ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದಲೇ ಲಾಕ್‌ಡೌನ್‌; ಜಿಲ್ಲಾಧಿಕಾರಿ ಪ್ರಸ್ತಾವ

Last Updated 13 ಜುಲೈ 2020, 5:54 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದಲ್ಲಿ ಕೋವಿಡ್‌ ಸೋಂಕು ಕೈಮೀರುವ ಹಂತ ತಲುಪಿದ್ದು, ಜುಲೈ 13ರಿಂದ 18ರವರೆಗೆ ನಗರವನ್ನು ಪೂರ್ಣ ಲಾಕ್‌ಡೌನ್‌ ಮಾಡಲು ಅನುಮತಿ ಕೋರಿ ಜಿಲ್ಲಾಧಿಕಾರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

ಕೋವಿಡ್‌ ನಿಯಂತ್ರಣದ ಹಿನ್ನೆಲೆಯಲ್ಲಿ ‘ಜಿಲ್ಲಾ ಮಟ್ಟದ ಕೋವಿಡ್‌ ನಿರ್ಹವಣಾ ಸಮಿತಿ’ ಸಭೆಯನ್ನು ಜುಲೈ 10ರಂದು ಕರೆದಿದ್ದು, ಸ್ಥಿತಿ–ಗತಿಗಳ ಕುರಿತು ಚರ್ಚೆ ನಡೆಸಲಾಗಿದೆ. ನಗರದಲ್ಲಿ ಸೋಂಕು ವ್ಯಾಪ‍ಕವಾಗಿ ಹಬ್ಬುತ್ತಿದೆ. ಹಾಗಾಗಿ, ನಗರಕ್ಕೆ ಪ್ರವೇಶವನ್ನು ನಿಷೇಧಿಸುವುದು ಅಗತ್ಯವಾಗಿದೆ ಎಂದೂ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಬರೆದ ಪ್ರಸ್ತಾವದಲ್ಲಿ ತಿಳಿಸಿದ್ದಾರೆ.‌

ಈ ಹಿನ್ನೆಲೆಯಲ್ಲಿ ಜುಲೈ 13ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲೆಯ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಲಿದ್ದಾರೆ. ನಂತರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಜಿಲ್ಲಾಧಿಕಾರಿ ಬಿ.ಶರತ್‌ ಪ್ರತಿಕ್ರಿಯೆ ನೀಡಿದ್ದಾರೆ.

ಈ ಮಧ್ಯೆ ಜಿಲ್ಲಾಧಿಕಾರಿ ಹೊರಡಿಸಿದ ಪ್ರಸ್ತಾವದ ಪ್ರತಿ ಭಾನುವಾರವೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಸೋಮವಾರ (ಜುಲೈ 13)ದಿಂದಲೇ ಲಾಕ್‌ಡೌನ್‌ ಜಾರಿ ಆಗಲಿದೆಯೇ ಎಂಬ ಗೊಂದಲ ಜನ ಸಾಮಾನ್ಯರಲ್ಲಿ ಮೂಡಿತು.

ಈ ಬಗ್ಗೆ ಹಲವರು ಓದುಗರು ಮಾಹಿತಿ ಖಚಿತಪಡಿಸಿಕೊಳ್ಳಲು ‘ಪ್ರಜಾವಾಣಿ’ ಕಚೇರಿಗೂ ಫೋನ್‌ ಮಾಡಿದರು. ಸೋಮವಾರ ಒಂದು ದಿನ ಅವಕಾಶ ನೀಡಿದರೆ, ಜೀವನಾವಶ್ಯಕ ಸಾಮಗ್ರಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಅನುಕೂಲವಾಗುತ್ತದೆ ಎಂದೂ ಕೆಲವರು ಅಭಿಪ್ರಾಯ ಪಟ್ಟರು.

ವರ್ತಕರು, ಹೋಟೆಲ್‌ ಮಾಲೀಕರ ಗೋಳು

‘ಮೂರು ತಿಂಗಳ ನಿರಂತರ ಲಾಕ್‌ಡೌನ್‌ ಕಾರಣ ವ್ಯಾಪಾರ ಸಾಕಷ್ಟು ಕುಸಿದು ಬಿದ್ದಿದೆ. ಲಾಕ್‌ಡೌನ್ ತೆರವುಗೊಂಡ ಬಳಿಕವೂ ತಕ್ಕಮಟ್ಟಿನ ಗಳಿಕೆ ಆಗಿಲ್ಲ. ಈಗ ಮತ್ತೆ ಲಾಕ್‌ಡೌನ್‌ ಮಾಡಲು ನಮ್ಮ ತಕರಾರು ಇಲ್ಲ. ಆದರೆ, ಮಳಿಗೆಗಳ ಬಾಡಿಗೆ ಹಾಗೂ ಸಂಗ್ರಹಿಸಿ ಇಟ್ಟುಕೊಂಡ ವಸ್ತುಗಳ ಹಾಳಾಗಿ ಹಾನಿ ಸಂಭವಿಸುವ ಆತಂಕ ಎದುರಾಗಿದೆ’ ಎಂದು ದಿನಸಿ ಅಂಗಡಿ ಮಾಲೀಕ ದೀಪಕ್‌ ಮಾರಿಹಾಳ ಅಳಲು ತೋಡಿಕೊಂಡಿದ್ದಾರೆ.

ನಗರದಲ್ಲಿ ಶೇಕಡ 90ರಷ್ಟು ಹೋಟೆಲ್‌ಗಳು ಬಾಡಿಗೆ ಕಟ್ಟಡದಲ್ಲೇ ಇವೆ. ಹಲವರು ಸಾಕಷ್ಟು ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಏಕಾಏಕಿ ಲಾಕ್‌ಡೌನ್ ಮಾಡಿದರೆ ಎಲ್ಲವೂ ಕೆಟ್ಟುಹೋಗುತ್ತದೆ. ಸ್ವಲ್ಪ ಸಮಯ ನೀಡಬೇಕು ಎಂದು ಹೋಟೆಲ್‌ ಮಾಲೀಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT