ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್‌ಕೆಜಿ, ಯುಕೆಜಿ ಆರಂಭ ನಿರ್ಧಾರ ಹಿಂಪಡೆಯಿರಿ: ರಾಜ್ಯ ಸರ್ಕಾರಕ್ಕೆ CPIM ಆಗ್ರಹ

Published 20 ಜೂನ್ 2024, 7:31 IST
Last Updated 20 ಜೂನ್ 2024, 7:31 IST
ಅಕ್ಷರ ಗಾತ್ರ

ಕಲಬುರಗಿ: ‘ಶಿಕ್ಷಣ ಇಲಾಖೆಯ ಮೂಲಕ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರವು, ತನ್ನ ಜನವಿರೋಧಿ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು. ಜೊತೆಗೆ ಹೊಸ ಯೋಜನೆಗೆ ವಿನಿಯೋಗಿಸಲು ಉದ್ದೇಶಿಸಿರುವ ಅನುದಾನವನ್ನು ಅಂಗನವಾಡಿಗಳ ಸಬಲೀಕರಣಕ್ಕೆ ಬಳಸಬೇಕು’ ಎಂದು ಸಿಪಿಎಂ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ನೀಲಾ ಆಗ್ರಹಿಸಿದರು.

ನಗರದ ಜಿಲ್ಲಾಡಳಿತ ಭವನದ ಎದುರು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಜಾರಿ ವಿರೋಧಿಸಿ ಸಿಪಿಎಂ ಜಿಲ್ಲಾ ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಎಲ್‌ಕೆಜಿ, ಯುಕೆಜಿ ಆರಂಭಿಸುವ ನಿರ್ಧಾರದ ಹಿಂದೆ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಹುನ್ನಾರ ಅಡಗಿದೆ. ಅಂಗನವಾಡಿ ನೌಕರರಿಗೆ 49 ವರ್ಷಗಳ ಅನುಭವಿದೆ. ಅಂಗನವಾಡಿ ನೌಕರರಲ್ಲೂ ಎಸ್ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಪದವಿ ಓದಿದವರಿದ್ದಾರೆ. ಸರ್ಕಾರ ಬೇಕಾದರೆ ಅವರಿಗೆ ಇನ್ನಷ್ಟು ವಿಶೇಷ ತರಬೇತಿ ಕೊಟ್ಟು, ಗೌರವಧನ ಹೆಚ್ಚಿಸಿ, ಅಂಗನವಾಡಿ ಕೇಂದ್ರಗಳ ಜಾಗ ವಿಸ್ತರಿಸಿ, ಎಲ್‌ಕೆಜಿ–ಯುಕೆಜಿ ಮಕ್ಕಳಿಗೆ ಕಲಿಸಿ ಎಂದರೆ ಅಂಗನವಾಡಿ ನೌಕರರು ಕಲಿಸುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಎಲ್‌ಕೆಜಿ, ಯುಕೆಜಿ ಬೋಧನೆಗೆ ನೇಮಿಸಲಿರುವ ಅತಿಥಿ ಶಿಕ್ಷಕರಿಗಾದರೂ ಸರ್ಕಾರ ಕೆಲಸದ ಭದ್ರತೆ ಕೊಡುತ್ತಾ? ಇಲ್ಲ, ಅವರಿಗೂ ಕೆಲಸ, ವೇತನದ ಗ್ಯಾರಂಟಿ ಕೊಟ್ಟಿಲ್ಲ. ಬಡವರ ವಿರೋಧಿ ಇಸಿಸಿಇ(ಎಲ್‌ಕೆಜಿ, ಯುಕೆಜಿ) ಯೋಜನೆ ಬಗ್ಗೆ ರಾಜ್ಯದಲ್ಲಿರುವ ಐಎಎಸ್‌ ಅಧಿಕಾರಿಗಳು ಸರ್ಕಾರದ ತಲೆಯಲ್ಲಿ ತುಂಬಿದ್ದಾರೆ. ತಾನೇ ನೀತಿ ರೂಪಿಸುವ ಪರಮೋಚ್ಛ ಶಕ್ತಿ ಎಂಬುದನ್ನು ಸರ್ಕಾರ ಮರೆತಿದ್ದು, ಸರ್ಕಾರ ಅದರ ಸಾಧಕ–ಬಾಧಕ ಯೋಚಿಸದೇ ಜಾರಿಗೆ ಮುಂದಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರಕ್ಕೆ ಪ್ರಾಥಮಿಕ ಶಾಲೆಗಳನ್ನೇ ಸರಿಯಾಗಿ ನಡೆಸಲು ಆಗುತ್ತಿಲ್ಲ. ಮಕ್ಕಳ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ಉತ್ತಮ ಗೌರವಧನ ಕೊಡುವ ಬದಲು, ಮಧ್ಯಾಹ್ನದ ಬಿಸಿಯೂಟವನ್ನು ಇಸ್ಕಾನ್‌, ಅದಮ್ಯ ಚೇತನದಂಥ ಸಂಸ್ಥೆಗಳ ಮೂಲಕ ಪೂರೈಸಲಾಗುತ್ತಿದೆ. ಹಲವು ಶಾಲೆಗಳಿಗೆ ಏಕೋಪಾಧ್ಯಾಯರೇ ಆಧಾರವಾಗಿದ್ದಾರೆ. ಕಟ್ಟಡಗಳು ಶಿಥಿಲಗೊಂಡಿವೆ. ಶೌಚಾಲಯಗಳೂ ಇಲ್ಲದಾಗಿವೆ. ಇಂಥ ಸ್ಥಿತಿಯಲ್ಲಿರುವ ಪ್ರಾಥಮಿಕ ಶಾಲೆಗಳನ್ನು ಬಲಪಡಿಸುವುದು ಬಿಟ್ಟು, ಅಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುತ್ತಿದೆ’ ಎಂದು ವ್ಯಂಗ್ಯವಾಡಿದರು.

‘ಎಲ್‌ಕೆಜಿ, ಯುಕೆಜಿಗೆ ಹೊಸ ಶಿಕ್ಷಕರನ್ನು ನೇಮಿಸಲು ಸರ್ಕಾರ ಮುಂದಾಗಿದೆ. ಐಸಿಡಿಎಸ್‌ ನಾಶ ಮಾಡುವ ಇಂಥ ನಿರ್ಧಾರದಿಂದ ಸರ್ಕಾರ ಕೂಡಲೇ ಹಿಂದೆ ಸರಿಯಬೇಕು. ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲರ ಮಾತನ್ನಾದರೂ ಕೇಳಬೇಕು’ ಎಂದು ಒತ್ತಾಯಿಸಿದರು.

ಸಿಪಿಎಂ ರಾಜ್ಯ ಸಮಿತಿ ಸದಸ್ಯೆ ಶಾಂತಾ ಘಂಟೆ, ಕಾರ್ಯದರ್ಶಿ ಮಂಡಳಿ ಸದಸ್ಯ ಶರಣಬಸಪ್ಪ ಮಮಶೆಟ್ಟಿ ಮಾತನಾಡಿದರು. ಬಳಿಕ ಈ ಸಂಬಂಧ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ನೀಡಲಾಯಿತು. ಮುಖಂಡರಾದ ಎಂ.ಬಿ.ಸಜ್ಜನ, ಶ್ರೀಮಂತ ಬಿರಾದಾರ, ಸುದಾಮ ಧನ್ನಿ, ಪಾಂಡುರಂಗ ಮಾವಿನಕರ, ಸುಭಾಸ ಹೊಸಮನಿ, ಶೇಖಮ್ಮ ಕುರಿ, ಮೇಘರಾಜ ಕಠಾರೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರತಿಭಟನೆಗೂ ಮುನ್ನ ನಗರದ ಕನ್ನಡ ಭವನದಿಂದ ಜಿಲ್ಲಾಡಳಿತ ಭವನದ ತನಕ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ರಾಜ್ಯದ ಜನರು ಹಿಂದಿನ ಜನ ವಿರೋಧಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ನೀವೂ ಜನವಿರೋಧಿ ಕೆಲಸ ಮಾಡಿದರೆ ಜನ ನಿಮಗೂ ಶಿಕ್ಷೆ ಕೊಡತ್ತಾರೆ ನೆನಪಿರಲಿ
ಕೆ.ನೀಲಾ ಕಾರ್ಯದರ್ಶಿ ಸಿಪಿಎಂ ಕಲಬುರಗಿ ಜಿಲ್ಲಾ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT