ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್‌ ಕ್ಲರ್ಕ್‌: ಅಮಿತ್‌ ಶಾ

‘ರಾಹುಲ್‌ ಬಾಬು’ ಹೇಳಿದ ಪತ್ರಕ್ಕೆ ಸಹಿ ಹಾಕುತ್ತಾರೆ– ಟೀಕೆ
Last Updated 14 ಫೆಬ್ರುವರಿ 2019, 20:45 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ಆಯೋಜಿಸಿದ್ದ ಮೂರು ಜಿಲ್ಲೆಗಳ ಮಹಾಶಕ್ತಿ ಕೇಂದ್ರ ಪ್ರಮುಖರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು, ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದರು. ‘ರಾಹುಲ್‌ ಬಾಬು ಹೇಳಿದ ಪತ್ರಕ್ಕೆ ಸಹಿ ಹಾಕುವ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್‌ ಪಕ್ಷದ ಕ್ಲರ್ಕ್‌’ ಎಂದು ಮತ್ತೊಮ್ಮೆ ಮೂದಲಿಸಿದರು.

ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ನೆರೆದಿದ್ದ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಭಾಷಣದುದ್ದಕ್ಕೂ ರಾಹುಲ್‌ ಗಾಂಧಿ ಅವರಿಗೆ ರಾಹುಲ್‌ ಬಾಬು ಎಂದು ವ್ಯಂಗ್ಯ ಮಾಡಿ, ನಗೆ ಉಕ್ಕಿಸಿದರು.

‘ಜನರಿಂದ ಮುಖ್ಯಮಂತ್ರಿಯಾಗಿಲ್ಲ. ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌ಗಾಂಧಿ ಕೃಪೆಯಿಂದ ಮುಖ್ಯಮಂತ್ರಿಯಾಗಿದ್ದೇನೆ ಎಂದು ಸ್ವತಃ ಹೇಳಿಕೊಂಡಿದ್ದಾರೆ. ಇಂಥ ಮುಖ್ಯಮಂತ್ರಿ ಜನರಿಗೆ ಜವಾಬ್ದಾರರಾಗಿ ಆಡಳಿತ ನಡೆಸುತ್ತಿಲ್ಲ. ಕಾಂಗ್ರೆಸ್‌ ನಾಯಕರು ಹೇಳಿದ ಪತ್ರಕ್ಕೆ ಸಹಿ ಹಾಕುವ ದುಃಸ್ಥಿತಿಯಲ್ಲಿದ್ದಾರೆ’ ಎಂದರು.

ಅಧಿಕಾರ ಬಿಟ್ಟುಕೊಡುವ ಆಸೆಯಿಲ್ಲದೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಷ ನುಂಗಿದ ವಿಷಕಂಠನಾಗಿದ್ದೇನೆ ಎಂದಿದ್ದಾರೆ. ಆದರೆ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕುಟುಂಬ ರಾಜಕೀಯ ಮೇಲೆ ನಿಂತಿರುವ ಪಕ್ಷಗಳಾಗಿದ್ದು, ಎರಡೂ ಕುಟುಂಬಗಳನ್ನು ಉಳಿಸಲು ಅವರು ವಿಷಕಂಠನಾಗಿದ್ದು ನಿಜ. ಆದರೆ, ಜನರಿಗಾಗಿ ವಿಷ ನುಂಗಿಲ್ಲ ಎಂದರು.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕರ್ನಾಟಕದಲ್ಲಿ ₹42 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡುವುದಾಗಿ ನಾಯಕರು ಘೋಷಿಸಿದ್ದರು. ವಾಸ್ತವದಲ್ಲಿ ₹11 ಸಾವಿರ ಕೋಟಿ ಮಾತ್ರ ಮನ್ನಾ ಮಾಡಿದ್ದಾರೆ. ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಅನುದಾನ ಬಂದಿದೆ. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ 13 ನೇ ಹಣಕಾಸು ಯೋಜನೆಯಡಿ ಕರ್ನಾಟಕಕ್ಕೆ ₹88,583 ಕೋಟಿ ಅನುದಾನ ಬಂದಿತ್ತು. ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ₹2,22,506 ಕೋಟಿ ಅನುದಾನ ಬಂದಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಸಂಸದ ಕರಡಿ ಸಂಗಣ್ಣ, ರಾಜ್ಯ ಚುನಾವಣೆ ಉಸ್ತುವಾರಿ ಕಿರಣ ಮಹೇಶ್ವರಿ, ಬಿಜೆಪಿ ಸಂಘಟನಾ ಪ್ರಮುಖ ಅರುಣಕುಮಾರ್‌, ಉಸ್ತುವಾರಿ ಕಾರ್ಯದರ್ಶಿ ಮುರಳಿಧರ್‌ ರಾವ್‌ ಇದ್ದರು.

ವಲಸಿಗರು ಹೊರಕ್ಕೆ

‘ಕೇಂದ್ರದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾದರೆ, ದೇಶದಾದ್ಯಂತ ಅವಿತಿರುವ ವಿದೇಶಿ 40 ಲಕ್ಷ ವಲಸಿಗರನ್ನು ಹುಡುಕಿ ಹೊರಗೆ ಹಾಕುತ್ತೇವೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಘೋಷಿಸಿದರು.

ರಾಮಮಂದಿರವನ್ನು ಭವ್ಯವಾಗಿ ನಿರ್ಮಾಣ ಮಾಡಲು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು. ನಿಶ್ಚಿತವಾಗಿ ದೇಶದ ಜನರು ಮುಂದಿನ ಪ್ರಧಾನಿ ನರೇಂದ್ರ ಮೋದಿ ಅವರೇ ಎಂಬುದನ್ನು ನಿರ್ಧರಿಸಿದ್ದಾರೆ ಎಂದರು.

ಘಟಬಂದನ್‌ ನಾಯಕ ಯಾರು?

ರಾಹುಲ್‌ಗಾಂಧಿ, ದೇವೇಗೌಡರು, ಮಾಯಾವತಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ರಚಿಸಿಕೊಂಡ ಘಟಬಂಧನ್‌ದ ನಾಯಕರು ಯಾರು ಎಂಬುದನ್ನು ರಾಹುಲ್‌ಗಾಂಧಿ ಜನರಿಗೆ ಹೇಳಬೇಕು ಎಂದು ಸವಾಲು ಹಾಕಿದರು.

ಪ್ರತಿದಿನ ಒಬ್ಬರು ಪ್ರಧಾನಿಯಾಗುವ ಕನಸು ಅವರದ್ದಾಗಿದೆ. ಇಂಥವರಿಂದ ಜನರು ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT