ಭಾನುವಾರ, ಅಕ್ಟೋಬರ್ 24, 2021
29 °C

ಕಲ್ಯಾಣ ‌ಕರ್ನಾಟಕ ಪ್ರದೇಶ ‌ಅಭಿವೃದ್ಧಿ ಮಂಡಳಿಗೆ ₹3,000 ಕೋಟಿ: ಬೊಮ್ಮಾಯಿ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಸ್ಥಾಪನೆಯಾದ ಕಲ್ಯಾಣ ‌ಕರ್ನಾಟಕ ಪ್ರದೇಶ ‌ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಈಗ ನೀಡಲಾಗುವ ಅನುದಾನದ ಜೊತೆ ಹೆಚ್ಚುವರಿಯಾಗಿ ₹1,500 ಕೋಟಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಘೋಷಿಸಿದರು. ಈಗಾಗಲೇ ₹1,500 ಕೋಟಿ ಅನುದಾನ ನೀಡಲಾಗುತ್ತಿದೆ.

ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ‌ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ರಾಜ್ಯ ಸರ್ಕಾರ ಇಲ್ಲಿಯವರೆಗೆ ₹8 ಸಾವಿರ ‌ಕೋಟಿಗೂ ಅಧಿಕ ಮೊತ್ತವನ್ನು ಬಿಡುಗಡೆ ಮಾಡಿದ್ದೇವೆ. ಆ ಪೈಕಿ ₹6 ಸಾವಿರ ಕೋಟಿ ಖರ್ಚಾಗಿದೆ. ಉಳಿದ ₹2 ಸಾವಿರ ಕೋಟಿಯನ್ನು ಬರುವ ಮಾರ್ಚ್‌ನೊಳಗೆ ಖರ್ಚು ಮಾಡಬೇಕು. ಅಂದಾಗ ಮಾತ್ರ ಹೆಚ್ಚುವರಿ ₹1500 ಕೋಟಿಯನ್ನು ಬಿಡುಗಡೆ ಮಾಡುತ್ತೇನೆ ಎಂದು ಷರತ್ತು ವಿಧಿಸಿದರು.

ಓದಿ: 

371 (ಜೆ) ಕಲಂನಡಿ ಯೋಜನೆಗಳನ್ನು ಜಾರಿಗೊಳಿಸುವ ಹೊಣೆ ಹೊತ್ತಿರುವ ಕೋಶವನ್ನು ‌ಕಲಬುರ್ಗಿಗೆ ಸ್ಥಳಾಂತರಿಸಲಾಗುವುದು.

'ನಾನು ಯಾವುದೇ ಹೊಸ ಘೋಷಣೆಗಳನ್ನು ‌ಹೊರಡಿಸುವುದಿಲ್ಲ.‌ ಈಗಾಗಲೇ ಇರುವ ಯೋಜನೆಗಳನ್ನು ‌ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಲು‌ ಗಮನ ಹರಿಸುತ್ತೇನೆ' ಎಂದರು.

ನಂಜುಂಡಪ್ಪ ವರದಿ ಅನ್ವಯ ಈ ಭಾಗದ ಆರ್ಥಿಕ, ಶೈಕ್ಷಣಿಕ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುವುದು. ವರದಿ ‌ಅನ್ವಯ ಐದು ವರ್ಷಗಳಲ್ಲಿ ಹೊಸ ರೂಪದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಕಲ್ಯಾಣ ‌ಕರ್ನಾಟಕ‌ ಪ್ರದೇಶ ಅಭಿವೃದ್ಧಿ ‌ಮಂಡಳಿ ಹಾಗೂ ‌ನಂಜುಂಡಪ್ಪ ವರದಿ ಅನ್ವಯ ನಡೆಯಲಿರುವ ಕಾಮಗಾರಿಗಳ ಬಗ್ಗೆ ಪ್ರತಿ ಮೂರು ತಿಂಗಳಿಗೊಮ್ಮೆ ಖುದ್ದು ಪರಿಶೀಲನೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಕೆಕೆಆರ್‌ಡಿಬಿಗೆ ₹3 ಸಾವಿರ ಕೊಟ್ಟಿದ್ದೇನೆ ಎಂದು ಸರ್ಕಾರದಿಂದ ಈ ಭಾಗಕ್ಕೆ ನೀಡಲಿರುವ ಇತರೆ ಇಲಾಖೆಗಳ ಅನುದಾನಕ್ಕೆ ಕತ್ತರಿ ಹಾಕುವುದಿಲ್ಲ. ಉಳಿದ ಜಿಲ್ಲೆಗಳಿಗೆ ಎಷ್ಟು ಸಿಗುತ್ತದೋ ಅಷ್ಟೂ ಅನುದಾನ ಈ ಜಿಲ್ಲೆಗಳಿಗೆ ಸಿಗಲಿದೆ ಎಂದು ಅವರು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು