ನೀರು ಕೊಡಿ ನೀರು; ಪಾಲಿಕೆ ಸದಸ್ಯರ ಆಗ್ರಹ

7
ಕುಡಿಯುವ ನೀರು ಸರಬರಾಜು; ಪಾಲಿಕೆಯಲ್ಲಿ ತುರ್ತು ಸಭೆ

ನೀರು ಕೊಡಿ ನೀರು; ಪಾಲಿಕೆ ಸದಸ್ಯರ ಆಗ್ರಹ

Published:
Updated:

ಕಲಬುರ್ಗಿ: ‘ನಮ್ಮ ಬಡಾವಣೆಗೆ ನೀರು ಕೊಡಿ, ಎಷ್ಟು ದಿನಕ್ಕೊಮ್ಮೆ ನೀರು ಬಿಡುತ್ತೀರಿ ಹೇಳಿ, ಟ್ಯಾಂಕರ್ ಮೂಲಕವಾದರೂ ನೀರು ಕೊಡಿ ಎಂದು ಪಾಲಿಕೆ ಸದಸ್ಯರು ಪಕ್ಷಬೇಧ ಮರೆತು ಒಕ್ಕೊರಲಿನಿಂದ ಆಗ್ರಹಿಸಿದರು.

ನಗರದ ಇಂದಿರಾ ಸ್ಮಾರಕ ಭವನ (ಟೌನ್‌ ಹಾಲ್‌)ದಲ್ಲಿ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಶುಕ್ರವಾರ ಆಯೋಜಿಸಿದ್ದ ತುರ್ತು ಸಭೆಯಲ್ಲಿ ಮಾತನಾಡಿದ ಸದಸ್ಯರು ಕುಡಿಯುವ ನೀರಿನ ಸಮಸ್ಯೆಯನ್ನು ಸಭೆಯ ಗಮನಕ್ಕೆ ತಂದರು.

ರಮೇಶ ಕಮಕನೂರ ಮಾತನಾಡಿ, ‘ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಸಂಬಳಕ್ಕಾಗಿ 14ನೇ ಹಣಕಾಸು ಆಯೋಗದಿಂದ ₹60 ಲಕ್ಷ ತೆಗೆದುಕೊಂಡಿದ್ದಾರೆ. ಆದರೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಶ್ನಿಸಿದರೆ ಅನುದಾನ ಇಲ್ಲ ಎಂದು ಹೇಳುತ್ತಾರೆ. ಹಾಗಾದರೆ ಬಡಾವಣೆಯ ಜನರಿಗೆ ನಾವು ಏನು ಉತ್ತರ ಕೊಡಬೇಕು’ ಎಂದು ಖಾರವಾಗಿ ಪ್ರಶ್ನಿಸಿದರು.

ಗೀತಾ ವಾಡೇಕರ್ ಮಾತನಾಡಿ, ‘ನಮ್ಮ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಮೂರು ಕೊಳವೆಬಾವಿ ಕೊರೆಸಿ ಎರಡು ವರ್ಷವಾಯಿತು. ಇದುವರೆಗೂ ಮೋಟಾರ್ ಪಂಪ್ ಅಳವಡಿಸಿಲ್ಲ. ವಿಠಲ ನಗರದ ಜನರು ಚರಂಡಿ ನೀರನ್ನೇ ಕುಡಿಯುವಂತಾಗಿದೆ. ಇದಕ್ಕೆ ಕಾರಣರಾದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಹುಲಿಗೆಪ್ಪ ಕನಕಗಿರಿ ಮಾತನಾಡಿ, ‘ಪ್ರತಿ ಬಾರಿ ಸಭೆ ಕರೆದು, ಚರ್ಚೆ ನಡೆಸಿದರೆ ಪ್ರಯೋಜನವಿಲ್ಲ. ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಗೆ ಕೋಟ್ಯಂತರ ರೂಪಾಯಿ ಅನುದಾನ ಬಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ವಿಶೇಷ ಯೋಜನೆ ರೂಪಿಸಬೇಕು’ ಎಂದು ಸಲಹೆ ನೀಡಿದರು.

ವಿಠಲ ಜಾಧವ್, ವಿಶಾಲ ದರ್ಗಿ, ಪರಶುರಾಮ ನಸಲವಾಯಿ, ಸೈಯದ್ ಅಹಮ್ಮದ್, ಭೀಮರೆಡ್ಡಿ ಪಾಟೀಲ, ಮೀನಾಕ್ಷಿ ಬಂಡಿ, ಫಯಾಜ್ ಹುಸೇನ್ ಅವರು, ‘ಕುರಿಯುವ ನೀರು ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ತೀವ್ರ ಸಮಸ್ಯೆ ಇರುವ ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ ಪಂಚಾಳ ಮಾತನಾಡಿ, ‘ಭೀಮಾ ನದಿಯಿಂದ ಪ್ರತಿ ನಿತ್ಯ 52 ದಶಲಕ್ಷ ಲೀಟರ್ ಹಾಗೂ ಬೆಣ್ಣೆತೊರಾದಿಂದ 20 ದಶಲಕ್ಷ ಲೀಟರ್ ನೀರನ್ನು ಪಡೆಯಲಾಗುತ್ತಿದೆ. ಇನ್ನೂ 10 ದಶಲಕ್ಷ ಲೀಟರ್ ನೀರಿನ ಕೊರತೆ ಇದೆ. 64 ಕೊಳವೆಬಾವಿ ಕೊರೆಸಲು ಯೋಜನೆ ರೂಪಿಸಲಾಗಿದೆ. ನೀರು ಸರಬರಾಜಿಗಾಗಿ ಆರು ಟ್ಯಾಂಕರ್‌ಗಳಿವೆ. ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಕಲಬುರ್ಗಿ ಉತ್ತರ ವಲಯದ ವಾರ್ಡ್‌ ಸಂಖ್ಯೆ 1,3,5,7,8,9,11,13,15,16,17,23,24,25,27 ಮತ್ತು ಕಲಬುರ್ಗಿ ದಕ್ಷಿಣ ವಲಯದ ವಾರ್ಡ್ ಸಂಖ್ಯೆ 31,33,43,44,45,47ರಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಇದೆ. ಉಳಿದ ವಾರ್ಡ್‌ಗಳಿಗೆ ನಿಯಮಿತವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !