ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆ ಸೋತರೆ ಜೈಲಿಗೆ: ಮಾಲೀಕಯ್ಯ

ಕಾಂಗ್ರೆಸ್–ಬಿಜೆಪಿಯಿಂದ ಸವಾಲ್ –ಜವಾಬ್
Last Updated 30 ಏಪ್ರಿಲ್ 2019, 14:34 IST
ಅಕ್ಷರ ಗಾತ್ರ

ಯಾದಗಿರಿ: ‘ನಮ್ಮ ಕುಟುಂಬ ₹50 ಸಾವಿರ ಕೋಟಿ ಅಕ್ರಮ ಆಸ್ತಿ ಹೊಂದಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್‌, ಮಾಲೀಕಯ್ಯ ಗುತ್ತೇದಾರ ಅವರು ಅದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಖರ್ಗೆ ಅವರು ಐದು ವರ್ಷ ಮೋದಿ ವಿರುದ್ಧ ಹೋರಾಟ ನಡೆಸಿದ್ದಾರೆ. ಇಡಿ, ಸಿಬಿಐ ಅವರ ಕೈಯಲ್ಲೇ ಇತ್ತು. ತನಿಖೆ ನಡೆಸಬೇಕಿತ್ತು. ಏಕೆ ಮಾಡಲಿಲ್ಲ’ ಎಂದು ಪ್ರಶ್ನಿಸಿದ ಅವರು, ‘ಆರೋಪ ಸಾಬೀತುಪಡಿಸದಿದ್ದರೆ ಅವರು ರಾಜಕೀಯ ನಿವೃತ್ತಿ ಪಡೆಯಬೇಕು’ ಎಂದರು.

‘ಐಟಿ ದಾಳಿ ನಡೆಸಿದರೆ ದಲಿತ ವಿರೋಧಿ ಎಂಬ ಹಣೆಪಟ್ಟಿ ಬರುತ್ತದೆ ಎಂದು ಬಿಜೆಪಿಯವರು ಹೇಳುತ್ತಾರಲ್ಲ’ ಎಂಬ ಪ್ರಶ್ನೆಗೆ ‘ಕಾನೂನು ಎಲ್ಲರಿಗೂ ಒಂದೇ. ದಲಿತರಿಗೆ ಬೇರೆ ಕಾನೂನು ಇಲ್ಲ. ಸಮುದಾಯಗಳನ್ನು ನೋಡಿಕೊಂಡು ಐಟಿ ದಾಳಿ ನಡೆಸುತ್ತಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ಯಡಿಯೂರಪ್ಪ, ಆರ್‌ಎಸ್‌ಎಸ್‌ಗೆ ಕೃಪೆಯಿಂದ ಎನ್.ರವಿಕುಮಾರ್ ಶಾಸಕರಾಗಿದ್ದಾರೆ. ಅವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನಾನು ಜನರಿಂದ ಆಯ್ಕೆ ಆಗಿದ್ದೇನೆ. ಅವರು ಚುನಾವಣೆ ಎದುರಿಸಿ ಗೆದ್ದು ತೋರಿಸಲಿ’ ಎಂದು ಛೇಡಿಸಿದರು.

ಖರ್ಗೆ ಸೋತರೆ ಜೈಲಿಗೆ- ಮಾಲೀಕಯ್ಯ

ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ₹50 ಸಾವಿರ ಕೋಟಿ ಅಕ್ರಮ ಆಸ್ತಿಯನ್ನು ಸಂಪಾದಿಸಿದ್ದಾರೆ. ಒಂದು ವೇಳೆ ಈ ಚುನಾವಣೆಯಲ್ಲಿ ಅವರು ಸೋತರೆ ಜೈಲಿಗೆ ಹೋಗುವುದು ಖಚಿತ’ ಎಂದು ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ಹೇಳಿದರು.

ನಗರದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಈಡಿಗ ಸಮುದಾಯದ ಚಿಂತನ ಸಭೆಯಲ್ಲಿ ಅವರು ಮಾತನಾಡಿದರು.

‘ಚುನಾವಣೆಯಲ್ಲಿ ಯಾವ ಕಾರಣಕ್ಕೂ ಸೋಲಬಾರದು ಎಂದು ದುಡ್ಡು ಹಂಚೋಕೆ ಮುಂದಾಗಿದ್ದಾರೆ. ಬರಗಾಲ ಸಂದರ್ಭದಲ್ಲಿ ದುಡ್ಡು ಸಿಗುವುದು ಕಷ್ಟ. ಖರ್ಗೆ ದುಡ್ಡು ಕೊಟ್ಟರೆ ತೆಗೆದುಕೊಳ್ಳಿ, ಬಿಜೆಪಿಗೆ ಮತ ಹಾಕಿ’ ಎಂದು ಕಿಚಾಯಿಸಿದರು.

‘ಕಲಬುರ್ಗಿಯಲ್ಲಿ ಅಪ್ಪ–ಮಗನ ರಾಜಕಾರಣಕ್ಕೆ ಇತಿಶ್ರೀ ಹಾಡಲು ಜಿಲ್ಲೆಯ ಮತದಾರರು ಮುಂದಾಗಿದ್ದಾರೆ. ಹೀಗಾಗಿಯೇ ಹುಲಿ ಮುಂದೆ ಹೆಬ್ಬುಲಿಯನ್ನು ತಂದು ನಿಲ್ಲಿಸಿದ್ದೇವೆ. ಡಾ.ಉಮೇಶ ಜಾಧವ ಸ್ವಾತಂತ್ರ್ಯ ಹೋರಾಟಗಾರನ ಮಗ. ಜಾಧವ ದುಡ್ಡು ತೆಗೆದುಕೊಂಡು ಬುಕ್ ಆಗಿದ್ದಾರೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನಾವು ಕಾಂಗ್ರಸ್‌ನಲ್ಲಿ ಆದ ಅನ್ಯಾಯವನ್ನು ಕಂಡು ಜಾಧವ ಅವರನ್ನು ಬಿಜೆಪಿಗೆ ಕರೆ ತಂದಿದ್ದೇವೆ’ ಎಂದು ತಿಳಿಸಿದರು.

‘ಖರ್ಗೆ ಧೃತರಾಷ್ಟ್ರ, ಪ್ರಿಯಾಂಕ್ ಖರ್ಗೆ ದುರ್ಯೋಧನ ಇದ್ದ ಹಾಗೆ. ಖರ್ಗೆಯನ್ನು ಸೋಲಿಸಲು ಮಗನೇ ಸಾಕು. ದೇಶಕ್ಕೆ ಒಬ್ಬ ಮಹಾನ್ ನಾಯಕ ಸಿಕ್ಕಿದ್ದಾನೆ. ಬಿಜೆಪಿ ನಮ್ಮ ಸಮಾಜವನ್ನು ಗುರುತಿಸಿ 10 ಕ್ಷೇತ್ರಗಳಲ್ಲಿ ಟಿಕೆಟ್ ಕೊಟ್ಟಿದೆ. ಕಾಂಗ್ರೆಸ್ ಎರಡು ಸೀಟು ಹಾಗೂ ಜೆಡಿಎಸ್‌ ಒಂದು ಸೀಟ್ ಕೊಟ್ಟಿವೆ. ಕಳೆದ ಚುನಾವಣೆಯಲ್ಲಿ ನನ್ನನ್ನು ಗುರಿಯಾಗಿಸಿಕೊಂಡು ಸೋಲಿಸಿದ್ದಾರೆ. ಜಿಲ್ಲೆಯಲ್ಲಿ 80 ಸಾವಿರ ಈಡಿಗ ಮತದಾರರು ಇದ್ದಾರೆ. ಈ ಚುನಾವಣೆಯ ಚಿತ್ರಣವನ್ನು ಬದಲಿಸುವ ಶಕ್ತಿ ನಮ್ಮ ಸಮಾಜಕ್ಕೆ ಇದೆ’ ಎಂದು ಸವಾಲು ಹಾಕಿದರು.ಶಾಸಕ ಸುಭಾಷ ಆರ್.ಗುತ್ತೇದಾರ, ನಿತಿನ್ ಗುತ್ತೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT