ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೆಲ್ಲಿಸಲು ಮಾತ್ರ ಬೇಕು; ಮಂತ್ರಿ ಸ್ಥಾನ ಬೇಡವೇ?’

ಬಿಜೆಪಿಯ ನಿರ್ಮಲಕುಮಾರ್ ಸುರಾನ, ರವಿಕುಮಾರ್‌ಗೆ ಪ್ರಶ್ನೆಗಳ ಸುರಿಮಳೆ
Last Updated 17 ಆಗಸ್ಟ್ 2021, 1:22 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಸತತವಾಗಿ ಗೆಲ್ಲಿಸಿಕೊಳ್ಳಲು ಮಾತ್ರ ನಾವು. ಆದರೆ, ಜಿಲ್ಲೆಯವರಿಗೆ ಸಚಿವ ಸ್ಥಾನ ಕೊಡುವುದಿಲ್ಲವೆಂದರೆ ಹೇಗೆ? ಒಬ್ಬರೂ ಸಚಿವರನ್ನು ಮಾಡದಿದ್ದ ಮೇಲೆ ಯಾವ ಮುಖವಿಟ್ಟುಕೊಂಡು ನಾವು ಪಾಲಿಕೆ ಚುನಾವಣೆಯಲ್ಲಿ ಮತದಾರರ ಬಳಿ ತೆರಳಬೇಕು’ ಎಂದು ಕಾರ್ಯಕರ್ತರು ಪಕ್ಷದ ರಾಜ್ಯಮಟ್ಟದ ಮುಖಂಡರ ಎದುರು ಆಕ್ರೋಶ ಹೊರಹಾಕಿದ ಪ್ರಸಂಗ ಸೋಮವಾರ ನಡೆಯಿತು.

ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆಯ ಉಸ್ತುವಾರಿಗಳಾದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲಕುಮಾರ್ ಸುರಾನಾ ಹಾಗೂ ವಿಧಾನಪರಿಷತ್ ಸದಸ್ಯರೂ ಆದ ‍ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್‌ ಅವರು ನಗರದಲ್ಲಿ ಸಭೆ ನಡೆಸುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಪಕ್ಷದ ಮುಖಂಡರಾದ ದಿವ್ಯಾ ಹಾಗರಗಿ, ಸಂಗಮೇಶ ನಾಗನಹಳ್ಳಿ ಹಾಗೂ ಮಂಜುರೆಡ್ಡಿ ಮತ್ತಿತರರು, ‘ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಂಡು ಬರುವುದಷ್ಟೇ ಜಿಲ್ಲೆಯ ಕಾರ್ಯಕರ್ತರ ಕೆಲಸವಾಗಿದೆ. ಉಮೇಶ ಜಾಧವ ಅವರನ್ನು ಲೋಕಸಭೆಯಲ್ಲಿ ಚುನಾಯಿಸಿದರೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದಿರಿ. ಆ ಭರವಸೆ ಹುಸಿಯಾಯಿತು. ಜಿಲ್ಲೆಯಲ್ಲಿ ಐವರು ಶಾಸಕರು, ಮೂವರು ವಿಧಾನಪರಿಷತ್ ಸದಸ್ಯರಿದ್ದರೂ ಒಬ್ಬರಿಗೂ ಸಚಿವ ಸ್ಥಾನ ಏಕೆ ಕೊಟ್ಟಿಲ್ಲ. ಪಕ್ಕದ ಬೀದರ್‌ ಸಣ್ಣ ಜಿಲ್ಲೆಯಾದರೂ ಅಲ್ಲಿ ಒಬ್ಬರು ಕೇಂದ್ರ ಹಾಗೂ ಮತ್ತೊಬ್ಬರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಇಷ್ಟೊಂದು ತಾರತಮ್ಯ ಏಕೆ’ ಎಂದು ಏರುದನಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಸಭೆಯಲ್ಲಿದ್ದ ಬಹುತೇಕ ಕಾರ್ಯಕರ್ತರು ಧ್ವನಿಗೂಡಿಸಿದರು ಎಂದು ಸಭೆಯಲ್ಲಿದ್ದ ಮುಖಂಡರೊಬ್ಬರು ತಿಳಿಸಿದರು.

ಇದರಿಂದ ಮುಜುಗರಕ್ಕೊಳಗಾದ ಮುಖಂಡರು, ಮುಂದಿನ ಸಂಪುಟ ವಿಸ್ತರಣೆ ವೇಳೆ ಜಿಲ್ಲೆಗೆ ಪ್ರಾತಿನಿಧ್ಯ ಕೊಡಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಸಭೆ ಮುಂದುವರಿಯಿತು.

ಇದೆಲ್ಲ ಆಗುತ್ತಿರುವ ಸಂದರ್ಭದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿರುವ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಇದ್ದರು.

ಬಿಜೆಪಿ ಅಧಿಕಾರಕ್ಕೆ: ಈ ಬಾರಿ ನಡೆಯುವ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರ್ಗಿ ಮಹಾ ನಗರ ಪಾಲಿಕೆಗಳ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಃಸಿದ್ಧವೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದ ನಿಷ್ಠಾವಂತ ಹಾಗೂ ಪಕ್ಷಗೋಸ್ಕರ ಸೇವೆ ಸಲ್ಲಿಸಿದವರಿಗೆ ಪ್ರಾಮುಖ್ಯತೆ ನೀಡಲಿದೆ‘ ಎಂದರು.

ಇದೇ 20ರಂದು ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಶಾಸಕ ಪ್ರಿಯಾಂಕ್‌ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ರವಿಕುಮಾರ್, ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಪ್ರಿಯಾಂಕ್‌ ಅವರು ನೀಡಿರುವ ಹೇಳಿಕೆ ಅತೀವ ನೋವು ತಂದಿದೆ. ಈ ತರಹದ ಹೇಳಿಕೆಗಳನ್ನು ಮಲ್ಲಿಕಾರ್ಜುನ ಖರ್ಗೆಯವರು ಇಲ್ಲಿಯವರೆಗೆ ನೀಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT