ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆ: ಚುಕ್ಕಾಣಿ ಹಿಡಿಯಲು ಬಿಜೆಪಿ ‘ಸರ್ವ’ಪ್ರಯತ್ನ

27 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್; ಜೆಡಿಎಸ್‌ ನಿರ್ಣಾಯಕ
Last Updated 7 ಸೆಪ್ಟೆಂಬರ್ 2021, 4:20 IST
ಅಕ್ಷರ ಗಾತ್ರ

ಕಲಬುರ್ಗಿ: ಕಳೆದ ಬಾರಿ ಬಿಜೆಪಿ, ಕೆಜೆಪಿ, ಜೆಡಿಎಸ್‌ ಮಧ್ಯೆ ಹರಿದು ಹಂಚಿ ಹೋಗಿದ್ದ ಶಕ್ತಿ ಈ ಬಾರಿ ಬಿಜೆಪಿಯೊಂದರಲ್ಲೇ ಸಮ್ಮಿಲನಗೊಂಡಿದ್ದರಿಂದ 55 ಸ್ಥಾನಗಳ ಪೈಕಿ 23 ಸ್ಥಾನಗಳನ್ನು ಗಳಿಸಿರುವ ಬಿಜೆಪಿ, ಎರಡನೇ ಸ್ಥಾನದಲ್ಲಿದ್ದರೂ ಅಧಿಕಾರ ಹಿಡಿಯಲು ಪ್ರಯತ್ನ ಆರಂಭಿಸಿದೆ.

ಬೆಳಿಗ್ಗೆ 8ಕ್ಕೆ ಆರಂಭವಾದ ಮತ ಎಣಿಕೆಯ ಮೊದಲಾರ್ಧದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದರು. ಬಿಜೆಪಿ ಬರೀ 15ರಿಂದ 18 ಸ್ಥಾನಗಳಿಗೆ ಸೀಮಿತವಾಗಬಹುದು. ಈ ಬಾರಿ ಕಣಕ್ಕಿಳಿದಿದ್ದ ಎಐಎಂಐಎಂ ಹಾಗೂ ಆಮ್‌ ಆದ್ಮಿ ಪಕ್ಷಗಳು ಏನಾದರೂ ಮ್ಯಾಜಿಕ್ ಮಾಡುವ ಮೂಲಕ ಕಾಂಗ್ರೆಸ್‌, ಬಿಜೆಪಿಗೆ ಮುಳುವಾಗಬಹುದು ಎಂಬ ಲೆಕ್ಕಾಚಾರಗಳೆಲ್ಲ ಹುಸಿಯಾದವು. ಕ್ರಮೇಣ ತನ್ನ ಬಲವನ್ನು ಹೆಚ್ಚಿಸಿಕೊಂಡ ಬಿಜೆಪಿ ಅಂತಿಮವಾಗಿ 23 ಸ್ಥಾನಗಳನ್ನು ಗಳಿಸಿತು. ಕಾಂಗ್ರೆಸ್‌ ತನ್ನ ವೀರೋಚಿತ ಹೋರಾಟದಿಂದ 27 ಸ್ಥಾನಗಳನ್ನು ಪಡೆಯುವ ಮೂಲಕ ಕಲಬುರ್ಗಿಯಲ್ಲಿ ತಾನು ಇನ್ನೂ ಪ್ರಬಲ ಎಂಬುದನ್ನು ಸಾಧಿಸಿತು.

ಕೇಂದ್ರ ಸಚಿವರು, ಸ್ವತಃ ನಗರಾಭಿವೃದ್ಧಿ ಸಚಿವ ಸೇರಿದಂತೆ ನಾಲ್ಕೈದು ಜನ ಸಚಿವರು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಪ್ರಚಾರ ಹಾಗೂ ರಾಜ್ಯ ಉಪಾಧ್ಯಕ್ಷ ಹಾಗೂ ಪ್ರಧಾನಿ ಕಾರ್ಯದರ್ಶಿ, ನಾಲ್ಕೈದು ಸ್ಥಳೀಯ ಶಾಸಕರು ನಿರಂತರ ಪ್ರಚಾರದ ಭರಾಟೆಯ ಮಧ್ಯೆಯೂ ಬಿಜೆಪಿ 23 ಸ್ಥಾನಗಳನ್ನು ಪಡೆದಿದ್ದು ಆ ಪಕ್ಷದಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿದ್ದು ಸುಳ್ಳಲ್ಲ. ಪ್ರಚಾರದ ವೇಳೆ ಮಾತನಾಡಿದ್ದ ಬಹುತೇಕ ನಾಯಕರು 30ರಿಂದ 39 ಸ್ಥಾನಗಳನ್ನು ಪಡೆಯಲಿದೆ ಎಂದೇ ಹೇಳಿದ್ದರು.

‘ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ಸಾಮೂಹಿಕ ನಾಯಕತ್ವದ ಬದಲು ಶಾಸಕರೊಬ್ಬರು ಹಟ ಹಿಡಿದು ತಮ್ಮ ಕೆಲ ಹಿಂಬಾಲಕರಿಗೆ ಕೊಡಿಸಿದ್ದು ಮುಳುವಾಯಿತು’ ಎಂದು ಬಿಜೆಪಿ ನಾಯಕರೇ ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ಬಿಜೆಪಿಯಿಂದ ಟಿಕೆಟ್ ಕೇಳಿದ್ದ ವಿಶಾಲ್ ನವರಂಗ್ ಅವರ ಬದಲು ಲಕ್ಷ್ಮಣ ಮೂಲಭಾರತಿ ಅವರಿಗೆ ನೀಡಲಾಗಿತ್ತು. ಲಕ್ಷ್ಮಣ ಪರಾಭವಗೊಂಡು ವಿಶಾಲ್ ಗೆಲುವಿನ ನಗೆ ಬೀರಿದರು.

ಇದೇ ಪರಿಸ್ಥಿತಿ ಕಾಂಗ್ರೆಸ್‌ನಲ್ಲಿಯೂ ಇದೆ. ಜೆಡಿಎಸ್‌ ಟಿಕೆಟ್‌ ಮೇಲೆ ಗೆದ್ದ ಅಲಿಮುದ್ದೀನ್‌ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಹೀಗಾಗಿ, ಅವರು ಬೇರೆ ಪಕ್ಷ ಆಯ್ಕೆ ಮಾಡಿಕೊಂಡು ಗೆಲುವು ಸಾಧಿಸಿದರು.

ಕಾಂಗ್ರೆಸ್‌ ಅಭ್ಯರ್ಥಿಗಳು ಹಾಗೂ ನಾಯಕರು ಕ್ಷೇತ್ರದಲ್ಲಿ ಇನ್ನಷ್ಟು ಬೆವರು ಸುರಿಸಿದ್ದರೆ ನಾಲ್ಕೈದು ಸೀಟುಗಳನ್ನು ಅನಾಯಾಸವಾಗಿ ಗೆಲ್ಲಬಹುದಿತ್ತು. ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಸಂಜಯ್ ಮಾಕಲ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲ್ಲುವ ಭರವಸೆ ಮೂಡಿಸಿದ್ದರಾದರೂ ಕೇವಲ 10 ಮತಗಳ ಅಂತರದಿಂದ ಪರಾಭವಗೊಂಡರು. ಇಲ್ಲಿ ಶಾಸಕರ ಆಪ್ತ ವಿಶಾಲ ದರ್ಗಿ ಗೆಲುವು ಸಾಧಿಸಿದರು.

ಅಧಿಕಾರಕ್ಕೆ ಬರಲು ಎಷ್ಟು ಸೀಟು ಬೇಕು?

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೇ ಇದ್ದುದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ಜೆಡಿಎಸ್‌ನ ನಾಲ್ವರು ಅಭ್ಯರ್ಥಿಗಳು ಕಿಂಗ್‌ ಮೇಕರ್‌ ಆಗಲಿದ್ದಾರೆ.

ಬಹುಮತ ಪಡೆಯಲು 32 ಸ್ಥಾನಗಳು ಬೇಕು. 27 ಸ್ಥಾನ ಪಡೆದಿರುವ ಕಾಂಗ್ರೆಸ್‌ಗೆ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಶಾಸಕಿ ಕನೀಜ್ ಫಾತಿಮಾ ಅವರ ಮತಗಳು ಸೇರಿದರೆ 29 ಸ್ಥಾನಗಳಾಗುತ್ತವೆ.ವಿಧಾನ ಪರಿಷತ್‌ ಸದಸ್ಯ ಚಂದ್ರಶೇಖರ ಪಾಟೀಲ ಹುಮನಾಬಾದ್‌ ಅವರ ಮತವನ್ನೂ ಇಲ್ಲಿಗೇ ಸ್ಥಳಾಂತರಿಸಿ ಪಾಲಿಕೆಯಲ್ಲಿ ತನ್ನ ಬಲ 30ಕ್ಕೆ ತಲುಪಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

ಗೆಲುವಿನ ಗುರಿ ತಲುಪಬೇಕೆಂದರೆ ಜೆಡಿಎಸ್‌ನ ನಾಲ್ವರು ಶಾಸಕರ ಬೆಂಬಲ ಬೇಕೇ ಬೇಕು.

23 ಸ್ಥಾನಗಳನ್ನು ಪಡೆದಿರುವ ಬಿಜೆಪಿ ಸಂಸದ ಡಾ. ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ವಿಧಾನಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಬಿ.ಜಿ. ಪಾಟೀಲ ಹಾಗೂ ಸುನೀಲ ವಲ್ಯಾಪುರೆ ಹಾಗೂ ಪಕ್ಷೇತರ ಸದಸ್ಯನ ಬೆಂಬಲ ಸಿಕ್ಕರೂ 30 ಸ್ಥಾನಗಳಾಗುತ್ತವೆ. ಹಾಗಾಗಿ, ಇವರೂ ಜೆಡಿಎಸ್‌ನ ಮನವೊಲಿಸುವುದು ಅಗತ್ಯ.

ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಬಿಜೆಪಿ ವರಿಷ್ಠರು ಕಂದಾಯ ಸಚಿವ ಆರ್‌. ಅಶೋಕ ಮೂಲಕ ಎಚ್‌.ಡಿ.ಕುಮಾರಸ್ವಾಮಿ ಅವರ ಮನವೊಲಿಕೆಗೆ ಮುಂದಾಗಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್‌ ಬೆಂಬಲ ಬೇಡ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT