ಶನಿವಾರ, ಜನವರಿ 28, 2023
20 °C
‘ಖರ್ಗೆ ಕುಟುಂಬದ ವಿರುದ್ಧ ಮಾತನಾಡಿದ ರೌಡಿಶೀಟರ್ ವಿರುದ್ಧ ಕ್ರಮ ಕೈಗೊಳ್ಳಿ’

ಕಮಿಷನರ್ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ನಗರ ಪೊಲೀಸ್ ಕಮಿಷನರ್ ಡಾ. ವೈ.ಎಸ್. ರವಿಕುಮಾರ್ ಅವರು ತಮ್ಮ ಪತ್ನಿ ಆಯೋಜಿಸಿದ ಕಾರ್ಯಕ್ರಮಕ್ಕೆ ರೌಡಿಶೀಟರ್ ಮಣಿಕಂಠ ರಾಠೋಡನಿಂದ ಹಣ ಪಡೆದು ಸಮರ್ಥನೆಯನ್ನೂ ಮಾಡಿಕೊಂಡಿದ್ದು, ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಪೊಲೀಸರು ರೌಡಿಗಳೊಂದಿಗೆ ಶಾಮೀಲಾಗಿದ್ದಾರೆ ಎಂಬ ಸಂದೇಶ ಹೋಗುತ್ತದೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಅಲ್ಲಮಪ್ರಭು ಪಾಟೀಲ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗಡಿಪಾರು ಆದೇಶವನ್ನು ಪ್ರಶ್ನಿಸಿ ಆರೋಪಿ ಮಣಿಕಂಠ ತಡೆಯಾಜ್ಞೆ ತಂದಿದ್ದು, ಅದನ್ನು ಪ್ರಶ್ನಿಸಲು ಪೊಲೀಸ್ ಇಲಾಖೆ ಮೇಲ್ಮನವಿ ಸಲ್ಲಿಸಬೇಕಿತ್ತು. ಆದರೆ, ಮೇಲ್ಮನವಿ ಸಲ್ಲಿಸಿಲ್ಲವೇಕೆ? ಆತನಿಂದ ಕಮಿಷನರ್ ಪತ್ನಿ ಪಡೆದ ಹಣಕ್ಕೆ ಇದು ಋಣ ಸಂದಾಯವೇ’ ಎಂದು ಪ್ರಶ್ನಿಸಿದರು.

‘ಯಾವ ವ್ಯಕ್ತಿಯನ್ನು ರೌಡಿ ಎಂದು ಹೇಳಿದ್ದೀರೊ ಆತನಿಂದ ಹಣ ಪಡೆಯುವ ಮೂಲಕ ಏನನ್ನು ಸಾಬೀತು ಮಾಡಲು ಹೊರಟಿದ್ದೀರಿ. ಕೆಲ ದಿನಗಳ ಹಿಂದೆ ಎಫ್‌ಐಆರ್‌ನಲ್ಲಿ ಹೆಸರಿಲ್ಲದ ವ್ಯಕ್ತಿಯನ್ನು ಬಂಧನ ಮಾಡಿದ್ದೀರಿ. ಆದರೆ ಸಾರ್ವಜನಿಕವಾಗಿ ಹಲವು ಮುಖಂಡರ ಹೆಸರು ಹೇಳುತ್ತಿರುವ ರೌಡಿ ಶೀಟರ್ ಬಂಧನ ಏಕಿಲ್ಲ’ ಎಂದು ಪೊಲೀಸ್‌ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ‘ಕೂಡಲೇ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದರು.

‘ಅಧಿಕಾರ ದುರುಪಯೋಗ ಮಾಡಿಕೊಂಡು ರೌಡಿ ಶೀಟರ್‌ಗಳನ್ನು ರಕ್ಷಿಸುತ್ತಿರುವ, ಪತ್ನಿಯ ಮೂಲಕ ಕ್ರಿಮಿನಲ್‌ ಹಿನ್ನೆಲೆಯುಳ್ಳವರಿಂದ ಹಣ ಸಂಗ್ರಹ ಮಾಡಿರುವ ಕಲಬುರಗಿ ಪೊಲೀಸ್ ಕಮಿಷನರ್ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಸರ್ಕಾರ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

‘ಕಾಂಗ್ರೆಸ್‌ನ ನಾಯಕರಾದ ಖರ್ಗೆ ಪರಿವಾರದವರು ಇಲ್ಲಿಯವರೆಗೆ ಇಂತಹ ಕೆಟ್ಟ ಕೆಲಸ ಮಾಡಿಲ್ಲ. ಪೊಲೀಸ್ ಇಲಾಖೆಯೇ ಗುರುತಿಸಿರುವ ರೌಡಿ ಶೀಟರ್ ಒಬ್ಬ ಇಂತಹ ನಾಯಕರ ವಿರುದ್ಧ ಆರೋಪ ಮಾಡಿದ್ದರೂ ಪೊಲೀಸ್ ಇಲಾಖೆ ಕೈ ಕಟ್ಟಿ ಕುಳಿತಿರುವುದು ಏಕೆ’ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ಸಂತೋಷ ಪಾಟೀಲ ದಣ್ಣೂರ, ಮಹಾನಗರ ಪಾಲಿಕೆ ಸದಸ್ಯ ಸಚಿನ್ ಶಿರವಾಳ, ಪಾಲಿಕೆ ಮಾಜಿ ಸದಸ್ಯ ಹುಲಿಗೆಪ್ಪ ಕನಕಗಿರಿ, ಈರಣ್ಣ ಝಳಕಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು