ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಿ ಸಮಾಜ ಎಸ್ಟಿಗೆ ಸೇರಿಸಲು ಪ್ರಯತ್ನ: ಚಿಂಚೋಳಿಯಲ್ಲಿ ಯಡಿಯೂರಪ್ಪ

Last Updated 6 ಮೇ 2019, 13:56 IST
ಅಕ್ಷರ ಗಾತ್ರ

ಕಲಬುರ್ಗಿ: ‘ಆರ್ಥಿಕವಾಗಿ ಹಿಂದುಳಿದಿರುವ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಡತ ಕೇಂದ್ರ ಸರ್ಕಾರದ ಬಳಿ ಇದ್ದು, ಚುನಾವಣೆ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಖುದ್ದಾಗಿ ಚರ್ಚೆ ನಡೆಸುವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

ಚಿಂಚೋಳಿಯಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಅವಿನಾಶ್‌ ಜಾಧವ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದುಳಿದ ಸಮುದಾಯಗಳಿಗೆ ಸೌಲಭ್ಯ ಕಲ್ಪಿಸಲು ಬಿಜೆಪಿ ಬದ್ಧವಾಗಿದೆ. ಗೃಹಸಚಿವ ರಾಜನಾಥ ಸಿಂಗ್‌ ಅವರ ಬಳಿ ಕಡತ ಇದ್ದು, ಈ ಸಂಬಂಧ ಶೀಘ್ರವೇ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದರು.

ಚಿಂಚೋಳಿ ಷುಗರ್ಸ್‌ ಸಕ್ಕರೆ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ಬಿಜೆಪಿ ಬದ್ಧವಾಗಿದ್ದು, ಈ ಭಾಗದ ಕಬ್ಬು ಬೆಳೆಗಾರರು ಇದೇ ಕಾರ್ಖಾನೆಯಲ್ಲಿ ಕಬ್ಬು ನುರಿಸಲು ಅನುಕೂಲವಾಗುವಂತೆ ಕಾರ್ಖಾನೆ ಆರಂಭಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಒಂದು ತಿಂಗಳಲ್ಲಿ ಈ ಸಂಬಂಧ ಅಂತಿಮ ರೂಪುರೇಷೆಗಳು ಸಿದ್ಧಗೊಳ್ಳಲಿವೆ ಎಂದರು.

ಕಾಳಗಿ ತಾಲ್ಲೂಕು ರಚನೆ ಸಂದರ್ಭದಲ್ಲಿ ಕೆಲ ಗ್ರಾಮಗಳಿಗೆ ಅನ್ಯಾಯವಾದ ಬಗ್ಗೆ ದೂರುಗಳಿವೆ. ಇವುಗಳನ್ನು ಸರಿಪಡಿಸಲು ಸರ್ಕಾರದ ಮೇಲೆ ಒತ್ತಡ ತರಲಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.

ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ: ಕಾಂಗ್ರೆಸ್‌ ಪಕ್ಷ ತಮಗೆ ಮಾಡಿದ ಅನ್ಯಾಯವನ್ನು ವಿರೋಧಿಸಿ ಡಾ.ಉಮೇಶ್‌ ಜಾಧವ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಬಿಸಾಕಿ ಬಿಜೆಪಿ ಸೇರಿದ್ದಾರೆ. ಹೀಗಾಗಿ, ಅವರ ಸ್ಥಾನಕ್ಕೆ ಅವಿನಾಶ್‌ ಜಾಧವ ಅವರು ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂದರು.

ಬಿಜೆಪಿಗೆ 22 ಸೀಟುಗಳು: ಪಕ್ಷದ 22 ಅಭ್ಯರ್ಥಿಗಳು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ 275ಕ್ಕೂ ಅಧಿಕ ಸ್ಥಾನಗಳನ್ನು ಪಡೆಯುವ ಮೂಲಕ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ನೇಹಿತರು ಉತ್ಸಾಹದಲ್ಲಿ ಹೇಳಿದ್ದಾರೆ: ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸಮ್ಮಿಶ್ರ ಉರುಳಿ ಹೋಗಲಿದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಎಂದು ನಿಮ್ಮ ಪಕ್ಷದ ಶಾಸಕರು ಹೇಳಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಸ್ನೇಹಿತರು ಉತ್ಸಾಹದಲ್ಲಿ ಹಾಗೆ ಹೇಳಿರಬಹುದು. ಆದರೆ, ಒಂದಂತೂ ನಿಶ್ಚಿತ. 20ಕ್ಕೂ ಅಧಿಕ ಶಾಸಕರು ಕುಮಾರಸ್ವಾಮಿ ಅವರ ಆಡಳಿತದ ಬಗ್ಗೆ ಅತೃಪ್ತಿ ಹೊಂದಿದ್ದಾರೆ. ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು’ ಎಂದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಸಂಸದ ಭಗವಂತ ಖೂಬಾ, ಶಾಸಕರಾದ ವಿ.ಸೋಮಣ್ಣ, ಬಸನಗೌಡ ಪಾಟೀಲ ಯತ್ನಾಳ, ನರಸಿಂಹ ನಾಯಕ (ರಾಜೂಗೌಡ), ಎ.ಎಸ್‌.ಪಾಟೀಲ ನಡಹಳ್ಳಿ, ಡಾ.ಉಮೇಶ ಜಾಧವ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT