ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ಚಿತ್ತಾಪುರ-ಮಳಖೇಡ ಮುಖ್ಯರಸ್ತೆ

ರಸ್ತೆ ದುರಸ್ತಿ ನಿರ್ವಹಣೆ ಮರೆತ ಲೋಕೋಪಯೋಗಿ ಅಧಿಕಾರಿಗಳು
Last Updated 21 ಅಕ್ಟೋಬರ್ 2020, 16:40 IST
ಅಕ್ಷರ ಗಾತ್ರ

ಚಿತ್ತಾಪುರ: ಅಂತರರಾಜ್ಯ ವಾಹನ ಸಂಚಾರಕ್ಕೆ ಅನುಕೂಲ ಆಗಿರುವ ಚಿತ್ತಾಪುರ- ಮಳಖೇಡ ಜಿಲ್ಲಾ ಮುಖ್ಯ ರಸ್ತೆ (ರಾಜ್ಯ ಹೆದ್ದಾರಿ-126 ಒಳಗೊಂಡಂತೆ) ಸಂಪೂರ್ಣ ಹದಗೆಟ್ಟಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ, ತೊಂದರೆಯಾಗುತ್ತಿದೆ.

ಚಿತ್ತಾಪುರ ಪಟ್ಟಣದಿಂದ ಮರಗೋಳ-ದಂಡೋತಿ ಕೂಡು ರಸ್ತೆಯವರೆಗೆ 5.5 ಕಿ.ಮೀ ರಸ್ತೆಯು ರಾಜ್ಯ ಹೆದ್ದಾರಿ-126ಕ್ಕೆ ಒಳಪಡುತ್ತದೆ. ಅಲ್ಲಿಂದ ಸೇಡಂ ತಾಲ್ಲೂಕಿನ ಗಡಿಯವರೆಗೆ 1. ಕಿ.ಮೀ ರಸ್ತೆಯು ಜಿಲ್ಲಾ ಮುಖ್ಯ ರಸ್ತೆಯ ವ್ಯಾಪ್ತಿಗೆ ಒಳಪಡುತ್ತದೆ. ಸರಿಯಾದ ನಿರ್ವಹಣೆ ಮತ್ತು ದುರಸ್ತಿ ಇಲ್ಲದೆ ಇಡೀ ರಸ್ತೆ ಹಾಳಾಗಿದೆ.

ಸರಿಯಾದ ರಸ್ತೆ ಎಲ್ಲಿದೆ ಎಂದು ಹುಡುಕಿದರೂ ಸಿಗಲಾರದಷ್ಟು ಹಾಳಾಗಿದೆ. ರಸ್ತೆ ತುಂಬಾ ತಗ್ಗು ಗುಂಡಿ ಉಂಟಾಗಿವೆ. ಮೊಣಕಾಲು ಮಟ್ಟದ ಗುಂಡಿಗಳಲ್ಲಿ ವಾಹನ ಓಡಿಸಲು ಚಾಲಕರು ಹಿಂಸೆ ಅನುಭವಿಸುವಂತೆ ಆಗಿದೆ.

ಈ ರಸ್ತೆಯಲ್ಲಿ ದಿನಾಲೂ ಕಾಳಗಿ, ಸೇಡಂ ತಾಲ್ಲೂಕು ಕೇಂದ್ರಗಳಿಗೆ ಮತ್ತು ಜಿಲ್ಲಾ ಕೇಂದ್ರ ಕಲಬುರ್ಗಿಗೆ ಬಸ್ ಸಂಚರಿಸುತ್ತವೆ. ಈ ರಸ್ತೆ ಚಿತ್ತಾಪುರ ಪಟ್ಟಣದ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ತಾಲ್ಲೂಕಿನ ಇಟಗಾ ಗ್ರಾಮದ ಹತ್ತಿರದ ಓರಿಯೆಂಟ್ ಸಿಮೆಂಟ್ ಕಂಪೆನಿಗೆ ನಿತ್ಯ ಭಾರಿ ಗಾತ್ರದ ನೂರಾರು ಲಾರಿ, ಟ್ಯಾಂಕರ್ ಬರುತ್ತವೆ. ಓರಿಯೆಂಟ್ ಕಂಪೆನಿಯಿಂದ ಮತ್ತು ವಾಡಿಯ ಎಸಿಸಿ ಸಿಮೆಂಟ್ ಕಂಪೆನಿಯಿಂದ ಸಿಮೆಂಟ್ ತುಂಬಿಕೊಂಡು ಇದೇ ರಸ್ತೆಯ ಮೂಲಕ ಭಾರಿ ಗಾತ್ರದ ಮತ್ತು ಅಧಿಕ ಭಾರದ ಲಾರಿ, ಟ್ಯಾಂಕರ್ ತೆಲಂಗಾಣದ ತಾಂಡೂರ, ಕೊಡಂಗಲ್, ಜಹೀರಾಬಾದ್ ಹೈದರಾಬಾದ್, ಸಿಕಂದರಾಬಾದ್ ನಗರಗಳಿಗೆ ಹೋಗುತ್ತವೆ.

ಸೇಡಂ ತಾಲ್ಲೂಕಿನ ಮಳಖೇಡದ ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿ (ರಾಜೆಶ್ರೀ ಸಿಮೆಂಟ್) ಮತ್ತು ಸೇಡಂನ ವಾಸವದತ್ತಾ ಸಿಮೆಂಟ್ ಕಂಪೆನಿಯಿಂದ ಸಿಮೆಂಟ್ ತುಂಬಿಕೊಂಡು ಇದೇ ರಸ್ತೆ ಮೂಲಕ ರಾಜ್ಯದ ಬೇರೆ ಜಿಲ್ಲೆಗಳಿಗೆ ಮತ್ತು ಗೋವಾ, ಕೇರಳಕ್ಕೆ, ಮಹಾರಾಷ್ಟ್ರದ ವಿವಿಧ ಭಾಗಕ್ಕೆ ನೂರಾರು ಲಾರಿ, ಟ್ಯಾಂಕರ್ ನಿತ್ಯ ಸಂಚರಿಸುತ್ತವೆ. ರಸ್ತೆಯು ಇಷ್ಟೊಂದು ಮಹತ್ವ ಪಡೆದಿರುವಾಗಲೂ ಲೋಕೋಪಯೋಗಿ ಇಲಾಖೆ ಕೆಲವು ವರ್ಷಗಳಿಂದ ರಸ್ತೆ ದುರಸ್ತಿಯನ್ನೆ ಮರೆತು ಬಿಟ್ಟಿದೆ.

ಶಾಸಕ ಪ್ರಿಯಾಂಕ್ ಎಂ. ಖರ್ಗೆ ಅವರು ಈ ಮುಂಚೆ ಕಲಬುರ್ಗಿಯಿಂದ ಮತ್ತು ಹೈದರಾಬಾದಿನಿಂದ ಚಿತ್ತಾಪುರಕ್ಕೆ ಇದೇ ರಸ್ತೆಯ ಮೂಲಕ ಆಗಮಿಸುತ್ತಿದ್ದರು. ಶಾಸಕರು ಬರುವ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ತಗ್ಗುಗುಂಡಿಗಳಿಗೆ ಕಲ್ಲುಮಣ್ಣು ಹಾಕಿ ಅಲ್ಪಸ್ವಲ್ಪ ದುರಸ್ತಿ ಮಾಡಿಸುತ್ತಿದ್ದರು. ಈಗ ಪ್ರಿಯಾಂಕ್ ಅವರು ಶಹಾಬಾದ್ ಮಾರ್ಗದಿಂದ ಆಗಮಿಸುತ್ತಿದ್ದಾರೆ. ಅಧಿಕಾರಿಗಳು ರಸ್ತೆಯ ನಿರ್ವಹಣೆ ಸಂಪೂರ್ಣ ಮರೆತು ಬಿಟ್ಟಿದ್ದಾರೆ ಎನ್ನುವ ಟೀಕೆಯ ಮಾತುಗಳು ಕೇಳಿ ಬಂದಿವೆ.

ಹದಗೆಟ್ಟಿರುವ ರಸ್ತೆಯನ್ನು ಪರಿಶೀಲನೆ ಮಾಡಲಾಗಿದೆ. ಅಗತ್ಯ ದುರಸ್ತಿ ಕೆಲಸ ಮಾಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತೇವೆ ಅಣ್ಣಪ್ಪ ಎನ್. ಕುದರಿ, ಎಇಇ, ಲೋಕೋಪಯೋಗಿ ಇಲಾಖೆ, ಚಿತ್ತಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT