ಶುಕ್ರವಾರ, ನವೆಂಬರ್ 15, 2019
26 °C
ದಕ್ಷಿಣ ಭಾರತದ ದಲಿತ ಆತ್ಮಕಥೆಗಳು ಕುರಿತು ವಿಚಾರ ಸಂಕಿರಣಕ್ಕೆ ಚಂದ್ರಶೇಖರ ಕಂಬಾರ ಚಾಲನೆ

ದಲಿತ ಆತ್ಮಕಥೆ: ಹೊಸ ಪ್ರಜ್ಞೆ ‌ಮೂಡಿಸಿದ ಅಂಬೇಡ್ಕರ್‌

Published:
Updated:
Prajavani

ಕಲಬುರ್ಗಿ: ‘ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ದಲಿತ ಆತ್ಮಕಥೆಯ ಕುರಿತು ಹೊಸ ಪ್ರಜ್ಞೆ ಮೂಡಿಸಿದರು. ನಂತರ ಮರಾಠಿ ಸಾಹಿತ್ಯದಲ್ಲಿ ಬಹುತೇಕರು ತಮ್ಮ ಆತ್ಮಕಥೆಗಳನ್ನು ಬರೆಯಲು ಶುರು ಮಾಡಿದರು’ ಎಂದು ಕೇಂದ್ರ ಸಾಹಿತ್ಯ ‌ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹೇಳಿದರು.

 ಕಡಗಂಚಿಯಲ್ಲಿರುವ ಕರ್ನಾಟಕ ‌ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿ.ವಿ. ಹಾಗೂ ಅಕಾಡೆಮಿ ಸಹಯೋಗದಲ್ಲಿ ಸೋಮವಾರ ಆರಂಭವಾದ ‘ದಕ್ಷಿಣ ಭಾರತದ ದಲಿತ ಆತ್ಮಕಥೆಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟಿಷರು ಬರುವುದಕ್ಕಿಂತ ಮೊದಲು ‌ಸಾಹಿತ್ಯವನ್ನು ಬಹುವಚನದಲ್ಲಿ ಬರೆಯುವ ರೂಢಿ ಇತ್ತು. ಕೇಳು ಜನಮೇಜಯರೇ ಎಂದು ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು ಎಂದು ಹೇಳಿದರು.

‘ನಾನು’ ಎಂಬ ಏಕವಚನದ ಬಳಕೆಯನ್ನು ಭಾರತೀಯ ಸಾಹಿತ್ಯಕ್ಕೆ ಬ್ರಿಟಿಷರು 1835ರಲ್ಲಿ ಪರಿಚಯಿಸಿದರು. ಅಂದಿನಿಂದಲೂ ನಾವು ಎಂಬುದರ ಬದಲು ನಾನು ಎಂಬುದು ಹೆಚ್ಚು ಬಳಕೆಯಲ್ಲಿ ಬಂತು ಎಂದರು.

‘ದಲಿತ ಕವಿ ಸಿದ್ದಲಿಂಗಯ್ಯ ನನ್ನ ಶಿಷ್ಯ. ಊರು‌ ಕೇರಿ ಆತ್ಮಕಥೆ ಬರೆದಾಗ ಆತನ ಬರಹದ ಶಕ್ತಿ ಕಂಡು ಗಾಬರಿಯಾಗಿದ್ದೆ. ದಲಿತರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕೆ ತನ್ನ ಬರಹಗಳ ಮೂಲಕ ಜನರಲ್ಲಿ ಪಾಪ ಪ್ರಜ್ಞೆ ಮೂಡಿಸಿದ’ ಎಂದರು.

ನಂತರ ಅಂಬೇಡ್ಕರ್ ಕುರಿತು ಬರೆದ ಕವಿತೆಯನ್ನು ಚಂದ್ರಶೇಖರ ಕಂಬಾರ ವಾಚಿಸಿದರು.

ಪ್ರಾಸ್ತಾವಿಕವಾಗಿ‌ ಮಾತನಾಡಿದ ಹಿರಿಯ ವಿಮರ್ಶಕ ‌ಡಾ.ನಟರಾಜ್ ಹುಳಿಯಾರ್, ‘ಮರಾಠಿ ದಲಿತ ಲೇಖಕರು ತಮ್ಮ ಆತ್ಮಕಥೆಯನ್ನು ಮಾತೃಭಾಷೆಯಲ್ಲೇ ಬರೆದಿದ್ದರಿಂದ ಅತ್ಯಂತ ‌ಗಟ್ಟಿಯಾಗಿ ಮೂಡಿಬಂತು. ಅಮೆರಿಕದಲ್ಲಿ ಪ್ಯಾಂಥರ್ಸ್ ಎಂದು ಗುರುತಿಸಿಕೊಂಡ ಕರಿಯರು ತಮ್ಮ ಆತ್ಮಕಥೆಗಳನ್ನು ತಮ್ಮ ಭಾಷೆಯಲ್ಲದ ಇಂಗ್ಲಿಷ್ ನಲ್ಲಿ ಬರೆದರು. ಆದರೆ ಅದರಲ್ಲಿ ‌ಗಟ್ಟಿತನ ಇರಲಿಲ್ಲ’ ಎಂದರು.

 

‘ಸವರ್ಣೀಯರು ದಲಿತರ ಮೇಲೆ ಮಾಡಿದ ಹಿಂಸೆಗಳು ಒಂದೆರಡಲ್ಲ. ಯುವಕರು ಈಗಿನಿಂದಲೇ ಅಸ್ಪೃಶ್ಯತೆಯನ್ನು ಆಚರಿಸುವುದಿಲ್ಲ ಎಂದು ಶಪಥ ಮಾಡಿ’ ಎಂದು ಮನವಿ ಮಾಡಿದರು.

ಕೇಂದ್ರೀಯ ವಿ.ವಿ. ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ ಅವರು ಅಧ್ಯಕ್ಷೀಯ ಮಾತುಗಳನ್ನಾಡಿದರು.

ವಿಶೇಷ ಆಹ್ವಾನಿತರಾಗಿದ್ದ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶಕುಮಾರ್‌ ಎಸ್. ಹೊಸಮನಿ, ಸಮಕುಲಪತಿ ಜಿ.ಆರ್‌.ನಾಯಕ್, ಕುಲಸಚಿವ ಮುಷ್ತಾಕ್‌ ಅಹ್ಮದ್‌ ಐ ಪಟೇಲ್‌ ವೇದಿಕೆಯಲ್ಲಿದ್ದರು.

ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಾರ್ಯದರ್ಶಿ ಎಸ್‌.ಪಿ.ಮಹಾಲಿಂಗೇಶ್ವರ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಚಾಲಕ ಅಪ್ಪಗೆರೆ ಸೋಮಶೇಖರ್‌ ವಂದಿಸಿದರು.

ನಂತರ ನಡೆದ ಗೋಷ್ಠಿಗಳಲ್ಲಿ ತಮಿಳು ದಲಿತ ಆತ್ಮಕಥೆಗಳ ಬಗ್ಗೆ ಅಳಗಿಯ ಪೆರಿಯನ್‌, ಇಂದಿರನ್‌, ತೆಲುಗು ಆತ್ಮಕಥೆಗಳ ಬಗ್ಗೆ ಆರ್‌. ಸತ್ಯಜಿತ್‌, ಕನ್ನಡ ದಲಿತ ಆತ್ಮಕಥೆಗಳ ಬಗ್ಗೆ ಬಸವರಾಜ ಪಿ. ಡೋಣೂರ ಪ್ರಬಂಧ ಮಂಡಿಸಿದರು.

ಅಕಾಡೆಮಿಯ ಕನ್ನಡ ವಿಭಾಗದ ಸಂಚಾಲಕರೂ ಆದ ಕವಿ ಸಿದ್ದಲಿಂಗಯ್ಯ ಅವರೊಂದಿಗೆ ಸಂವಾದ ನಡೆಯಿತು.

ಪ್ರತಿಕ್ರಿಯಿಸಿ (+)