ಬುಧವಾರ, ಸೆಪ್ಟೆಂಬರ್ 22, 2021
29 °C
ಇದೇ 17ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಚಾಲನೆ: ದತ್ತಾತ್ರೇಯ ಪಾಟೀಲ ಮಾಹಿತಿ

₹ 150 ಕೋಟಿ ವೆಚ್ಚದ ಜಯದೇವ ಆಸ್ಪತ್ರೆ ಕಟ್ಟಡ ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇದೇ 17ರಂದು ನಗರದಲ್ಲಿ ನಡೆಯಲಿರುವ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಂದು ₹ 150 ಕೋಟಿ ವೆಚ್ಚದ 300 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ.

ನಗರದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಶಾಸಕ ಹಾಗೂ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ‘ಈ ಭಾಗದ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಜಯದೇವ ಹೃದ್ರೋಗ ಸಂಸ್ಥೆಗೆ ಸುಸಜ್ಜಿತ ಕಟ್ಟಡ ಸಿದ್ಧವಾಗಲಿದೆ. ಅಲ್ಲದೇ, ಕಲಬುರ್ಗಿ ನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಗೂ ಚಾಲನೆ ನೀಡಲಿದ್ದಾರೆ. ಮಂಡಳಿಯಿಂದ 2013–14ನೇ ಸಾಲಿನಿಂದ 2019–20ನೇ ಸಾಲಿನವರೆಗೆ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತ ವಿಶೇಷ ಕೈಪಿಡಿಯನ್ನು ಬಿಡುಗಡೆ ಮಾಡಲಿದ್ದಾರೆ’ ಎಂದರು.

₹ 1100 ಕೋಟಿಗೆ ಕ್ರಿಯಾಯೋಜನೆ: ಪ್ರಸಕ್ತ ವರ್ಷದಲ್ಲಿ ಮಂಡಳಿಗೆ ಸರ್ಕಾರ ₹ 1100 ಕೋಟಿ ಮೊತ್ತದ ಕ್ರಿಯಾಯೋಜನೆಯನ್ನು ಸಲ್ಲಿಸುವಂತೆ ಸೂಚಿಸಿದೆ. ಮೊದಲ ಕಂತು ₹ 282 ಕೋಟಿ ಈಗಾಗಲೇ ಬಿಡುಗಡೆಯಾಗಿದೆ. ಕೋವಿಡ್ ಇರುವುದರಿಂದ ವಿವಿಧ ಇಲಾಖೆಗಳಿಗೆ ದೊರೆಯುತ್ತಿದ್ದ ಅನುದಾನ ಕಡಿತವಾಗಿದೆ. ಆದಾಗ್ಯೂ, ಮೊದಲ ಹಂತದಲ್ಲಿ ನಾವು ಎಷ್ಟು ಮೊತ್ತಕ್ಕೆ ಕ್ರಿಯಾ ಯೋಜನೆ ಸಲ್ಲಿಸುತ್ತೇವೆಯೋ ಅಷ್ಟೂ ಹಣ ಬರಲಿದೆ. ಇದರಲ್ಲಿ ಯಾವುದೇ ಸಂದೇಹ ಬೇಡ. ಹೆಚ್ಚುವರಿ ಅನುದಾನವನ್ನು ಕೊಡುವುದಿಲ್ಲ ಎಂದು ಸರ್ಕಾರ ಹೇಳಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕೊರೊನಾ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ತುರ್ತು ವೈದ್ಯಕೀಯ ಸೇವೆಗಾಗಿ ಕಲಬುರ್ಗಿ ವಿಭಾಗದ ಆರು ಜಿಲ್ಲೆಗಳಿಗೆ ಶೀಘ್ರವೇ ಎ.ಎಲ್‌.ಎಸ್. ಆಂಬುಲೆನ್ಸ್‌ಗಳನ್ನು ಒದಗಿಸಲು ₹ 25 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೇ, ಮಂಡಳಿಯಿಂದ ನಗರದಲ್ಲಿ ಸುಮಾರು 60 ಎಕರೆ ಜಮೀನಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಕೀರ್ಣ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಅದು ಪೂರ್ಣಗೊಂಡ ಬಳಿಕ ವಿಮೋಚನಾ ದಿನಾಚರಣೆಯನ್ನು ಅಲ್ಲಿಯೇ ಆಯೋಜಿಸುವ ಉದ್ದೇಶವಿದೆ ಎಂದು ದತ್ತಾತ್ರೇಯ ಪಾಟೀಲ ಹೇಳಿದರು.

17ರಂದು ಮುಖ್ಯಮಂತ್ರಿ ನಗರಕ್ಕೆ

ಕಲಬುರ್ಗಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇದೇ 17ರಂದು ಬೆಳಿಗ್ಗೆ 7ಕ್ಕೆ ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊರಟು ಅಂದು ಬೆಳಿಗ್ಗೆ 8.15ಕ್ಕೆ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು.

ಬೆಳಿಗ್ಗೆ 8.30ಕ್ಕೆ ನಗರದ ಎಸ್.ವಿ.ಪಿ. ವೃತ್ತದಲ್ಲಿ ಸರದಾರ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡುವರು. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಅಂದು ಬೆಳಿಗ್ಗೆ 9ಕ್ಕೆ ಕಲಬುರ್ಗಿ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸುವರು. ನಂತರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಬೆಳಿಗ್ಗೆ 11ಕ್ಕೆ ಗಂಟೆಗೆ ಕಲಬುರ್ಗಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

‘ಬಿಡಿಎ ನಿವೇಶನದ ಮಂಜೂರಾತಿ ಪತ್ರ ಹಂಚಿಕೆ’

ಕಲ್ಯಾಣ ಕರ್ನಾಟಕ ಹಾಗೂ ರಾಜ್ಯದ ಉತ್ತರ ಭಾಗದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬೆಂಗಳೂರಿಗೆ ತೆರಳುವ ಅಭ್ಯರ್ಥಿಗಳಿಗೆ ವಸತಿ ಸೌಕರ್ಯ ಕಲ್ಪಿಸುವ ಸಲುವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 30 ಗುಂಟೆ ನಿವೇಶನದ ಮಂಜೂರಾತಿ ಪತ್ರವನ್ನು ಇದೇ 17ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಳಿಗೆ ಹಂಚಿಕೆ ಮಾಡಲಿದ್ದಾರೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದವರು ಮಂಡಳಿಯ ವಸತಿ ನಿಲಯದಲ್ಲಿ ಕಡಿಮೆ ಖರ್ಚಿನಲ್ಲಿ ಅಧ್ಯಯನ ಮುಂದುವರಿಸಬಹುದಾಗಿದೆ ಎಂದು ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು