ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘3 ವಾರದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ‘

ಶಹಾಬಾದ್‌ನ ಪಾಳು ಬಿದ್ದಿರುವ ಇಎಸ್‌ಐಸಿ ಆಸ್ಪತ್ರೆ ಪುನರ್‌ ಬಳಕೆ: ಸಚಿವ ನಿರಾಣಿ
Last Updated 18 ಮೇ 2021, 3:45 IST
ಅಕ್ಷರ ಗಾತ್ರ

ಶಹಾಬಾದ್‌: ದಶಕದಿಂದ ಬಳಕೆ ಇಲ್ಲದೇ ಪಾಳು ಬಿದ್ದಿರುವ ಶಹಾಬಾದ್‌ನ ಇಎಸ್ಐಸಿ ಆಸ್ಪತ್ರೆಯನ್ನು ಮುಂದಿನ ಮೂರು ವಾರಗಳಲ್ಲಿ ದುರಸ್ತಿ ಮಾಡಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸುವುದರ ಜೊತೆಗೆ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಸೋಮವಾರ ಇಎಸ್ಐಸಿ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕೋವಿಡ್ ಕೇರ್ ಸೆಂಟರ್ ಆರಂಭಿಸುವ ಕುರಿತಂತೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಜೊತೆ ಮಾತನಾಡಿದ್ದು, ಕಾರ್ಮಿಕ ಇಲಾಖೆಯಿಂದಲೇ ಆಸ್ಪತ್ರೆ ದುರಸ್ತಿ ಮಾಡಿಸಲಾಗುವುದು. ವೈದ್ಯ ಸಿಬ್ಬಂದಿ ಸೇವೆ ಜೊತೆಗೆ ಔಷಧಿಗಳನ್ನು ಸಹ ನೀಡುವುದಾಗಿ ಅವರು ತಿಳಿಸಿದ್ದಾರೆ. ಹೀಗಾಗಿ ಪ್ಲೋರಿಂಗ್ ದುರಸ್ತಿ, ವಿದ್ಯುದೀಕರಣ, ಸುಣ್ಣ–ಬಣ್ಣ, ಬೋರ್‌ವೆಲ್ ರೀಚಾರ್ಜ್ ಸೇರಿದಂತೆ ಸ್ವಚ್ಛತಾ ಕಾರ್ಯವನ್ನು ತಕ್ಷಣ ಕೈಗೊಳ್ಳಬೇಕು’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಅಣ್ಣೆಪ್ಪ‌ ಕುದರಿ ಅವರಿಗೆ ಸಚಿವರು‌ ನಿರ್ದೇಶನ ನೀಡಿದರು.

4.5 ಎಕರೆ‌ ವಿಶಾಲ ಪ್ರದೇಶ ಮತ್ತು ಉತ್ತಮ ಹವಾಗುಣ ಹೊಂದಿರುವ ಇಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲು ಸೂಕ್ತ ಸ್ಥಳವಾಗಿದೆ. ಸೆಂಟರ್ ಪ್ರಾರಂಭಿಸಲು ಬೇಕಾದ ವೈದ್ಯಕೀಯ ಉಪಕರಣಗಳು ಹಾಗೂ ಇನ್ನಿತರ ಮೂಲಸೌಕರ್ಯಗಳ ಅವಶ್ಯಕತೆ ಬಗ್ಗೆ ಪಟ್ಟಿ ಕೊಡಬೇಕು. ಕೇಂದ್ರ ಸರ್ಕಾರದೊಂದಿಗೆ ‌ಚರ್ಚಿಸಿ ಮುಂದಿನ 2 ತಿಂಗಳಿನಲ್ಲಿ ಇದನ್ನು ಪೂರ್ಣ ಪ್ರಮಾಣದ ಅಸ್ಪತ್ರೆಯಾಗಿ ಮಾರ್ಪಡಿಸಲು ಪ್ರಯತ್ನಿಸಲಾಗುವುದು. ಈ ನಿಟ್ಟಿನಲ್ಲಿಯೂ ಇದಕ್ಕೆ ಅವಶ್ಯವಿರುವ ಸಿಬ್ಬಂದಿ,‌ ಉಪಕರಣಗಳ ಬಗ್ಗೆ ಮಾಹಿತಿ‌ ನೀಡುವಂತೆ ತಾಲ್ಲೂಕು ಅರೋಗ್ಯಾಧಿಕಾರಿ ಡಾ.ದೀಪಕ ಪಾಟೀಲ ಅವರಿಗೆ ಸೂಚನೆ‌ ನೀಡಿದರು.

ಬೋಯಿಂಗ್ ಇಂಡಿಯಾ ಸಂಸ್ಥೆ‌ಯು ಜಿಲ್ಲೆಯಲ್ಲಿ 250 ಆಮ್ಲಜನಕ ಬೆಡ್ ಆಸ್ಪತ್ರೆ ಸ್ಥಾಪಿಸಲು‌ ಮುಂದೆ ಬಂದಿದ್ದು, ಪ್ರಸ್ತುತ ಜಾಗದ ಹುಡುಕಾಟದಲ್ಲಿದ್ದೇವೆ. ಶಹಾಬಾದ್ ಇಎಸ್ಐಸಿ ಅಸ್ಪತ್ರೆ ಇದಕ್ಕೆ ಸೂಕ್ತವಾಗಿದ್ದು, ಇದನ್ನು 250 ಆಮ್ಲಜನಕ ಬೆಡ್ ಅಸ್ಪತ್ರೆಯಾಗಿ ಪರಿವರ್ತನೆಗೂ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ನಿರಾಣಿ ತಿಳಿಸಿದರು.

500 ಜಂಬೊ ಸಿಲಿಂಡರ್: ಕಲಬುರ್ಗಿ ಜಿಲ್ಲೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸಂಸ್ಥೆಗಳು 500 ಜಂಬೊ ಸಿಲಿಂಡರ್‌ಗಳನ್ನು ನೀಡಲು ಒಪ್ಪಿಗೆ ಸೂಚಿಸಿವೆ ಎಂದು ತಿಳಿಸಿದರು.

ಸಂಸದ‌ ಡಾ.ಉಮೇಶ‌ ಜಾಧವ, ಶಾಸಕ‌ ಬಸವರಾಜ ಮತ್ತಿಮೂಡ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಉಪ ವಿಭಾಗಾಧಿಕಾರಿ ರಮೇಶ ಕೋಲಾರ, ಶಹಾಬಾದ್ ತಹಶೀಲ್ದಾರ್ ಸುರೇಶ ವರ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT