ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ, ಎನ್‌ಆರ್‌ಸಿ ಹಿಮ್ಮೆಟ್ಟುವವರೆಗೂ ಹೋರಾಟ ನಿರಂತರ

ಕಲಬುರ್ಗಿ ಶಾಹೀನ್‌ಭಾಗ್‌ನಲ್ಲಿ ಸುಪ್ರೀಂಕೋರ್ಟ್‌ ಹಿರಿಯ ವಕೀಲ ಭಾನುಪ್ರತಾಪ್ ಸಿಂಗ್
Last Updated 25 ಫೆಬ್ರುವರಿ 2020, 14:47 IST
ಅಕ್ಷರ ಗಾತ್ರ

ಕಲಬುರ್ಗಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆಗಳನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲಬಾರದು ಎಂದು ಸುಪ್ರೀಂಕೋರ್ಟ್‌ ಹಿರಿಯ ವಕೀಲ ಭಾನುಪ್ರತಾಪ್ ಸಿಂಗ್‌ ಕರೆ ನೀಡಿದರು.

ಇಲ್ಲಿನ ಮೆಹಬೂಬ್‌ ನಗರದಲ್ಲಿರುವ ಕಲಬುರ್ಗಿ ಶಾಹೀನ್‌ಭಾಗ್‌ನಲ್ಲಿ ಮಂಗಳವಾರ ಪ್ರತಿಭಟನಾನಿರತ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಪೌರತ್ವ ಸಾಬೀತುಪಡಿಸಲು ಜನ್ಮಸ್ಥಳದ ದಾಖಲೆಗಳನ್ನು ಹಾಜರುಪಡಿಸಬೇಕು. ಅನಕ್ಷರಸ್ಥರೇ ಹೆಚ್ಚಾಗಿರುವ ಈ ದೇಶದಲ್ಲಿ ದಾಖಲೆಗಳನ್ನು ನೀಡಲು ಸಾಧ್ಯವೇ? ಈಶಾನ್ಯ ರಾಜ್ಯಗಳಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಮನೆಗಳು, ಗ್ರಾಮಗಳೇ ಕೊಚ್ಚಿ ಹೋಗಿರುವಾಗ ದಾಖಲೆ ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರು.

ಸರ್ಕಾರದವರು ಕೇಳುವ ಯಾವ ಮಾಹಿತಿಯನ್ನೂ ಕೊಡಬೇಡಿ. ಬಂದವರಿಗೆ ಕುಡಿಯಲು ನೀರು ಕೊಡಿ. ಆದರೆ, ಪೌರತ್ವ ನೋಂದಣಿಗಾಗಿ ಕೇಳಲಾಗುವ ದಾಖಲೆಗಳನ್ನು ಕೊಡಲೇಬೇಡಿ.ಅವರು ಜಬರದಸ್ತಿಯಿಂದ ಮಾಹಿತಿ ಪಡೆಯಲು ಸಾಧ್ಯವಿಲ್ಲ. 40 ಕೋಟಿ ಜನರು ಮಾಹಿತಿ ನೀಡಲು ನಿರಾಕರಿಸಬೇಕು. ಆಗ ಪ್ರಧಾನಿ ಹಾಗೂ ಗೃಹಸಚಿವರಿಗೆ ಏನೂ ಮಾಡಲು ಆಗುವುದಿಲ್ಲ ಎಂದರು.

‘ಸಿಎಎ, ಎನ್ಆರ್‌ಸಿ ಕುರಿತು ಸರ್ಕಾರ, ಸಂಸತ್ತು ಸಂಧಾನ ಮಾಡಲು ಬರುವುದಿಲ್ಲ. ನಮಗಿರುವುದು ಸಂವಿಧಾನದ ಹೋರಾಟ ಮಾತ್ರ. ಹೆಣ್ಣುಮಕ್ಕಳಿಗೆ ಹಕ್ಕುಗಳನ್ನೇ ಕೊಡದ ಮನುಸ್ಕೃತಿಯನ್ನು ಒಪ್ಪಿಕೊಂಡ ಎಲ್ಲರನ್ನೂ ನಾವು ಹಿಮ್ಮೆಟ್ಟಿಸಬೇಕು. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ಗಳನ್ನು ಜಾರಿಗೆ ತರುವಲ್ಲಿ ಬಿಜೆಪಿಯ ಮಾತೃಸಂಸ್ಥೆಆರ್‌ಎಸ್‌ಎಸ್‌ ಇದೆ. ಎರಡನ್ನೂ ಜನರು ತಿರಸ್ಕರಿಸಬೇಕು. ‌ಮತದಾನ ಹಕ್ಕು ಕಿತ್ತುಕೊಳ್ಳಲು ಸಹ ಹುನ್ನಾರ ನಡೆದಿದೆ. ಪ್ರಸ್ತುತ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಇವಿಎಂನ ಅಕ್ರಮದಿಂದಲೇ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಯಾರೂ ಮರೆಯಬಾರದು. ಮತ್ತೆ ಮತಪತ್ರ ಆಧಾರಿತ ಚುನಾವಣೆಯೇ ಜಾರಿಗೆ ಬರಬೇಕು ಎಂದು ಹೇಳಿದರು.

ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಕಾರ್ಯದರ್ಶಿ, ರಾಯಚೂರಿನ ವಕೀಲ ರಜಾಕ್‌ ಉಸ್ತಾದ್‌, ಎಐಎಂಎಸ್‌ಎಸ್‌ ಮಹಿಳಾ ಸಂಘಟನೆಯ ಅಶ್ವಿನಿ, ಡಾ.ಸೀಮಾ ದೇಶಪಾಂಡೆ ಭಾಗವಹಿಸಿದ್ದರು.

ನಂತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರೊಂದಿಗೆ ಸಂವಾದ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT