ಮಂಗಳವಾರ, ಆಗಸ್ಟ್ 16, 2022
30 °C

ಕಲಬುರ್ಗಿಯಲ್ಲಿ ‘7ನೇ ಭಾರತೀಯ ಸಂಸ್ಕೃತಿ ಉತ್ಸವ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಭಾರತ ವಿಕಾಸ್‌ ಸಂಗಮ, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ಕಲಬುರ್ಗಿಯ ವಿಕಾಸ ಅಕಾಡೆಮಿ ಆಶ್ರಯದಲ್ಲಿ 2025ರ ಜನವರಿ 29ರಿಂದ ಫೆಬ್ರುವರಿ 6ರವರೆಗೆ ಕಲಬುರ್ಗಿಯಲ್ಲಿ ‘7ನೇ ಭಾರತೀಯ ಸಂಸ್ಕೃತಿ ಉತ್ಸವ’ ಹಮ್ಮಿಕೊಳ್ಳಲಾಗಿದೆ’ ಎಂದು ಭಾರತ ವಿಕಾಸ ಸಂಗಮದ ಸಂಸ್ಥಾಪಕರಾದ ಕೆ.ಎನ್‌. ಗೋವಿಂದಾಚಾರ್ಯ ಹೇಳಿದರು.

‘ಈ ಸಂಸ್ಥೆಯು 2004ರಿಂದ ಸಂಸ್ಕೃತಿ ಉತ್ಸವ ನಡೆಸಿಕೊಂಡು ಬರುತ್ತಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಈ ಉತ್ಸವಗಳನ್ನು ದೇಶದ ಬೇರೆಬೇರೆ ಭಾಗಗಳಲ್ಲಿ ನಡೆಸಲಾಗುತ್ತದೆ. ಮೂರು ವರ್ಷ ಅಧ್ಯಯನ, ಸುತ್ತಾಟ, ಸಂಶೋಧನೆ ಸೇರಿದಂತೆ ನಾನಾ ಮಗ್ಗುಲುಗಳಲ್ಲಿ ಕೆಲಸ ಮಾಡಲಾಗುತ್ತದೆ. ಕಲಬುರ್ಗಿಯು ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರ ಒಳಗೊಂಡ ಕೇಂದ್ರವಾಗಿದ್ದರಿಂದ ಇಲ್ಲಿ ಏಳನೇ ಉತ್ಸವ ನಡೆಸಲಾಗುತ್ತಿದೆ’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಲ್ಯಾಣ ಕರ್ನಾಟಕ ಭಾಗದವರ ಬದುಕಿನ ಸಮಗ್ರ ವಿಕಾಸಕ್ಕಾಗಿ 10 ಕ್ಷೇತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. 1) ಸರ್ಕಾರಿ ಮತ್ತು ಸರ್ಕಾರೇತರ ಯೋಗನೆಗಳು 2) ಶಿಕ್ಷಣ 3) ಕೃಷಿ 4) ಗ್ರಾಮ–ನಗರ– ಪಟ್ಟಣಗಳಲ್ಲಿನ ಆರ್ಥಿಕ ಸ್ಥಿತಿ ಹಾಗೂ ಹಿಂದುಳಿದ ವರ್ಗಗಳ ಸುಸ್ಥಿರ ಅಭಿವೃದ್ಧಿ 5) ಸ್ವ ಉದ್ಯೋಗ ಮತ್ತು ಉದ್ಯೋಗಶೀಲತೆ 6) ಮಹಿಳೆ– ಮಕ್ಕಳು ಮತ್ತು ಸಂಸ್ಕೃತಿ 7) ಆರೋಗ್ಯ 8) ಯುವಶಕ್ತಿ ಮತ್ತು ಅದರ ಸದ್ಬಳಕೆ 9) ಆಪ್ತ ಸಮಾಲೋಚನೆ 10) ಜನಪರ ಸರ್ಕಾರಿ ಯೋಜನೆಗಳ ಪರಿಚಯ... ಇವು ಸಂಸ್ಕೃತಿ ಉತ್ಸವದ ಮುಖ್ಯ ಉದ್ದೇಶಗಳಾಗಿವೆ ಎಂದು ಅವರು ವಿವರಿಸಿದರು.

ಈ ಹತ್ತೂ ಕ್ಷೇತ್ರಗಳ ಪೈಕಿ  ಮೂರು ಕ್ಷೇತ್ರಗಳಲ್ಲಿ ಈಗಾಗಲೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದವರಿಗೆ ವಿಶೇಷ ಪ್ರಶಿಕ್ಷಣ ವರ್ಗ ನಡೆಸಲಾಗುತ್ತಿದೆ. ಉಳಿದ ಏಳು ಪ್ರಶಿಕ್ಷಣ ವರ್ಗಗಳನ್ನು ಬರುವ 2020ರ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ನಡೆಸಲಾಗುವುದು. ಇದರ ಲಾಭ ಪಡೆಯುವ ಯುವಕ– ಯುವತಿಯರು ಸತತ 40 ವರ್ಷಗಳ ಕಾಲ ಸಮಗ್ರ ವಿಕಾಸಕ್ಕಾಗಿ ದುಡಿಯಲಿದ್ದಾರೆ. ಸುಮಾರು 3 ಲಕ್ಷ ಜನರನ್ನು ಇದು ತಲುಪ‍ಲಿದೆ. ಕಲ್ಯಾಣ ಕರ್ನಾಟಕ ಸಮಗ್ರ ವಿಕಾಸಕ್ಕಾಗಿ ಇದೊಂದು ದೊಡ್ಡ ಹೆಜ್ಜೆ ಆಗಲಿದೆ ಎಂದೂ ಅವರು ವಿವರಿಸಿದರು.

ಭಾರತ ವಿಕಾಸ ಸಂಗಮದ ಸಹ ಸಂಚಾಲಕ ಮಾಧವರಡ್ಡಿ, ವಿಕಾಸ ಅಕಾಡೆಮಿ ವಿಶ್ವಸ್ಥ ವಿ.ಶಾಂತರಡ್ಡಿ, ಚಂದ್ರಶೇಖರ ಢವಳಗಿ ಇದ್ದರು.

‘ರೈತರು– ಸರ್ಕಾರದ ಮಧ್ಯೆ ವಿಶ್ವಾಸ ಮೂಡಲಿ’

ಕಲಬುರ್ಗಿ: ‘ಸದ್ಯ ದೇಶದೆಲ್ಲೆಡೆ ರೈತರು ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ನಿಂತಿದ್ದಾರೆ. ರೈತರ ಹಿತಕ್ಕಾಗಿಯೇ ಕಾಯ್ದೆಗಳ ತಿದ್ದುಪಡಿ ಮಾಡಲಾಗಿದೆ ಎಂಬುದು ಸರ್ಕಾರದ ನಿರ್ಧಾರವಾದರೆ; ಅದಕ್ಕೆ ರೈತರು ವಿರೋಧ ವ್ಯಕ್ತ ಮಾಡಲು ಏನು ಕಾರಣ ಎಂಬುದನ್ನು ಕಂಡುಕೊಳ್ಳಬೇಕು. ಸರ್ಕಾರದ ಮೇಲೆ ರೈತರಿಗೆ ಹಾಗೂ ರೈತರ ಮೇಲೆ ಸರ್ಕಾರಕ್ಕೆ ವಿಶ್ವಾಸ ಮೂಡಬೇಕು’ ಎಂದು ಕೆ.ಎನ್‌. ಗೋವಿಂದಾಚಾರ್ಯ ಸಲಹೆ ನೀಡಿದರು.

‘ಸಮರ್ಥ ಆಡಳಿತ ಅಥವಾ ಅಧಿಕಾರ ನಿರ್ವಹಣೆಯ ಮೂಲಕ ರೈತರ ಸಮಸ್ಯೆ ನೀಗಿಸುವ ಮುನ್ನ, ಅವರ ಕೋರಿಕೆಗೆ ಕಾರಣಗಳೇನು ಎಂದು ಅರಿಯಬೇಕು. ಸರ್ಕಾರದ ನಿರ್ಧಾರವೇ ಸರಿಯಾಗಿದ್ದರೆ ರೈತರಲ್ಲಿ ನಂಬಿಕೆ ಮೂಡಿಸಬೇಕು’ ಎಂದೂ ಅವರು ಹೇಳಿದರು.

‘ದೇಶದಲ್ಲಿ 70 ವರ್ಷಗಳಿಂದಲೂ ಸುಸ್ಥಿರ ಅಭಿವೃದ್ಧಿಗೆ ಮನಸ್ಸು ಮಾಡಿಲ್ಲ. ಜನ, ಜಾನುವಾರು, ಜಂಗಲ್‌, ಜಮೀನ್‌, ಜಲ... ಈ ಐದು ಸಂಪತ್ತುಗಳಿಗೆ ಧಕ್ಕೆಯಾಗದಂತೆ ಅಭಿವೃದ್ಧಿ ಬೇಕಾಗಿದೆ. ಮಾನವ ಕೇಂದ್ರಿತ ವಿಕಾಸಕ್ಕಿಂತ ಪ್ರಕೃತಿ ಕೇಂದ್ರಿತ ವಿಕಾಸ ದೊಡ್ಡ ವಿಷಯ. ಅಭಿವೃದ್ಧಿ ನೆಪದಲ್ಲಿ ನಾವು ಕಳೆದ 60 ವರ್ಷಗಳಲ್ಲಿ ದೇಶದ ಶೇ 50ರಷ್ಟು ಜೈವಿಕ ಸಂಪತ್ತನ್ನು ನಾಶ ಮಾಡಿದ್ದೇವೆ. ಇದನ್ನು ಅರಿತು ಮುನ್ನಡೆಯಬೇಕಿದೆ’ ಎಂದೂ ಕಿವಿಮಾತು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು