ಗುರುವಾರ , ಆಗಸ್ಟ್ 5, 2021
21 °C
ಪ್ರಮುಖ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು, ಅಪಾಯದ ಭೀತಿಯಲ್ಲಿ ವಾಹನ ಸವಾರರು

ಇಲ್ಲಿವೆ ಅಪಾಯಕಾರಿ ರಸ್ತೆಗಳು !

ಹನಮಂತ ಕೊಪ್ಪದ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಿತ್ತು ಹೋದ ಡಾಂಬರು, ಹೆಜ್ಜೆ ಹೆಜ್ಜೆಗೂ ಎದುರಾಗುವ ಗುಂಡಿಗಳು, ಮಳೆ ನೀರು ತುಂಬಿ ನಿರ್ಮಾಣವಾಗಿರುವ ಪುಟ್ಟ ಹೊಂಡಗಳು, ವಾಹನ ಸಂಚಾರದಿಂದ ಏಳುವ ದೂಳು, ಕೆಸರು...

ಇವು ನಗರದ ರಿಂಗ್ ರಸ್ತೆ, ತಾಜ್‌ ಸುಲ್ತಾನಪುರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕಂಡು ಬರುವ ದೃಶ್ಯಗಳು. ಇನ್ನು ಬಡಾವಣೆಗಳ ಒಳರಸ್ತೆಗಳ ಸ್ಥಿತಿಯನ್ನಂತೂ ಕೇಳುವುದೇ ಬೇಡ. ಹಲವು ದಿನಗಳಿಂದ ನಗರದಲ್ಲಿ ಮಳೆ ಸುರಿಯುತ್ತಿದ್ದು, ಇದರಿಂದ ರಸ್ತೆಗಳೆಲ್ಲ ಕೆಸರಿನ ಗದ್ದೆಗಳಾಗಿವೆ.

ಗುಂಡಿಗಳದ್ದೇ ಸಾಮ್ರಾಜ್ಯ: ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದಾಗಿ ನಗರದ ಬಹುತೇಕ ಕಡೆ ರಸ್ತೆಗಳಲ್ಲಿ ಗುಂಡಿಗಳು ವಾಹನ ಸವಾರರಿಗೆ ಅ‍ಪಾಯಕಾರಿಯಾಗಿ ಪರಿಣಮಿಸಿವೆ. ನಗರದ ರಿಂಗ್ ರಸ್ತೆಯ ಪಾಡು ಹೇಳತೀರದು.

ಅಂಬಿಗರ ಚೌಡಯ್ಯ ಚೌಕ್‌ನಿಂದ ಆರಂಭವಾಗಿ ಆಳಂದ ಚೆಕ್‌ಪೋಸ್ಟ್, ಜಾಫರಬಾದ್ ಕ್ರಾಸ್ ಮಾರ್ಗವಾಗಿ ಅಫಜಲಪುರ ರಸ್ತೆಯವರೆಗೂ ಇರುವ ರಿಂಗ್ ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು. ಡಾಂಬರು ಕಿತ್ತುಹೋಗಿ ನೂರಾರು ಗುಂಡಿಗಳು ನಿರ್ಮಾಣವಾಗಿದ್ದು, ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.

ತಾಜ ಸುಲ್ತಾನಪುರ ರಸ್ತೆ: ಇಲ್ಲಿನ ಗಂಜ್‌ ಪ್ರದೇಶದಿಂದ ಆರಂಭವಾಗಿ ಫಿಲ್ಟರ್‌ಬೆಡ್, ಶಿವಶಕ್ತಿನಗರ, ಬಂಜಾರ್‌ ಚೌಕ್, ಅಂಬಿಗರ ಚೌಡಯ್ಯ ಚೌಕ್ ಮಾರ್ಗವಾಗಿ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ತಾಜ್ ಸುಲ್ತಾನಪುರ ರಸ್ತೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ.

ಅಪ್ಪಿ ತಪ್ಪಿ ಮಳೆ ಬಂದ ಸಂದರ್ಭದಲ್ಲಿ ಇಲ್ಲವೇ ರಾತ್ರಿ ವೇಳೆಯಲ್ಲಿ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಪ್ರಯಾಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ರಸ್ತೆ ಹದಗೆಟ್ಟು ಹಲವು ವರ್ಷಗಳೇ ಕಳೆದಿವೆ. ಆದರೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

ಈ ರಸ್ತೆಯಲ್ಲಿ ಎಪಿಎಂಸಿ, ಶಾಲೆಗಳು, ವಾಣಿಜ್ಯ ಸಂಕೀರ್ಣಗಳಿದ್ದು, ನಿತ್ಯ ನೂರಾರು ವಾಹನಗಳು ಚಲಿಸುತ್ತವೆ. ದೊಡ್ಡ ಪ್ರಮಾಣದ ಗುಂಡಿಗಳು ಈ ರಸ್ತೆಯಲ್ಲಿದ್ದು, ಹೆಜ್ಜೆ ಹೆಜ್ಜೆಗೂ ಅಪಾಯ ಭೀತಿಯಲ್ಲೆ ವಾಹನ ಸವಾರರು ಓಡಾಡುವಂತಾಗಿದೆ.

ನಗರದ ರಾಜಾಪುರ, ಶಿವಶಕ್ತಿನಗರ, ಕಾಕಡೆನಗರ, ಆಟೊನಗರ, ಫಿಲ್ಟರ್‌ಬೆಡ್, ಮಹಾತ್ಮಗಾಂಧಿ ಲಾರಿ ತಂಗುದಾಣ ಸೇರಿದಂತೆ ಹಲವು ಕಾಲೊನಿಗಳಲ್ಲಿ ಸಿಸಿ ರಸ್ತೆಗಳಿಲ್ಲದ ಕಾರಣ ಮಳೆ ಬಂದಾಗ ಕೆಸರು ಗದ್ದೆಗಳಿಂದ ಜನರು ಪರದಾಡುವಂತಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಸ್ತೆ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು