ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಸಚಿವರೊಂದಿಗೆ ಕೆಕೆಆರ್‌ಟಿಸಿ ಬಸ್‌ನಲ್ಲಿ ಐವಾನ್ ಇ ಶಾಹಿ ಅತಿಥಿ ಗೃಹದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳುವಾಗ ಮಾರ್ಗದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ರಾಯಚೂರಿನ ಶಾಂತಮ್ಮ ಅವರ ಮನವಿಗೆ ತಕ್ಷಣವೇ ಸ್ಪಂದಿಸಿದ ಸಿಎಂ, ರಾಯಚೂರಿನ ಎಸ್‌ಪಿಯೊಂದಿಗೆ ಫೋನ್‌ನಲ್ಲಿ ಮಾತನಾಡಿ ನಿರ್ದೇಶನ ನೀಡಿದರು.
ಹೊಸದಾಗಿ ಖರೀದಿಸಿದಿ ಕೆಕೆಆರ್‌ಟಿಸಿ ಬಸ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾದ ಜಿ.ಪರಮೇಶ್ವರ, ಕೆ.ಜೆ. ಜಾರ್ಜ್, ಎಚ್.ಕೆ ಪಾಟೀಲ, ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ, ಬೈರತಿ ಸುರೇಶ, ಎಂ.ಬಿ.ಪಾಟೀಲ ಸೇರಿದಂತೆ ಹಲವು ಸಚಿವರು ಬಸ್‌ನಲ್ಲಿ ಪ್ರಯಾಣಿಸಿದರು.
ಪರೇಡ್ ಮೈದಾನದಲ್ಲಿ ಅಹವಾಲು ಸಲ್ಲಿಸಲು ಆಗದವರು ಕೆಕೆಆರ್‌ಡಿಬಿ ಕಚೇರಿ ಮುಂಭಾಗದಲ್ಲಿ ಜಮಾಯಿಸಿದರು. ಕಿಟಕಿ ಪಕ್ಕದಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಅವರು ಜನರಿಂದ ಅರ್ಜಿಗಳನ್ನು ಸ್ವೀಕರಿಸಿದರು. ಕೆಲವರು ಕಣ್ಣೀರು ಸುರಿಸುತ್ತಾ ಮನವಿ ಪತ್ರಗಳನ್ನು ನೀಡಿ, ಕೈ ಮುಗಿದು ಸಮಸ್ಯೆಗಳನ್ನು ಇತ್ಯರ್ಥಿಸುವಂತೆ ಕೋರಿದರು.
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದ ಶಾಂತಮ್ಮ ಅವರು ಕಣ್ಣೀರು ಹಾಕುತ್ತಲೇ ತಮ್ಮ ಪತಿ ಸಂಜಯ್ ಕುರ್ಡಿಕರ್ ಕೊಲೆಗೆ ನ್ಯಾಯ ಕೊಡಿಸುವಂತೆ ಅಲವತ್ತುಕೊಂಡರು. ಶಾಂತಮ್ಮ ಅವರ ಗೋಳಾಟಕ್ಕೆ ಮರುಗಿದ ಸಿಎಂ, ಸ್ಥಳದಲ್ಲೇ ರಾಯಚೂರು ಎಸ್‌ಪಿಗೆ ಫೋನ್ ಕರೆ ಮಾಡಿ, ಕೊಲೆ ಪ್ರಕರಣದ ವಿವರಣೆ ಕೇಳಿದರು.
ಕೊಲೆ ಪ್ರಕರಣದ ತನಿಖೆಯನ್ನು ಖುದ್ದಾಗಿ ಪರಿಶೀಲಿಸಬೇಕು. ಇದುವರೆಗಿನ ತನಿಖೆ ಸಮರ್ಪಕವಾಗಿದೆಯಾ? ಕೊಲೆಯಲ್ಲಿ ಬೇರೆಯವರು ಭಾಗಿಯಾಗಿದ್ದು ಅವರು ತಪ್ಪಿಸಿಕೊಂಡಿದ್ದಾರಾ? ನಿಜವಾದ ಆರೋಪಿಗಳು ಹೊರಗೆ ಇದ್ದರೆ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಲು ಸಾಧ್ಯವಿಲ್ಲ. ಹೀಗಾಗಿ, ಖುದ್ದಾಗಿ ಕೊಲೆ ಪ್ರಕರಣದ ತನಿಖೆಯ ಮೇಲೆ ನಿಗಾವಹಿಸಿ, ಅದರ ವರದಿಯನ್ನು ಸಲ್ಲಿಸುವಂತೆ ಎಸ್‌ಪಿಗೆ ಸಿಎಂ ಸೂಚಿಸಿದರು.
ಕೊಲೆ ಪ್ರಕರಣದ ತನಿಖೆಯನ್ನು ಖುದ್ದು ಪರಿಶೀಲಿಸುವಂತೆ ಜಿಲ್ಲಾ ರಕ್ಷಣಾಧಿಕಾರಿಗಳಿಗೂ ಸೂಚಿಸಿದರು.
ಕೆಲವರು ಕಿಟಕಿ ಮೂಲಕ ಡಿ.ಕೆ. ಶಿವಕುಮಾರ ಅವರಿಗೆ ಮನವಿಗಳನ್ನು ಸಲ್ಲಿಸಿದರು. ಪ್ರಿಯಾಂಕ್ ಖರ್ಗೆ ಅವರು ಮುಂದೆ ಬಂದು ಹಲವರ ಮನವಿ ಪತ್ರಗಳನ್ನು ತೆಗೆದುಕೊಂಡು, ಕ್ರಮದ ಭರವಸೆ ನೀಡಿದರು.
ಕಲಬುರಗಿಯಲ್ಲಿ ಮಂಗಳವಾರ ನಡೆದ ಸಚಿವ ಸಂಪಟ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು ಕೆಕೆಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದರು