ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ: ಎಚ್.ಡಿ. ಕುಮಾರಸ್ವಾಮಿ

Last Updated 25 ಫೆಬ್ರುವರಿ 2021, 6:33 IST
ಅಕ್ಷರ ಗಾತ್ರ

ಕಲಬುರ್ಗಿ: ಬಿಜೆಪಿ ‌ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಲ್ಯಾಣ ‌ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ‌ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ನಗರದ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರಿನಲ್ಲಿ ಆರಂಭವಾಗಬೇಕಿದ್ದ ಐಐಟಿ ಧಾರವಾಡಕ್ಕೆ ಹೋದರೆ, ಕಲಬುರ್ಗಿಯ ಇಎಸ್ಐಸಿ ಆಸ್ಪತ್ರೆಯಲ್ಲಿ ಆರಂಭವಾಗಬೇಕಿದ್ದ ಅಖಿಲ ಭಾರತ ವೈದ್ಯಕೀಯ ‌ವಿಜ್ಞಾನ ಸಂಸ್ಥೆಯನ್ನು ಇದೀಗ ಹುಬ್ಬಳ್ಳಿಗೆ ಮಂಜೂರು ಮಾಡಲಾಗಿದೆ ಎಂದರು‌.

ಹೈದರಾಬಾದ್ ಕರ್ನಾಟಕ ‌ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಿಸಿದರೆ ಸಾಲದು. ಅಭಿವೃದ್ಧಿಗೆ ಹಣವನ್ನೂ ನೀಡಬೇಕು. ಆದರೆ ದುರದೃಷ್ಟವಶಾತ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಕಾಳಜಿ ಇಲ್ಲ ಎಂದರು‌.

'ನಾನು ಮುಖ್ಯಮಂತ್ರಿ ಅಗಿದ್ದ ಅವಧಿಯಲ್ಲಿ ರಾಯಚೂರು, ಯಾದಗಿರಿ ಹಾಗೂ ಬೀದರ್ ಜಿಲ್ಲೆಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದೇನೆ. ರೈತರ ಸಾಲಮನ್ನಾಕ್ಕೆ ₹25 ಸಾವಿರ ಕೋಟಿ ತೆಗೆದಿಟ್ಟಿದ್ದೆ. ಆದರೆ ಬಿಜೆಪಿ ಸರ್ಕಾರ ಅದರಲ್ಲಿ ₹10 ಸಾವಿರ ಕೋಟಿಯನ್ನು ಹಿಂದಕ್ಕೆ ಪಡೆದು ರೈತರಿಗೆ ದ್ರೋಹ ಬಗೆದಿದೆ' ಎಂದರು.

ಸಮಾನ ಹೋರಾಟ: ಮುಂಬರುವ ಮಸ್ಕಿ, ಬಸವ ಕಲ್ಯಾಣ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಜೆಡಿ ಎಸ್ ನಿಂದ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ. ಬಿಜೆಪಿ ಹಾಗೂ ಕಾಂಗ್ರೆಸ್ ನೊಂದಿಗೆ ಚುನಾವಣೆಯನ್ನು ಸಮಾನ ಹೋರಾಟ ನಡೆಸಲಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಡೋಂಗಿ ಪಕ್ಷಗಳು: ಬಿಜೆಪಿಯು ಹಿಂದುತ್ವ ಹಾಗೂ ಕಾಂಗ್ರೆಸ್ ಜಾತ್ಯತೀತತೆ ತಮ್ಮ ಸಿದ್ದಾಂತಗಳು ‌ಎಂದು ಹೇಳಿಕೊಳ್ಳುತ್ತಿವೆ. ಆದರೆ, ಈ ಸಿದ್ಧಾಂತಗಳ ಬಗ್ಗೆ ಎರಡೂ ಪಕ್ಷಗಳಿಗೆ ಯಾವ ಒಲವೂ ಇಲ್ಲ. ಇವೆರಡೂ ಡೋಂಗಿ ಪಕ್ಷಗಳು ‌ಎಂದು ಜರಿದರು.

ಮೋದಿ ಅವರಿಗೆ ಟೀಕಿಸುವ ನೈತಿಕತೆ ಇಲ್ಲ: ಪ್ರಧಾನಿ ನರೇಂದ್ರ ‌ಮೋದಿ ಅವರು ಪಶ್ಚಿಮ ‌ಬಂಗಾಳ ಸರ್ಕಾರ ಭ್ರಷ್ಟಾಚಾರದಲ್ಲಿ‌ ಮುಳುಗಿದೆ ಎಂದು ಟೀಕಿಸಿದ್ದಾರೆ. ಆದರೆ ವಿಜಯಪುರದ ಅವರದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಮಗೆ ಪಕ್ಷ ‌ನೀಡಿದ ನೋಟಿಸ್ ಗೆ ಪ್ರತಿಕ್ರಿಯೆಯಾಗಿ 11 ಪುಟಗಳ ಪತ್ರ ಬರೆದು ರಾಜ್ಯದಲ್ಲಿ ‌ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಉಲ್ಲೇಖಿಸಿದ್ದಾರೆ‌. ಆ ಪತ್ರದ ಆಧಾರದ ಮೇಲೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳದ ಮೋದಿ ಅವರಿಗೆ ಪಶ್ಚಿಮ ‌ಬಂಗಾಳ ಸರ್ಕಾರದ ಭ್ರಷ್ಟಾಚಾರ ಟೀಕಿಸಲು ಯಾವ ನೈತಿಕತೆ ಇದೆ ಎಂದು ‌ಪ್ರಶ್ನಿಸಿದರು‌.

ಸಿದ್ದರಾಮಯ್ಯ ಉಡಾಫೆ: ಜೆಡಿಎಸ್ ರಾಜಕೀಯ ‌ಪಕ್ಷವೇ ಅಲ್ಲವೆಂದು ‌ಸಿದ್ದರಾಮಯ್ಯ ಅವರು ಉಡಾಫೆ ಮಾತನಾಡಿದ್ದರು. ಅದಕ್ಕೇ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ‌ನಮ್ಮ ಶಕ್ತಿ ತೋರಿಸಬೇಕಾಯಿತು. ಕಾಂಗ್ರೆಸ್ ‌ಶಾಸಕ ತನ್ವೀರ್ ಸೇಠ್ ಅವರು ನನ್ನನ್ನು ಭೇಟಿ ‌ಮಾಡಿ‌ ಮನವಿ ಮಾಡಿದ್ದರಿಂದ ಸ್ಥಳೀಯವಾಗಿ ಮೈತ್ರಿಗೆ ಒಪ್ಪಿಕೊಂಡೆ ಎಂದರು.

ಜಾತಿ ಸಂಘರ್ಷಕ್ಕೆ ಅವಕಾಶ ‌ಬೇಡ: ಮೀಸಲಾತಿ ಹೆಸರಿನಲ್ಲಿ ಸರ್ಕಾರ ಅನಗತ್ಯವಾಗಿ ಜಾತಿ ಸಂಘರ್ಷಕ್ಕೆ ಎಡೆ ಮಾಡಿಕೊಡಬಾರದು. ಸರ್ಕಾರ ಸ್ವಾಮೀಜಿಗಳನ್ನು ಪಾದಯಾತ್ರೆ ಮಾಡಲು ಹಚ್ಚಬಾರದಿತ್ತು. ತಕ್ಷಣ ಸಮುದಾಯದ ಮುಖಂಡರನ್ನು ಕರೆದು ಬಗೆಹರಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ‌ಬಂಡೆಪ್ಪ ಕಾಶೆಂಪೂರ, ಜೆಡಿಎಸ್ ಕಲಬುರ್ಗಿ ಜಿಲ್ಲಾ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಮುಖಂಡ ನಾಸಿರ್ ಹುಸೇ‌ನ್, ಶಿವಕುಮಾರ್ ನಾಟೀಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT