ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ ಜೈಲಿಗೆ ದರ್ಶನ್ ಆಪ್ತ ನಾಗರಾಜ್: 7 ದಿನ ಕ್ವಾರಂಟೈನ್; ನಂತರ ಸೆಲ್‌ಗೆ

Published : 28 ಆಗಸ್ಟ್ 2024, 13:54 IST
Last Updated : 28 ಆಗಸ್ಟ್ 2024, 13:54 IST
ಫಾಲೋ ಮಾಡಿ
Comments

ಕಲಬುರಗಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ, ನಿಯಮ ಉಲ್ಲಂಘಿಸಿ ವಿಶೇಷ ಆತಿಥ್ಯ ಪಡೆದಿದ್ದ ನಟ ದರ್ಶನ್‌ ಮ್ಯಾನೇಜರ್ ನಾಗರಾಜ್‌ ಅಲಿಯಾಸ್‌ ನಾಗನನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ಅಧಿಕೃತ ಆದೇಶ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜೈಲಿನ ನಿಯಮ ಉಲ್ಲಂಘಿಸಿ ವಿಶೇಷ ಆತಿಥ್ಯ ಪಡೆದಿದ್ದ ನಟ ದರ್ಶನ್‌ ಹಾಗೂ ಆತನ ಸಹಚರರನ್ನು ರಾಜ್ಯದ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಲು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿತ್ತು. ಅದರಂತೆ, ಕೊಲೆ ಪ್ರಕರಣದ 11ನೇ ಆರೋಪಿ ನಾಗರಾಜ್‌ನನ್ನು ಕಲಬುರಗಿ ಜೈಲಿಗೆ ಕರೆ ತರಲಾಗುತ್ತಿದೆ.

‘ನಾಗರಾಜ್‌ನನ್ನು ಕಲಬುರಗಿ ಜೈಲಿಗೆ ಗುರುವಾರ ಕರೆತರಬಹುದು ಎಂಬ ಮಾಹಿತಿ ಇದೆ. ಜೈಲಿಗೆ ತಂದ ಬಳಿಕ ಆತನನ್ನು ಸಾಮಾನ್ಯ ಕೈದಿಯಂತೆ ಪರಿಗಣಿಸುತ್ತೇವೆ. ಏಳು ದಿನ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು. ನಿಯಮದಂತೆ ವಾರದಲ್ಲಿ ಎರಡು ಬಾರಿ ಸಂಬಂಧಿಕರ ಸಂದರ್ಶನಕ್ಕೆ ಅವಕಾಶ ನೀಡಲಾಗುವುದು’ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ರಂಗನಾಥ್, ‘ಬೇರೆ ಜೈಲುಗಳಂತೆ ಕಲಬುರಗಿ ಕಾರಾಗೃಹದಲ್ಲಿ ವಿಶೇಷ ಸೌಲಭ್ಯಗಳಿಲ್ಲ. 12 ಸಣ್ಣ ವಿಶೇಷ ಸೆಲ್‌ಗಳಿದ್ದು, ಅವುಗಳಲ್ಲಿ ಬೇರೆ ಜೈಲುಗಳಲ್ಲಿ ಗಲಾಟೆ ಮಾಡಿಕೊಂಡು ಬಂದ ರೌಡಿಗಳು, ಭಯೋತ್ಪಾದಕ ಪ್ರಕರಣದ ಮೂವರು ಆರೋಪಿಗಳು, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ರೌಡಿ ಶೀಟರ್‌ಗಳಿದ್ದಾರೆ. ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಸಾಧನಗಳ ಬಳಕೆ ಪ್ರಕರಣದ ಆರೋಪಿ ಆರ್‌.ಡಿ. ಪಾಟೀಲನಂತಹವರೂ ಇದ್ದಾರೆ. ನಾಗರಾಜ್‌ನನ್ನು ಸಾಮಾನ್ಯ ಕೈದಿಯಾಗಿ ಪರಿಗಣಿಸುತ್ತೇವೆ’ ಎಂದರು.

‘ಯಾವುದೇ ಕೈದಿ ಬಂದರು ಅವರನ್ನು ಸಾಮಾನ್ಯ ಕೈದಿಯಂತೆ ನೋಡಿಕೊಳ್ಳುತ್ತೇವೆ. ನಮ್ಮ ಕೈದಿಗಳಿಂದ ಬಂದಂತಹ ಕೈದಿಯ ಮೇಲೆ ಹಲ್ಲೆ ಮಾಡುವ ಸಂದರ್ಭ ಇದ್ದರೆ ಮಾತ್ರ ವಿಶೇಷ ಸೆಲ್‌ನಲ್ಲಿ ಇರಿಸುತ್ತೇವೆ. ಅಂತಹ ಸಂದರ್ಭ ಬಂದರೆ ನೋಡುತ್ತೇವೆ. ವಿಶೇಷ ಸೆಲ್‌ನಲ್ಲಿ 24X7 ಸಿಸಿಟಿವಿ ಕ್ಯಾಮೆರಾ, ಮೂವರು ಪೊಲೀಸರು ಸದಾ ನಿಗ ಇರಿಸುತ್ತಾರೆ. ಯಾವುದೇ ರೀತಿಯ ರಾಜಾತಿಥ್ಯ ಕೊಡುವುದಿಲ್ಲ. ಅವರಿಗೇನೂ ಅಂತಹ ಹೈ ಪ್ರೊಫೈಲ್ ಇಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT