ಮಂಗಳವಾರ, ಆಗಸ್ಟ್ 3, 2021
21 °C
ವರ್ಷ ಪೂರ್ಣಗೊಳ್ಳುವ ಮುನ್ನ ಪಾಲಿಕೆ ಆಯುಕ್ತರ ಎತ್ತಂಗಡಿ, ಪಾಂಡ್ವೆ ಜೆಸ್ಕಾಂಗೆ ವರ್ಗ

ಕಲಬುರ್ಗಿ | ಕಮಿಷನರ್‌ ಕುರ್ಚಿ ಮತ್ತೆ ಖಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ರಾಹುಲ್ ತುಕಾರಾಮ ಪಾಂಡ್ವೆ ಅವರನ್ನು ಕಲಬುರ್ಗಿಯ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜನೆ ಗೊಳಿಸಲಾಗಿದೆ. ಆದರೆ, ಪಾಲಿಕೆಗೆ ಬೇರೆ ಆಯುಕ್ತರನ್ನು ನಿಯೋಜಿಸಿಲ್ಲ.

ಈ ಬಗ್ಗೆ ರಾಜ್ಯ ಸರ್ಕಾರ ಸೋಮವಾರ ವರ್ಗಾವಣೆ ಆದೇಶ ಹೊರಡಿಸಿದ್ದು, ಹಾಲಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಗಪ್ರಿಯಾ ಅವರನ್ನು ಆ ಹುದ್ದೆಯಿಂದ ವರ್ಗಾವಣೆ ಮಾಡಿದೆ. ವಿಶೇಷವೆಂದರೆ ಅವರಿಗೂ ಬೇರೆ ಹುದ್ದೆ ತೋರಿಸಿಲ್ಲ.

2018ರ ಆಗಸ್ಟ್ 10ರಂದು ಡಾ.ರಾಗಪ್ರಿಯಾ ಅವರು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿಯಾಗಿ ಮರು ನಿಯೋಜನೆಗೊಂಡಿದ್ದರು. ಇದಕ್ಕೂ ಮುನ್ನ ಇದೇ ಹುದ್ದೆಯಲ್ಲಿದ್ದ ಅವರು ಸುದೀರ್ಘ ರಜೆ ತೆರಳಿದ್ದರು.

2019ರಲ್ಲಿ ಆಗಸ್ಟ್‌ 8ರಂದು ರಾಹುಲ್‌ ಅವರನ್ನು ಪಾಲಿಕೆಯ ಪ್ರಭಾರಿ ಆಯಕ್ತರಾಗಿ ನಿಯೋಜನೆ ಮಾಡಲಾಗಿತ್ತು. ಇದಕ್ಕೂ ಮುನ್ನ ಆಯುಕ್ತರಾಗಿದ್ದ ಫೌಜಿಯಾ ತರನ್ನುಮ್‌ ವರ್ಗವಾದ ಕಾರಣ, ಈ ನಿಯೋಜನೆ ಮಾಡಲಾಗಿತ್ತು.‌

ಅದೇ ಸೆಪ್ಟೆಂಬರ್‌ 7ಕ್ಕೆ ನೂತನ ಆಯುಕ್ತರಾಗಿ ದರ್ಶನ್‌ ಎಚ್.ವಿ. ಅವರನ್ನು ನಿಯೋಜನೆ ಮಾಡಲಾಗಿತ್ತು. ಅದರೊಂದಿಗೆ ಪಾಂಡ್ವೆ ಅವರನ್ನೂ ದಾವಣಗೆರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನಿಯೋಜಿಸಿತ್ತು. ಆದರೆ, ಸೆಪ್ಟೆಂಬರ್‌ 21ಕ್ಕೆ ಪಾಂಡ್ವೆ ಅವರನ್ನೇ ಪಾಲಿಕೆ ಆಯುಕ್ತರಾಗಿ ಮರಳಿ ನಿಯೋಜನೆ ಮಾಡಲಾಗಿತ್ತು.‌ ಎರಡು ವಾರ ಮಾತ್ರ ಸೇವೆ ಸಲ್ಲಿಸಿದ ದರ್ಶನ್‌ ಅವರನ್ನು ಎತ್ತಂಗಡಿ ಮಾಡಲಾಗಿತ್ತು.

ಶಾಸಕ ಪ್ರಿಯಾಂಕ್‌ ಖರ್ಗೆ ಕಿಡಿ
‘ಕಲಬುರ್ಗಿ ಜಿಲ್ಲೆಯಲ್ಲಿ‌ ಕೋವಿಡ್‌ ಉಗ್ರರೂಪ ತಳೆದಿರುವ ಸಂದರ್ಭದಲ್ಲಿ ಸೋಂಕು ನಿವಾರಣೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವ ಬದಲು, ಸರ್ಕಾರ ಅಧಿಕಾರಿಗಳ ವರ್ಗಾವಣೆಗೆ ಮುಂದಾಗಿದೆ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ.

ಮಹಾನಗರ ಪಾಲಿಕೆ ಕಮೀಷನರ್ ವರ್ಗಾವಣೆ ಬೆನ್ನಲ್ಲೆ ಸರಣಿ ಟ್ವಿಟ್ ಮಾಡಿದ ಅವರು, ‘ಪದೇ ಪದೇ ಆಯುಕ್ತರನ್ನು ಎತ್ತಂಗಡಿ ಮಾಡುತ್ತಿರುವುದು ಏಕೆ? ಪ್ರಸ್ತುತ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ‌, ವರ್ಗಾವಣೆ ಅನಗತ್ಯ ಕ್ರಮ’ ಎಂದಿದ್ದಾರೆ.

‘ನಾನು ಪದೇಪದೇ ಹೇಳುತ್ತಿದ್ದೇನೆ. ಅಧಿಕಾರಿಗಳ ವರ್ಗಾವಣೆ ಒಂದು ದಂಧೆಯಾಗಿ ಮಾರ್ಪಟ್ಟಿದ್ದು, ಇದರಿಂದಾಗಿ ಕಲಬುರ್ಗಿ ಭ್ರಷ್ಟಾಚಾರದ ಕೂಪದಂತಾಗಿದೆ. ಈ ಮುಂಚೆ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿ, ಆ ನಂತರ ತಡೆ‌ಹಿಡಿಯಲಾಗಿತ್ತು. ಈಗ ಕಮೀಷನರ್ ವರ್ಗಾವಣೆಯಾಗಿದೆ. ಅಧಿಕಾರಿಗಳ ವರ್ಗಾವಣೆ ಮಾಡಿಸುವುದರ ಬದಲು ಬಿಜೆಪಿ ನಾಯಕರು ಕೊರೊನಾ ವಿರುದ್ಧ ಹೋರಾಟಕ್ಕೆ ಪ್ರಾಮುಖ್ಯತೆ ನೀಡಲಿ’ ಎಂದೂ ಟೀಕಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.