ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಸಂಪೂರ್ಣ ಲಾಕ್‌ಡೌನ್‌ ಜಾರಿ

ಅನಗತ್ಯ ಹೊರಗೆ ಓಡಾಡದಂತೆ ನಾಗರಿಕರಿಗೆ ಎಚ್ಚರಿಕೆ, ನಿಯಮ ಉಲ್ಲಂಘಿಸುವವರ ಮೇಲೆ ಕ್ರಮ
Last Updated 4 ಜುಲೈ 2020, 14:31 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯ ಸರ್ಕಾರದ ನಿರ್ದೇಶನದಂತೆ ಜುಲೈ 5ರ ಭಾನುವಾರ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಮಾಡಲು ನಿರ್ಧರಿಸಲಾಗಿದೆ. ತುರ್ತು ಹಾಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಯಾವುದೇ ವ್ಯವಹಾರ ನಡೆಸಬಾರದು ಎಂದು ಜಿಲ್ಲಾಡಳಿತ ತಾಕೀತು ಮಾಡಿದೆ.

‘ಭಾನುವಾರ ಸಂಪೂರ್ಣ ಲಾಕ್‍ಡೌನ್ ಮತ್ತು ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಕಲಬುರ್ಗಿ ನಗದ ಜನ ಮನೆಯಲ್ಲೇ ಇರಬೇಕು. ವ್ಯಾಪಾರ ವಹಿವಾಟು, ವಾಹನ ಸಂಚಾರ, ಪಾದಚಾರಿಗಳು ಎಲ್ಲೆಂದರಲ್ಲಿ ಓಡಾಡುವುದನ್ನೂ ನಿಷೇಧಿಸಲಾಗಿದೆ. ಎಲ್ಲಿಯೂ ನಾಲ್ಕು ಜನರು ಗುಂಪುಗೂಡಿ ನಿಲ್ಲಕೂಡದು. ತೀರ ಅವಶ್ಯಕತೆ, ಸಕಾರಣ ಇದ್ದವರಿಗೆ ಮಾತ್ರ ಓಡಾಡಲು ಬಿಡಲಾಗುವುದು. ಇಲ್ಲದಿದ್ದರೆ ವಾಹನಗಳನ್ನೂ ಸೀಜ್‌ ಮಾಡಿ, ದಂಡ ವಿಧಿಸಬೇಕಾಗುತ್ತದೆ’ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

‘ಈ ಅವಧಿಯಲ್ಲಿ ನಗರದಾದ್ಯಂತ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ಎಲ್ಲ ಸಾರ್ವಜನಿಕ ಚಟುವಟಿಕೆ ಮತ್ತು ಸಂಚಾರವನ್ನು ನಿಷೇಧಿಸಲಾಗಿದೆ. ಇದಲ್ಲದೇ ಪ್ರತಿದಿನ ರಾತ್ರಿ 8 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಕೂಡ ಸಂಪೂರ್ಣ ಲಾಕ್‍ಡೌನ್ ಇದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ನಿಷೇಧಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಈ ಬಗ್ಗೆ ನಗರ ಪೊಲೀಸ್‌ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಶನಿವಾರವೇ ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಿದರು. ಪೊಲೀಸ್‌ ಗಸ್ತು ವಾಹನಗಳು ಕೂಡ ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಿ, ಲಾಕ್‌ಡೌನ್‌ ಹಾಗೂ ಕರ್ಫ್ಯೂ ನಿಯಮಗಳನ್ನು ಪಾಲಿಸಿ, ಇಲಾಖೆಯೊಂದಿಗೆ ಸಹಕರಿಸಬೇಕು. ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ’‌ ಎಂದೂ ಮಾಹಿತಿ ನೀಡಲಾಗುತ್ತಿದೆ.

ನಗರದ ಜನನಿಬಿಡ ಪ್ರದೇಶಗಳಾದ ಸರ್ದಾರ್‌ ವಲ್ಲಭಭಾಯಿ ಪ‍ಟೇಲ್‌ ವೃತ್ತ, ಕೇಂದ್ರ ಬಸ್ ನಿಲ್ದಾಣ, ನಗರ ಬಸ್‌ ನಿಲ್ದಾಣ, ಹಳೆ ಜೇವರ್ಗಿ, ಸೂಪರ್ ಮಾರ್ಕೆಟ್, ಗಂಜ್ ಪ್ರದೇಶ, ಶಹಾಬಜಾರ್‌, ಸೇಡಂ ರಸ್ತೆ, ದರ್ಗಾ ಪ್ರದೇಶ, ಮೋಮಿನಪುರ ಸೇರಿದಂತೆ ಎಲ್ಲೆಡೆ ಪೊಲೀಸ್‌ ವಾಹನಗಳು ಗಸ್ತು ತಿರುಗಿ ಅರಿವು ಮೂಡಿಸಿದವು.‌

ಮುಖ್ಯ ರಸ್ತೆಗಳಲ್ಲಿನ ಅಂಗಡಿ ಮುಂಗಟ್ಟು, ಬಸ್‌ ಹಾಗೈ ರೈಲು ನಿಲ್ದಾಣಗಳ ವಾಣಿಜ್ಯ ಚಟುವಟಿಕೆ, ಸೂಪರ್‌ ಮಾರ್ಕೆಟ್‌ ಕೂಡ ಬಂದ್‌ ಇರಲಿದೆ.

ಬಸ್‌ ಸಂಚಾರ ಪೂರ್ಣ ಬಂದ್‌

ಜಿಲ್ಲೆಯ ಒಳಗೆ ಹಾಗೂ ಅಂತರ ಜಿಲ್ಲಾ ಸರ್ಕಾರಿ ಬಸ್‌ ಸಂಚಾರ ಕೂಡ ಸಂಪೂರ್ಣ ಸ್ಥಗಿತಗೊಳ್ಳಿದೆ ಎಂದು ಈಶಾನ್ಯ ಸಾರಿಗೆಯ ಮುಖ್ಯ ಸಂಚಾರಿ ವ್ಯವಸ್ಥಾಪಕ ಡಿ. ಕೊಟ್ರಪ್ಪ ತಿಳಿಸಿದ್ದಾರೆ.‌

‘ಜಿಲ್ಲೆಯ ಒಳಗೆ ಬಸ್‌ ಸಂಚಾರ ನಿಲ್ಲಿಸಲು ಮೊದಲೇ ನಿರ್ಧರಿಸಲಾಗಿತ್ತು. ಆದರೆ, ಕೆಲವು ಪ್ರಯಾಣಿಕರು ಬೆಂಗಳೂರು ಮತ್ತಿತರ ದೂರದ ಊರುಗಳಿಗೆ ಮುಂಚಿತವಾಗಿಯೇ ಟಿಕೆಟ್‌ ಬುಕ್‌ ಮಾಡಿದ್ದರು. ಕನಿಷ್ಠ ಸೀಟ್‌ಗಳು ಭರ್ತಿಯಾಗದ ಕಾರಣ ದೂರ ಸಂಚಾರವನ್ನೂ ನಿಲ್ಲಿಸಲಾಗಿದೆ. ಸೋಮವಾರ ಬೆಳಿಗ್ಗೆಯಿಂದ ಯಥಾ ಪ್ರಕಾರ ಬಸ್‌ಗಳು ಓಡಾಡಲಿವೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀಂ ತಿಳಿಸಿದರು.

ಭಾನುವಾರ ನಗರ ಸ್ತಬ್ಧಗೊಳ್ಳಲಿದೆ ಎಂಬ ವಿಷಯ ಮುಂಚಿತವಾಗಿಯೇ ಜನರಿಗೆ ತಿಳಿದಿದ್ದರಿಂದ, ಬಹಳಷ್ಟು ಜನ ಶನಿವಾರವೇ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಶನಿವಾರ ಇಡೀ ದಿನ ಸರ್ಕಾರಿ ಬಸ್‌ಗಳಲ್ಲಿ ಹೆಚ್ಚಿನ ಜನ ಓಡಾಡಿದ್ದಾರೆ. ಹೊರ ಜಿಲ್ಲೆಗಳಿಂದ ಬರುವ ಬಸ್‌ಗಳೂ ಭರ್ತಿಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT