ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಇನ್ನೂ ಲಭ್ಯವಾಗದ ‘ಭೀಮಾ ಪಲ್ಸ್’ ತೊಗರಿ

ಉತ್ಪಾದನಾ ಘಟಕ ಹಾಗೂ ಉಗ್ರಾಣ ನಿರ್ಮಾಣ ಕಾಮಗಾರಿ ವಿಳಂಬ
ಅಕ್ಷರ ಗಾತ್ರ

ಕಲಬುರಗಿ: ತೊಗರಿಗೆ ಉತ್ತಮ ಬೆಲೆ ನಿಗದಿಪಡಿಸುವ ಮತ್ತು ಗ್ರಾಹಕರಿಗೆ ಉತ್ಕೃಷ್ಟ ತೊಗರಿ ಬೇಳೆ ಒದಗಿಸುವ ಉದ್ದೇಶದಿಂದ ಸರ್ಕಾರವು ‘ಭೀಮಾ ಪಲ್ಸ್‌’ ಎಂಬ ತೊಗರಿ ಬೇಳೆ ಬ್ರ್ಯಾಂಡ್‌ ರೂಪಿಸಿದೆ. ಆದರೆ, ಇದು ಇನ್ನೂ ಮಾರುಕಟ್ಟೆಗೆ ಬಂದಿಲ್ಲ.

ನಗರದ ಹೊರವಲಯದ ಕೋಟನೂರ (ಡಿ) ವ್ಯಾಪ್ತಿಯಲ್ಲಿ 6 ಎಕರೆ ಜಾಗದಲ್ಲಿ ₹ 8 ಕೋಟಿ ವೆಚ್ಚದಲ್ಲಿ ಭೀಮಾ ಪಲ್ಸ್‌ ಬ್ರ್ಯಾಂಡ್‌ ಹೆಸರಿನ ತೊಗರಿ ಬೇಳೆ ಸಂಸ್ಕರಣಾ ಘಟಕ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದೆ. ಪ್ರಸ್ತುತ ರೈತರ ತರಬೇತಿ ಕೇಂದ್ರ ಕಟ್ಟಡದ ಕಾಮಗಾರಿ ಮುಗಿದಿದೆ. ಆದರೆ, ಉತ್ಪಾದನಾ ಘಟಕ ಮತ್ತು ಉಗ್ರಣ ನಿರ್ಮಾಣ ಕಾಮಗಾರಿ ಇನ್ನೂ ಮುಗಿದಿಲ್ಲ.

ಅನುದಾನದ ಕೊರತೆ: ‘ಘಟಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಗೆ ₹ 4.44 ಕೋಟಿ ಅನುದಾನ ಮಂಜೂರಾಗಿದೆ. ಹೆಚ್ಚಿನ ಅನುದಾನದ ರೂಪದಲ್ಲಿ ₹ 3 ಕೋಟಿ ನೀಡುವಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಕೋರಿದ್ದೆವು. ಕೆಕೆಆರ್‌ಡಿಬಿ ನೀಡಿದ ₹ 2.89 ಕೋಟಿ ಅನುದಾನವನ್ನು ನಾವು ಉತ್ಪಾದನಾ ಘಟಕದ ನಿರ್ಮಾಣಕ್ಕೆ ಬಳಸುತ್ತೇವೆ’ ಎಂದು ಮಂಡಳಿಯ ಅಧ್ಯಕ್ಷ ವಿದ್ಯಾಸಾಗರ ಶಾಬಾದಿ ತಿಳಿಸಿದರು.

ಸ್ಪಂದನೆ ಅವಶ್ಯ: ‘ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರತಿ ವರ್ಷ 6 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಉತ್ಕೃಷ್ಟ ಗುಣಮಟ್ಟದ ತೊಗರಿ ಬೆಳೆಯುತ್ತಾರೆ. ಭೌಗೋಳಿಕ ಪ್ರಮಾಣ ಪತ್ರ (ಜಿಯೊಗ್ರಫಿಕಲ್‌ ಇಂಡಿಕೇಷನ್‌ ಟ್ಯಾಗ್‌– ‌GI) ಸಿಕ್ಕಿದೆ. ಇದರಿಂದ ಬೇಡಿಕೆ ಹೆಚ್ಚಿದೆ. ಜಿಐ ಟ್ಯಾಗ್‌ನಡಿ ಹೆಸರು ನೋಂದಾಯಿಸಲು ರೈತರು ಮುಂದೆ ಬರಬೇಕಿದೆ’ ಎಂದು ವಿವರಿಸಿದರು.

ಸಮಿತಿ ರಚನೆ: ‘ಮಾರುಕಟ್ಟೆಯಲ್ಲಿನ ಪ್ರಸ್ತುತ ದರಕ್ಕಿಂತ ಪ್ರತಿ ಕ್ವಿಂಟಲ್‌ಗೆ ₹ 100 ‌ಹೆಚ್ಚು ನೀಡಿ ರೈತರಿ‌ಂದ ತೊಗರಿ ಖರೀದಿಸಿ, ‘ಭೀಮಾ ಪಲ್ಸ್‌’ ಬ್ರ್ಯಾಂಡ್‌ ತೊಗರಿ ಮಾರುಕಟ್ಟೆಗೆ ತರುವ ಚಿಂತನೆ ಇದೆ. ಬೆಲೆ ನಿಗದಿಗಾಗಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳ ತಂಡದ ಸಮಿತಿ ರಚಿಸಲಾಗಿದೆ’ ಎಂದರು.

**

‘ತಾತ್ಕಾಲಿಕ ಘಟಕ ಆರಂಭಿಸಲು ಕ್ರಮ’

ಕೋಟನೂರ (ಡಿ) ಬಳಿ ನಿರ್ಮಿಸಲು ಉದ್ದೇಶಿಸಿರುವ ತೊಗರಿ ಬೇಳೆ ಸಂಸ್ಕರಣಾ ಘಟಕದ ಕಾಮಗಾರಿ ವಿಳಂಬ ಆಗಬಹುದು. ಹೀಗಾಗಿ ಆಳಂದ ರಸ್ತೆಯಲ್ಲಿ ಇರುವ ಕೃಷಿ ಸಂಶೋಧನಾ ಇಲಾಖೆಗೆ ಸೇರಿದ ಸಂಸ್ಕರಣಾ ಘಟಕದಲ್ಲಿ ತಾತ್ಕಾಲಿಕವಾಗಿ ಸಂಸ್ಕರಣಾ ಘಟಕವನ್ನು ಆರಂಭಿಸಿ, 1 ಕೆಜಿ ಹಾಗೂ 5 ಕೆಜಿ ಪ್ಯಾ‌ಕ್‌ನಲ್ಲಿ ‘ಭೀಮಾ ಪಲ್ಸ್‌’ ತೊಗರಿ ಬೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಚಿಂತನೆಯಿದೆ’ ಎಂದು ವಿದ್ಯಾಸಾಗರ ಶಾಬಾದಿ ತಿಳಿಸಿದರು.

1200 ತೊಗರಿ ಬೆಳೆಗಾರರು ಅರ್ಜಿ

‘ಜಿಐ ಪ್ರಮಾಣ ಪತ್ರಕ್ಕಾಗಿ ಕಲಬುರಗಿ, ಯಾದಗಿರಿ ‌ಜಿಲ್ಲೆಗಳಿಂದ 1200 ತೊಗರಿ ಬೆಳೆಗಾರರು ಅರ್ಜಿ ಸಲ್ಲಿಸಿದ್ದು, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಪ್ರಸ್ತುತ 135 ರೈತರ ನೋಂದಣಿಯಾಗಿದೆ. ಅವರಿಂದ ನೇರವಾಗಿ ತೊಗರಿ ಖರೀದಿಸಲಾಗುವುದು. ಆಧಾರ್‌ ಲಿಂಕ್‌ ಮಾಡಿದ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಪಾವತಿ ಮಾಡಲಾಗುತ್ತದೆ‘ ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಆಂಥೋನಿ ಮಾರಿಯಾ ಇಮ್ಯಾನುಯೆಲ್ ತಿಳಿಸಿದ್ದಾರೆ.

**

ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚು ತೊಗರಿ ಬೆಳೆಗಾರರಿದ್ದಾರೆ. ‘ಭೀಮಾ ಪಲ್ಸ್‌’ ಬ್ರ್ಯಾಂಡ್‌ ಹಾಗೂ ಬೆಳೆಗೆ ಉತ್ತಮ ಬೆಲೆ ಪಡೆಯುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ
-ಆಂಥೋನಿ ಮಾರಿಯಾ ಇಮ್ಯಾನುಯೆಲ್, ವ್ಯವಸ್ಥಾಪಕ ನಿರ್ದೇಶಕ, ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ

**

ರೈತರಿಂದ ತೊಗರಿ ಖರೀದಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ₹ 2 ಕೋಟಿ ಅನುದಾನವನ್ನು ಮಂಡಳಿಗೆ ನೀಡಿದ್ದಾರೆ. ಮುಂದಿನ ಕ್ರಮ ಕೈಗೊಳ್ಳುತ್ತೇವೆ

-ವಿದ್ಯಾಸಾಗರ ಶಾಬಾದಿ, ಅಧ್ಯಕ್ಷ, ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT