ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಪ್ರಮುಖರ ಸರಣಿ ಸಭೆ: ಮಿಷನ್ 150 ಗುರಿ ನೀಡಿದ ಮುಖ್ಯಮಂತ್ರಿ

ಬಿಜೆಪಿ ಪ್ರಮುಖರ ಸರಣಿ ಸಭೆಗಳಲ್ಲಿ ಬಸವರಾಜ ಬೊಮ್ಮಾಯಿ ಭಾಗಿ
Last Updated 22 ಏಪ್ರಿಲ್ 2022, 4:53 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಸೇಡಂ ರಸ್ತೆಯ ಗೀತಾ ನಗರದ ಬ್ರಹ್ಮಕುಮಾರಿಸ್‌ನಲ್ಲಿ ಗುರುವಾರ ಆರಂಭವಾದ ಬಿಜೆಪಿಯ ಎರಡು ದಿನಗಳ ಪ್ರಮುಖ ಪದಾಧಿಕಾರಿಗಳ ಸಂಘಟನಾ ಸಭೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆದ್ದು ಮರಳಿ ಅಧಿಕಾರಕ್ಕೆ ಬರುವ ‘ಮಿಷನ್–150’ ಗುರಿ ಸಾಧಿಸುವಂತೆ ಮುಖಂಡರಿಗೆ ಕರೆ ನೀಡಿದರು.

ಮಧ್ಯಾಹ್ನ 3.30ರ ಸುಮಾರಿಗೆ ತೋರಣಗಲ್‌ನಿಂದ ಕಲಬುರಗಿಗೆ ಹೆಲಿಕಾಪ್ಟರ್ ಮೂಲಕ ಬಂದ ಮುಖ್ಯಮಂತ್ರಿ ಅವರು ನಂತರ ಗೀತಾ ನಗರಕ್ಕೆ ತೆರಳಿ ಪಕ್ಷದ ಸಂಘಟನಾ ಸಭೆಯಲ್ಲಿ ಭಾಗವಹಿಸಿದರು.

ಹಾಲಿ, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ರಾಜ್ಯ ಸಂಘಟನಾ ಕಾರ್ಯದರ್ಶಿ, ಉಪಾಧ್ಯಕ್ಷರು, ಕಲಬುರಗಿ ನಗರ, ಗ್ರಾಮೀಣ, ಬೀದರ್, ಯಾದಗಿರಿ ಜಿಲ್ಲೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ರಾಜ್ಯದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.

‘ಪಕ್ಷವು ಮುಂಬರುವ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಿನಿಂದಲೇ ಸಿದ್ಧತೆ ಮಾಡಬೇಕು. ರಾಜಕಾರಣ ಮಾಡುವ ಸಂದರ್ಭ ಬಂದಾಗ ಸಮರ್ಥವಾಗಿ ರಾಜಕಾರಣ ಮಾಡಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ. ಯಾವುದೇ ಕಷ್ಟ ಎದುರಾದ ಸಂದರ್ಭದಲ್ಲಿ ಪಕ್ಷ ಹಾಗೂ ಸರ್ಕಾರ ನಿಮ್ಮ ನೆರವಿಗೆ ನಿಲ್ಲಲಿದೆ’ ಎಂದು ಅವರು ತಿಳಿಸಿದರು.

‘ಕೇಂದ್ರ ಸರ್ಕಾರವು ಕೋವಿಡ್‌ ಸಂಕಷ್ಟದ ಮಧ್ಯೆಯೂ ಜನಕಲ್ಯಾಣಕ್ಕೆ ಹಲವು ಯೋಜನೆಗಳನ್ನು ರೂಪಿಸಿದೆ. ತೆರಿಗೆ ಕಡಿಮೆ ಪ್ರಮಾಣದಲ್ಲಿ ಸಂಗ್ರಹವಾಗಿದ್ದರೂ ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ನಿರ್ವಹಿಸುತ್ತಿದೆ. ಅವುಗಳನ್ನು ಜನರಿಗೆ ತಲುಪಿಸಬೇಕು’ ಎಂದರು.

ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ್ ಮಾತನಾಡಿ, ‘ಜಿಲ್ಲೆಯ ಮಹಾಶಕ್ತಿ ಕೇಂದ್ರಗಳು, ಶಕ್ತಿ ಕೇಂದ್ರಗಳನ್ನು ಬಲಿಷ್ಠಗೊಳಿಸಬೇಕು. ಇನ್ನಷ್ಟು ಮತಗಳು ಬರುವ ಕಡೆ ಹೆಚ್ಚು ಪರಿಶ್ರಮ ಹಾಕಬೇಕು. ಪೇಜ್‌ ಪ್ರಮುಖರು ಈಗಿನಿಂದಲೇ ಮತದಾರರೊಂದಿಗೆ ಒಡನಾಟ ಇಟ್ಟುಕೊಂಡು ಪಕ್ಷಕ್ಕೆ ಆಕರ್ಷಿಸಬೇಕು’ ಎಂದರು.

‘ದುರ್ಬಲ ಘಟಕಗಳ ಮಾಹಿತಿ ತರಿಸಿಕೊಂಡು ಅವುಗಳನ್ನು ನಿರ್ವಹಿಸುತ್ತಿರುವ ಮುಖಂಡರಿಗೆ ಕೆಲಸದ ಶೈಲಿ ಬದಲಾಯಿಸಿಕೊಳ್ಳುವಂತೆ ಸೂಚನೆ ನೀಡಿದರು’ ಎಂದು ಸಭೆಯಲ್ಲಿದ್ದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಉನ್ನತ ಶಿಕ್ಷಣ, ಜೀವನೋಪಾಯ, ಕೌಶಲಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಸಾರಿಗೆ ಸಚಿವ ಬಿ. ಶ್ರೀರಾಮುಲು, ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಸಂಸದ ಡಾ. ಉಮೇಶ ಜಾಧವ, ಮಾಜಿ ಸಚಿವ ಲಕ್ಷ್ಮಣ ಸವದಿ, ಪಕ್ಷದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕ ಬಸವರಾಜ ಮತ್ತಿಮೂಡ, ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಪಕ್ಷದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಮರನಾಥ ಪಾಟೀಲ, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಇದ್ದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಸಂಘಟನಾ ಸಭೆಗಳಲ್ಲಿ ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಮಾತನಾಡಿದರು.

ರೈಲ್ವೆ ವಿಭಾಗ, ನೀರಾವರಿಗೆ ಆದ್ಯತೆ ನೀಡಲು ಮನವಿ

‘ಕಲಬುರಗಿ ಜಿಲ್ಲೆಯ ಬಹು ದಿನಗಳ ಬೇಡಿಕೆಯಾದ ರೈಲ್ವೆ ವಿಭಾಗ ಸ್ಥಾಪನೆ, ಕೆರೆ ತುಂಬಿಸುವ ಮೂಲಕ ಹೆಚ್ಚು ನೀರಾವರಿಗೆ ಒಳಪಡಿಸುವ ಹಾಗೂ ಉದ್ಯೋಗಾವಕಾಶಗಳ ಸೃಷ್ಟಿಗೆ ಅಗತ್ಯ ಯೋಜನೆಗಳನ್ನು ಜಿಲ್ಲೆಗೆ ತರಬೇಕು’ ಎಂದು ಜಿಲ್ಲೆಯ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವರು ಮತ್ತು ಪಕ್ಷದ ನಾಯಕರಿಗೆ ಮನವರಿಕೆ ಮಾಡಿಕೊಟ್ಟರು.

‘ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ರೈಲ್ವೆ ವಿಭಾಗ ಘೋಷಣೆಯಾಗಿತ್ತು. ಚುನಾವಣೆ ಸಂದರ್ಭದಲ್ಲಿ ಇದನ್ನು ಕಾರ್ಯರೂಪಕ್ಕೆ ತರುವುದಾಗಿ ಮಾತುಕೊಟ್ಟಿದ್ದೆವು. ಹಾಗಾಗಿ, ಆ ಮಾತನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ’ ಎಂದು ಜಿಲ್ಲೆಯ ಮುಖಂಡರು ತಿಳಿಸಿದರು.

‘ಜಿಲ್ಲೆಯಲ್ಲಿರುವ ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳದ ಕಾರಣ ರೈತರ ಹೊಲಗಳಿಗೆ ನೀರು ಹರಿಯುತ್ತಿಲ್ಲ. ಆದ್ದರಿಂದ ಬೇರೆ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಮಾಡಿದಂತೆ ಜಿಲ್ಲೆಯಲ್ಲಿಯೂ ಕೆರೆ ತುಂಬಿಸುವ ಯೋಜನೆಗೆ ಹೆಚ್ಚು ಹಣ ಬಿಡುಗಡೆ ಮಾಡಬೇಕು’ ಎಂದು ಪಕ್ಷದ ಗ್ರಾಮಾಂತರ ಮತ್ತು ಶಹರ ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT