ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಡ್ಡಿ ಹಾಕಿದವರಿಗಾದರೂ ಉದ್ಯೋಗ ಕೊಡಿ’

Last Updated 6 ಏಪ್ರಿಲ್ 2018, 10:51 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಹಿಂದುತ್ವದ ಹೆಸರಿನಲ್ಲಿ ಜನವಿರೋಧಿ ಸಮಾಜ ಕಟ್ಟುತ್ತಿರುವ ಪ್ರಧಾನಿ ಮೋದಿ ಅವರೇ ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ, ಬಡವರಿಗೆ ಉದ್ಯೋಗ ನೀಡಲಿಲ್ಲ. ಕೊನೆಯ ಪಕ್ಷ ನಿಮ್ಮ ಹಿಂದೆ ಚಡ್ಡಿ ಹಾಕಿ, ಲಾಠಿ ಹಿಡಿದು ಓಡಾಡುವವರಿಗಾದರೂ ಉದ್ಯೋಗ ನೀಡಿ’ ಎಂದು ಗುಜರಾತ್ ಶಾಸಕ ಜಿಗ್ನೇಶ್‌ ಮೇವಾನಿ ಛೇಡಿಸಿದರು.ಎನ್‌ಡಿವಿ ಮೈದಾನದಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಗುರುವಾರ ಹಮ್ಮಿಕೊಂಡಿದ್ದ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಾವು ಜನರ ಅಗತ್ಯಗಳಾದ ಅನ್ನ, ಬಟ್ಟೆ, ವಸತಿ, ಉದ್ಯೋಗ ವಿಷಯಗಳ ಕುರಿತು ಧ್ವನಿ ಎತ್ತಿದಾಗಲೆಲ್ಲ ಅವರು ಗೋವು, ಮಂದಿರ, ಹಿಂದುತ್ವ ಕುರಿತು ಮಾತನಾಡುತ್ತಾರೆ. ಜನರ ಬದುಕಿಗಿಂತ ಅವರಿಗೆ ಸನಾತನ ಧರ್ಮ, ಜಾತಿ, ಪುರಾಣ ಮುಖ್ಯವಾಗಿದೆ’ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

‘ಜನರಿಗೆ ಆಸೆ ತೋರಿಸಿ ಚುನಾವಣೆ ಗೆದ್ದ ಮೋದಿ ಅವರು ಏಕೆ ಕಪ್ಪು ಹಣ ತರಲಿಲ್ಲ? ನಮ್ಮ ಖಾತೆಗೆ ₹ 15 ಲಕ್ಷ ಏಕೆ ಹಾಕಲಿಲ್ಲ? 2 ಕೋಟಿ ಉದ್ಯೋಗ ಏಕೆ ಸೃಷ್ಟಿಸಲಿಲ್ಲ ಎಂದು ಅಡ್ಡ ಹಾಕಿ ಕೇಳಿ. ಚುನಾವಣೆ ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಮನೆಮನೆಗೆ, ಶಾಲಾ, ಕಾಲೇಜುಗಳಿಗೆ, ಅಂಗಡಿ, ಹೋಟೆಲ್‌ಗಳಿಗೆ ತೆರಳಿ ಈ ಕುರಿತು ಪ್ರಶ್ನಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಿ’ ಎಂದು ಸಲಹೆ ನೀಡಿದರು.

‘ಜಾತಿವಾದದ ಭೂತ ಹಿಡಿದಿಲ್ಲ’: ‘ಕೆಲವರು ನನಗೆ ಭೂತ ಮೆಟ್ಟಿಕೊಂಡಿದೆ ಎಂದು ಬರೆಯುತ್ತಾರೆ. ಹೌದು. ನನಗೆ ಅಂಬೇಡ್ಕರ್, ಗಾಂಧಿ, ಲಂಕೇಶ್, ತೇಜಸ್ವಿ ಭೂತ ಹಿಡಿದಿದೆ. ನಿಮ್ಮ ರೀತಿಯಲ್ಲಿ ಜಾತೀವಾದದ ಭೂತ ಹಿಡಿದಿಲ್ಲ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡದ ಅಮಾನವೀಯ, ಶಿಲಾಯುಗಕ್ಕೆ ಜನರನ್ನು ಕರೆದುಕೊಂಡು ಹೋಗುವ ದುರುದ್ದೇಶದ ಭೂತ ಹಿಡಿದಿಲ್ಲ. ನನ್ನ ನಾಡಿನ ಈ ಕ್ಷಣದ ಆತಂಕದ ಭೂತ ಹಿಡಿದಿದೆ’ ಎಂದು ನಟ ಪ್ರಕಾಶ್ ರೈ ತಿರುಗೇಟು ನೀಡಿದರು.

‘ಸಂಘ ಪರಿವಾರದ ಜನರಿಗೆ ಗೋ ಮೂತ್ರ ಮಾತ್ರ ಗೊತ್ತು. ದಯಮಾಡಿ ನೀವು ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು ನಿತ್ಯ ಎರಡು ಲೋಟ ಅದನ್ನೇ ಕುಡಿಯಿರಿ. ಗೋಮೂತ್ರಕ್ಕೆ, ಸೆಗಣಿ ಬೆರೆಸಿ ಬಟ್ಟೆ ತೊಳೆದುಕೊಳ್ಳಿ’ ಎಂದು ಕಿಚಾಯಿಸಿದರು.

ಪ್ರಕಾಶ್ ರೈ, ಮೇವಾನಿ ಭೇಟಿ ವಿರೋಧಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿದರು.

‘ದನ ಏನು ಅವರಪ್ಪನಾ?’

ಪ್ರಸ್ತುತ ಸನ್ನಿವೇಶದಲ್ಲಿ ಜನರನ್ನೇ ಕಾಪಾಡಲು ಸಾಧ್ಯವಾಗುತ್ತಿಲ್ಲ. ಇಂತಹ ಸ್ಥಿತಿಯ ಮಧ್ಯೆ ದನ ಕಾಯುವ ಸ್ವಾಮೀಜಿಗಳು ಹುಟ್ಟಿಕೊಂಡಿದ್ದಾರೆ. ಮಾತೆತ್ತಿದ್ದರೆ ಗೋ ಮಾತೆ ಎನ್ನುತ್ತಾರೆ. ದನ ಏನು ಅವರಪ್ಪನಾ ಎಂದು ಚಿತ್ರದುರ್ಗ ಛಲವಾದಿ ಗುರುಪೀಠದ ಬಸವ ನಾಗಿದೇವ ಶರಣರು ಪ್ರಶ್ನಿಸಿದರು. ರಾಜ್ಯಾಂಗ, ನ್ಯಾಯಾಂಗದ ಜತೆಗೆ ಹೋಗಬೇಕಾದ ಜನರನ್ನು ಪಂಚಾಂಗದ ಜತೆಗೆ ಹೋಗುವಂತೆ ಮಾಡಲಾಗುತ್ತಿದೆ. ಯಂತ್ರ, ತಂತ್ರ, ತಾಯತವನ್ನು ನಂಬಿ ಯಾರೊಬ್ಬರೂ ಐಎಎಸ್‌, ಐಪಿಎಸ್‌ ಮಾಡುವುದಿಲ್ಲ. ಯುವಜನರು ಈ ವಿಷಯಗಳನ್ನು ಅರ್ಥೈಸಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT