ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 26 ಕೋಟಿಯ ಕಣ್ಣಿ ಮಾರುಕಟ್ಟೆಗೆ ಭೂಮಿ ಪೂಜೆ

ಮಹಾನಗರ ಪಾಲಿಕೆಯ 41 ತ್ಯಾಜ್ಯ ವಿಲೇವಾರಿ ವಾಹನಗಳು ಸೇವೆಗೆ
Last Updated 11 ಜುಲೈ 2021, 12:43 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಕಣ್ಣಿ ಮಾರುಕಟ್ಟೆ ಪ್ರದೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ₹ 26.30 ಕೋಟಿ ವೆಚ್ಚದ ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.

ಎರಡು ಎಕರೆ ಪ್ರದೇಶದಲ್ಲಿ ಮಾರುಕಟ್ಟೆ ನಿರ್ಮಾಣವಾಗಲಿದ್ದು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ₹ 20 ಕೊಟಿ ಹಾಗೂ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರವು ₹ 6.30 ಕೋಟಿ ಅನುದಾನನೀಡಿವೆ.

ಅಡಿಗಲ್ಲು ನೆರವೇರಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ‘ಕಾಯಿಪಲ್ಲೆ ಮಾರುಕಟ್ಟೆ ಸಂಕೀರ್ಣ ರಾಜ್ಯದ ಇತಿಹಾಸದಲ್ಲೇ ಮೊದಲ ಕಟ್ಟಡವಾಗಿದ್ದು, ಈ ತರಹದ ಮಾದರಿ ತರಕಾರಿ ಮಾರುಕಟ್ಟೆ ನಿರ್ಮಾಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೂ ತರುತ್ತೇನೆ’ ಎಂದರು.

‘ರಾಜ್ಯದಲ್ಲಿ ರೈತ ಬೆಳೆದ ಬೆಳೆಗೆ ವೈಜ್ಞಾನಿಕವಾಗಿ ಬೆಲೆ ದೊರಕಿಸುವಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕೃಷಿ ನಮ್ಮ ಆದ್ಯತಾ ವಲಯವಾಗಿದ್ದು, ಕೃಷಿಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಿದೆ’ ಎಂದು ಹೇಳಿದರು.

ನೂತನ ತರಕಾರಿ ಮಾರುಕಟ್ಟೆ ಕಾಂಪ್ಲೆಕ್ಸ್ ಬೇಸ್‍ಮೆಂಟ್ ಮಹಡಿ, ನೆಲ ಮಹಡಿ ಹಾಗೂ ಮೊದಲನೇ ಮಹಡಿ ಒಳಗೊಂಡಿದೆ. ಬೇಸ್‍ಮೆಂಟ್‌ನಲ್ಲಿ ವಾಹನ ನಿಲುಗಡೆ, ಲಿಫ್ಟ್, ಸ್ಟೇರ್‌ಕೇಸ್, ಸಂಪ್ ಟ್ಯಾಂಕ್, ಎಲೆಕ್ಟ್ರಿಕಲ್ ಕೋಣೆ ಇರಲಿದೆ. ನೆಲ ಮಹಡಿಯಲ್ಲಿ 62 ಅಂಗಡಿಗಳು, ತರಕಾರಿ ಮಾರಾಟಕ್ಕೆ 192 ಮಳಿಗೆ, ಸಗಟು ವ್ಯಾಪಾರ ಹರಾಜು ಪ್ರಕ್ರಿಯೆಗೆ ಪ್ಲಾಟ್‍ಫಾರ್ಮ್, ಘನತ್ಯಾಜ್ಯ ಸಂಗ್ರಹಣೆಗೆ ಸ್ಥಳ, ಕೋಲ್ಟ್ ಸ್ಟೋರೇಜ್ ಕೋಣೆ ಹಾಗೂ ಶೌಚಾಲಯ ಇರಲಿವೆ. ಮೊದಲನೇ ಮಹಡಿಯಲ್ಲಿ 47 ಅಂಗಡಿಗಳು, ಇತರೆ ಕಾರ್ಯಾಲಯ, ಬ್ಯಾಂಕ್ ಇರಲಿದ್ದು ಒಟ್ಟಾರೆ ಸಂಕೀರ್ಣದಲ್ಲಿ 301 ಅಂಗಡಿಗಳಿರಲಿವೆ’ ಎಂದು ಯಡಿಯೂರಪ್ಪ ವಿವರಿಸಿದರು.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮಾತನಾಡಿ, ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ₹ 600 ಕೋಟಿ ವೆಚ್ಚದಲ್ಲಿ ದಿನದ 24 ಗಂಟೆಯು ಕುಡಿಯುವ ನೀರಿನ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದೆ. ಇದಲ್ಲದೇ ಕಲಬುರ್ಗಿ ಮಹಾನಗರ ಪ್ರದೇಶದಲ್ಲಿ ಘನ ತ್ಯಾಜ್ಯ ವಸ್ತು ನಿರ್ವಹಣೆಗಾಗಿ 41 ವಾಹನಗಳನ್ನು ಲೋಕಾರ್ಪಣೆ ಮಾಡಲಾಗಿದೆ’ ಎಂದರು.

ಸಂಸದ ಡಾ. ಉಮೇಶ ಜಾಧವ ಮಾತನಾಡಿ, ‘ಜಿಲ್ಲೆಯ ವಿವಿಧ ಗ್ರಾಮಗಳು, ತಾಂಡಾಗಳಿಂದ ಬಡ ರೈತರು ತಮ್ಮ ತರಕಾರಿ, ಕಾಯಿಪಲ್ಲೆಗಳನ್ನು ತಂದು ಮಾರಾಟ ಮಾಡುತ್ತಿದ್ದರು. ರಸ್ತೆ ಬದಿ ಮಾರಾಟ ಮಾಡುತ್ತಿದ್ದುದರಿಂದ ಅಪಘಾತಗಳೂ ಸಂಭವಿಸಿದ್ದವು. ಈ ನೂತನ ಮಾರುಕಟ್ಟೆಯಿಂದ ಪ್ರದೇಶದ ರೈತರು ಸುಲಲಿತವಾಗಿ ವ್ಯಾಪಾರ ಮಾಡಬಹುದು’ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ, ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

--

ಕಾರ್ಯಕ್ರಮ ಬಹಿಷ್ಕರಿಸಿದ ಶಾಸಕ..

ಕಣ್ಣಿ ಮಾರುಕಟ್ಟೆಯ ನೂತನ ಕಟ್ಟಡದ ಅಡಿಗಲ್ಲು ಸಮಾರಂಭದಲ್ಲಿ ಶಿಷ್ಟಾಚಾರದ ಪ್ರಕಾರ ತಮ್ಮನ್ನು ವೇದಿಕೆಗೆ ಆಹ್ವಾನಿಸಿಲ್ಲ ಎಂದು ಮುನಿಸಿ ಕೊಂಡ ಅಫಜಲಪುರದ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ ಅವರು ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೇರೆ ಪಕ್ಷದ ಶಾಸಕರನ್ನು ಕಡೆಗಣಿಸಿದ್ದು ನೋಡಿದರೆ ಇದು ಸರ್ಕಾರಿ ಕಾರ್ಯಕ್ರಮವಲ್ಲ, ಬದಲಾಗಿ ಬಿಜೆಪಿ ಕಾರ್ಯಕ್ರಮ ಎನಿಸುತ್ತದೆ. ನನ್ನನ್ನು ಕನಿಷ್ಠ ವೇದಿಕೆಗೂ ಆಹ್ವಾನಿಸಲಿಲ್ಲ. ಇದ ರಿಂದ ಬೇಸರವಾಗಿದೆ. ಹೀಗಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದರು.

ಕಾರ್ಯಕ್ರಮ ಆಯೋಜಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಶಾಸಕರಿಗೆ ವೇದಿಕೆಯ ಎದುರಿನಲ್ಲಿ ಆಸನ ವ್ಯವಸ್ಥೆ ಮಾಡಿದ್ದರು. ಅದರಂತೆ ಎಂ.ವೈ. ಪಾಟೀಲ ತಮಗೆ ನಿಗದಿಯಾದ ಆಸನದಲ್ಲಿ ಕುಳಿತಿದ್ದರು. ಆದರೆ, ಆಡಳಿತ
ಪಕ್ಷದ ಸದಸ್ಯರು ವೇದಿಕೆ ಏರಿದರು. ಆ ಸಂದರ್ಭ ದಲ್ಲಿ ಮುನಿಸಿಕೊಂಡು ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT