ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ತಪ್ಪಿದ ಕಾಂಗ್ರೆಸ್‌ ಸರ್ಕಾರ: ಸಚಿವ ಭಗವಂತ ಖೂಬಾ

Published 9 ಜುಲೈ 2023, 15:47 IST
Last Updated 9 ಜುಲೈ 2023, 15:47 IST
ಅಕ್ಷರ ಗಾತ್ರ

ಆಳಂದ:‘ವಿಧಾನಸಭೆ ಚುನಾವಣೆಯಲ್ಲಿ ಜನತೆಗೆ ನೀಡಿದ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದು ಎರಡು ತಿಂಗಳಾದರೂ ಅನುಷ್ಠಾನಕ್ಕೆ ತರದ ಕಾಂಗ್ರೆಸ್‌ ಸರ್ಕಾರವು ಕೊಟ್ಟ ಮಾತಿಗೆ ತಪ್ಪಿದೆ’ ಎಂದು ಕೇಂದ್ರ ರಸಾಯನಿಕ ಹಾಗೂ ರಸಗೊಬ್ಬರ ಸಚಿವ ಭಗವಂತ ಖೂಬಾ ಆಪಾದಿಸಿದರು.

ಪಟ್ಟಣದ ಆರ್ಯಸಮಾಜ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಳಂದ ಮಂಡಲ ಬಿಜೆಪಿ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಸುಳ್ಳು ಹೇಳಿದ ಕಾಂಗ್ರೆಸ್‌ ಪಕ್ಷಕ್ಕೆ ಜನತೆ ತಕ್ಕಪಾಠ ಕಲಿಸಲಿದ್ದಾರೆ. ಬಿಜೆಪಿ ಕಾರ್ಯಕರ್ತರು ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು 3ನೇ ಬಾರಿಗೆ ಪ್ರಧಾನಿ ಮಾಡುವ ಸಂಕಲ್ಪದಿಂದ ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದರು.

ಕೇಂದ್ರದ ಬಿಜೆಪಿ ಸರ್ಕಾರದ ಹಲವು ಸೌಲಭ್ಯಗಳು ದೇಶದ 81 ಕೋಟಿ ಜನರಿಗೆ ತಲುಪಿವೆ, ಗ್ರಾಮೀಣ ಜನರಿಗಾಗಿ ಜೆಜೆಎಂ, ಆರೋಗ್ಯ ವಿಮೆ, ರೈತರಿಗಾಗಿ ಪಸಲು ಬಿಮಾ ಯೋಜನೆ, ಮುದ್ರಾ ಯೋಜನೆ, ಶೌಚಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ಕೇಂದ್ರ ಸರ್ಕಾರದ ಸಾಧನೆ ಮಾಡಿದೆ ಎಂದರು.

ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ ಮಾತನಾಡಿ,‘ಬಿಜೆಪಿಯು ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದರೂ ಕಾಂಗ್ರೆಸ್‌ ಅಪಪ್ರಚಾರದಿಂದ ಪಕ್ಷಕ್ಕೆ ಸೋಲಾಗಿದೆ, ಕಾರ್ಯಕರ್ತರೂ ಎದೆಗುಂದದೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಬಲಪಡಿಸಲು ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಸಿದ್ಧರಾಗಲು ತಿಳಿಸಿದರು.

ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ತಾಲ್ಲೂಕಾಧ್ಯಕ್ಷ ಆನಂದ ಪಾಟೀಲ, ಮುಖಂಡ ವಿದ್ಯಾಸಾಗರ ಕುಲಕರ್ಣಿ ಮಾತನಾಡಿದರು.

ಮುಖಂಡರಾದ ವಿಠಲರಾವ ಪಾಟೀಲ, ಸಂಜಯ ಮೀಸ್ಕೀನ್‌, ಗೌರಿ ಚಿಚಕೋಟಿ, ಸುಜ್ಞಾನಿ ಪೊದ್ದಾರ, ಲಿಂಗರಾಜ ಬಿರಾದಾರ, ಸಂತೋಷ ಹಾದಿಮನಿ, ಮಹಾಂತಪ್ಪ ಪಾಟೀಲ ವೇದಿಕೆಯಲ್ಲಿ ಇದ್ದರು.

ಮಂಡಲ ಕಾರ್ಯದರ್ಶಿ ಶರಣು ಕುಮಸಿ ನಿರೂಪಿಸಿದರು. ತಾಲ್ಲೂಕಿನ ವಿವಿಧೆಡೆಯಿಂದ ಬಿಜೆಪಿ ಮುಖಂಡರು ಹಾಗೂ ಕಾರ್ಯಕಾರಣಿ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT