. ಐಸ್‌ ಗುಣಮಟ್ಟದಿಂದ ಕೂಡಿದೆಯೇ ಅಥವಾ ಇಲ್ಲವೇ ಯೋಚಿಸುವಷ್ಟು ತಾಳ್ಮೆ ಇರುವುದಿಲ್ಲ’ ಎಂದು ನಗರದ ನಿವಾಸಿ ಸಿದ್ದಲಿಂಗ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT