ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆ ಸವಾರಿ: ದಲಿತನ ಹತ್ಯೆ?

Last Updated 31 ಮಾರ್ಚ್ 2018, 5:40 IST
ಅಕ್ಷರ ಗಾತ್ರ

ಅಹಮದಾಬಾದ್: ಭಾವನಗರದ ತಿಂಬಿ ಗ್ರಾಮದಲ್ಲಿ ರಸ್ತೆಯಮೇಲೆ ಪ್ರದೀಪ್ ರಾಥೋಡ್ (21) ಎನ್ನುವ ದಲಿತ ಯುವಕನ ಶವ ಪತ್ತೆಯಾಗಿದೆ. ಕುದುರೆ ಹೊಂದಿದ್ದಕ್ಕಾಗಿ ಮತ್ತು ಕುದುರೆ ಸವಾರಿ ಮಾಡಿದ್ದಕ್ಕಾಗಿ ಮೇಲ್ಜಾತಿಯ ಜನರು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

‘ಕೆಲವು ತಿಂಗಳ ಹಿಂದೆ, ಪ್ರದೀಪ್‌ ಕುದುರೆ ಖರೀದಿಸಿದ್ದ. ಮೇಲ್ಜಾತಿಯ ಕೆಲವು ಜನರು ಇದನ್ನು ಆಕ್ಷೇಪಿಸಿದ್ದರು. ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮೇಲ್ಜಾತಿಯ ಕೆಲವರಿಂದ ಬೆದರಿಕೆ ಬಂದ ಬಳಿಕ, ಕುದುರೆ ಮಾರಾಟ‌ ಮಾಡಲು ಪ್ರದೀಪ್ ಇಚ್ಚಿಸಿದ್ದ. ಆದರೆ ಹಾಗೆ ಮಾಡದಂತೆ ನಾನು ಅವನ‌ ಮನವೊಲಿಸಿದ್ದೆ’ ಎಂದು ಆತನ ತಂದೆ ಕಾಲೂಭಾಯ್ ರಾಥೋಡ್ ಹೇಳಿದ್ದಾರೆ.

‘ಗುರುವಾರ ಪ್ರದೀಪ್ ಕುದುರೆ ಏರಿ ಹೊಲಕ್ಕೆ ಹೋಗಿದ್ದ. ರಾತ್ರಿ ಊಟಕ್ಕೆ ಆತ ಮನೆಗೆ ಮರಳಬಹುದು ಎಂದು ತಿಳಿದಿದ್ದೆವು. ಆದರೆ ತಡರಾತ್ರಿ ಆದರೂ ಮನೆಗೆ ಬಾರದೆ ಇದ್ದಾಗ, ಹುಡುಕಾಡಲು ಆರಂಭಿಸಿದೆವು. ಹೊಲಕ್ಕೆ ತೆರಳುವ ಹಾದಿಯಲ್ಲಿ ಕುದುರೆ ಮೃತದೇಹ ಇತ್ತು. ಸ್ವಲ್ಪ ದೂರದಲ್ಲಿ ಪ್ರದೀಪ್ ಮೃತದೇಹವೂ ಕಾಣಿಸಿತು’ ಎಂದು ಅವರು ಘಟನೆ ಕುರಿತು ಹೇಳಿದ್ದಾರೆ.

ಮೂವರು ಶಂಕಿತರ ಬಂಧನ: ಕಾಲೂಭಾಯ್ ನೀಡಿದ ದೂರು ಆಧರಿಸಿ ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪರಾಧ ವಿಭಾಗದ ಪೊಲೀಸರು ತನಿಖೆಗೆ ಸಹಕರಿಸಲಿದ್ದಾರೆ. ರಾಜ್ಯ ಸರ್ಕಾರವು ಹಿರಿಯ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿದೆ.

ಈಚೆಗೆ ಮೆಟ್ರಿಕ್ಯುಲೇಷನ್‌ ಪೂರ್ಣಗೊಳಿಸಿದ್ದ ಪ್ರದೀಪ್, ತಂದೆಗೆ ಕೃಷಿ ಚಟುವಟಿಕೆಗಳಲ್ಲಿ ನೆರವಾಗುತ್ತಿದ್ದರು.

2015ರಲ್ಲಿ ಊನಾದಲ್ಲಿ ದಲಿತ ಯುವಕನ ಮೇಲೆ ಹಲ್ಲೆ ನಡೆದ ನಂತರದಲ್ಲಿ ರಾಜ್ಯದಲ್ಲಿ ದಲಿತ ಸಮುದಾಯದವರ ಮೇಲೆ ಸರಣಿ ದಾಳಿಗಳು ನಡೆದಿವೆ.

ನಿರ್ದಿಷ್ಟ ವಿನ್ಯಾಸದಲ್ಲಿ ಮೀಸೆ ಬಿಟ್ಟಿದ್ದಕ್ಕೂ ಕೆಲವು ದಲಿತ ಯುವಕರ ಮೇಲೆ ಹಲ್ಲೆ ಮಾಡಲಾಗಿತ್ತು.

ಬಂಧನಕ್ಕೆ ಆಗ್ರಹ
ತಿಂಬಿಯಲ್ಲಿ ಅಂದಾಜು 3,000 ಜನರು ವಾಸವಿದ್ದು, ಇವರಲ್ಲಿ ಶೇ 10ರಷ್ಟು ದಲಿತರಿದ್ದಾರೆ. ಮರಣೋತ್ತರ ಪರೀಕ್ಷೆಗೆಂದು ಪ್ರದೀಪ್‌ ಮೃತದೇಹವನ್ನು ಭಾವನಗರದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಆದರೆ ಹತ್ಯೆ ಮಾಡಿದವರನ್ನು ಬಂಧಿಸುವ ತನಕ ಮೃತದೇಹವನ್ನು ಪಡೆಯುವುದಿಲ್ಲ ಎಂದು ಪ್ರದೀಪ್ ಕುಟುಂಬದವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT