ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಯ ಹಿಂದೆ ಸರಿದ ‘ರಂಗದ ಬೆಳಕು’

ಜಾತ್ಯತೀತ ಬದುಕು, ಧರ್ಮಾತೀತ ಬರಹ, ಶರಣ ಮಾರ್ಗದ ನಡೆ
Last Updated 13 ಏಪ್ರಿಲ್ 2021, 6:26 IST
ಅಕ್ಷರ ಗಾತ್ರ

ಕಲಬುರ್ಗಿ: ನಾಟಕಗಳೇ ನನಗೆ ಧೈರ್ಯ ತುಂಬಿದವು. ಮನುಷ್ಯನಿಗೆ ಕಷ್ಟಗಳು ಬರಬೇಕು. ಕಷ್ಟಗಳ ಕುಲುಮೆಯಲ್ಲಿ ಬೆಂದಾಗಲೇ ಸ್ಫುಟವಾದ ಚಿನ್ನವಾಗಿ ಹೊರಹೊಮ್ಮಲು ಸಾಧ್ಯ...

ಸೋಮವಾರ ನಿಧನರಾದಹಿರಿಯ ರಂಗಕರ್ಮಿ ಲಾಲ್‌ಅಹ್ಮದ್‌ ಬಂದೇನವಾಜ್‌ ಖಲೀಫ್ ಆಲ್ದಾಳ (ಎಲ್‌.ಬಿ.ಕೆ. ಆಲ್ದಾಳ) ಅವರು, ಕಳೆದ ವರ್ಷ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ‘ಮನದಾಳದ ಮಾತು’ ಆಡಿದ್ದರು. ‘ಕಷ್ಟಗಳ ಕುಲುಮೆಯಲ್ಲಿ ಬೆಂದಾಗಲೇ ಸ್ಫುಟವಾದ ಚಿನ್ನವಾಗಿ ಹೊರಹೊಮ್ಮಲು ಸಾಧ್ಯ. ರಂಗಭೂಮಿ ನನಗೆ ಸಾಕಷ್ಟು ನೀಡಿದೆ..’ ಎಂದೂ ಆ ಹಿರಿಯ ಕಲಾವಿದ ಹೆಮ್ಮೆಯಿಂದ ಹೇಳಿಕೊಂಡಿದ್ದರು.

ತೆರೆಯ ಮೇಲೆ ಮನೋಜ್ಞರಾಗಿ ರಾರಾಜಿಸುತ್ತಿದ್ದ ಅವರ ತೆರೆಯ ಹಿಂದಿನ ಬದುಕು ಬಡತನದಿಂದ ಕೂಡಿತ್ತು.

ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕು ಬನ್ನಟ್ಟಿ ಗ್ರಾಮದಲ್ಲಿ ಜನಿಸಿದ ಅವರು, ಮೂರೇ ವರ್ಷಕ್ಕೆ ತಂದೆಯನ್ನು ಕಳೆದುಕೊಂಡರು. ತಾಯಿಯ ತವರು ಮನೆಯಾದ ಆಲ್ದಾಳ ನಂತರ ಮಳ್ಳಿ ಗ್ರಾಮದಲ್ಲಿರುವ ಚಿಕ್ಕಮ್ಮನ ಆಸರೆಯಲ್ಲಿ ಬೆಳೆದರು. ಏಳನೇ ತರಗತಿಯವರೆಗೆ ಓದಿದ ಅವರು ಬಾಲ್ಯದಲ್ಲೆ ಡಪ್ಪಿನಾಟ, ಬಯಲಾಟದ ಪದಗಳನ್ನು ಹಾಡಲು ಶುರು ಮಾಡಿದ್ದರು.

ಕನಕಾಂಗಿ ನಾಟಕದಲ್ಲಿ ಶ್ರೀಕೃಷ್ಣನ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಅವರ ಅಭಿನಯ ಬದುಕು ಆರಂಭವಾಯಿತು. ಮುಸ್ಲಿಮರಾಗಿದ್ದೂ ಶ್ರೀಕೃಷ್ಣನ ಪಾತ್ರದಲ್ಲಿ ಅವರು ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸುತ್ತಿದ್ದರು ಎಂಬುದು ಹಿರಿಯರ ಮಾತು.

ಶರಣ ಸಾಹಿತ್ಯವನ್ನು ಅಪಾರವಾಗಿ ಅಧ್ಯಯನ ಮಾಡಿದ ಅವರ ಬದುಕಿನ ಮೇಲೂ ಶರಣರ ಪ್ರಭಾವ ದೊಡ್ಡದಾಗಿತ್ತು. ಭಾಷೆಯ ಆಚೆಗೂ, ಧರ್ಮದ ಆಚೆಗೂ ಅವರು ಗಳಿಸಿಕೊಂಡ ಅಭಿಮಾನ ದೊಡ್ಡದು. ಜಾತ್ಯತೀತರಾಗಿ ಬದುಕಿ ತೋರಿಸಿದ ಅವರು, ತುಂಬ ಸರಳ ಸಾದಾ ಜೀವನಶೈಲ ಅಳವಡಿಸಿಕೊಂಡವರು.

ಅವರ ನಾಟಕಗಳು ಪೌರಾಣಿಕ, ಸಮಕಾಲೀನ ಸಾಮಾಜಿಕ ಬದುಕನ್ನೂ ಪ್ರತಿನಿಧಿಸುತ್ತವೆ. ಭಾಷಾ ಪ್ರೌಢಿಮೆ, ಹರಿತವಾದ ಪದ ಬಳಕೆ, ಅವರ ಅಪಾರ ಓದು, ಅಭಿನಯದಲ್ಲಿನ ಚತುರತೆಯನ್ನು ಓರಿಗೆಯವರು ಇನ್ನೂ ಸ್ಮರಿಸುತ್ತಾರೆ.

ಅವರು ರಚಿಸಿದ ‘ಕಡಕೋಳ ಮಡಿವಾಳೇಶ್ವರ’, ‘ವಿಶ್ವರಾಧ್ಯ’ ಸೇರಿದಂತೆ ವಿವಿಧ ಶರಣರ ಮತ್ತು ಸಂತರ ನಾಟಕಗಳಲ್ಲಿ ಅಭಿನಯಿಸಿದ ಕಲಾವಿದರು ತಮ್ಮ ಬದುಕಿನಲ್ಲಿ ಪರಿವರ್ತನೆ ತಂದುಕೊಂಡಿದ್ದಾರೆ. ‘ಕಡಕೋಳ ಮಡಿವಾಳೇಶ್ವರ ನಾಟಕವು ಯಡ್ರಾಮಿಯಲ್ಲಿ ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ‘ಪತಿ ಭಕ್ತಿ’ ಅವರು ಬರೆದ ಮೊದಲ ನಾಟಕ. ‘ನನ್ನ ನಮಸ್ಕಾರ’ ನಾಟಕ ಗುಲಬರ್ಗಾ ವಿಶ್ವವಿದ್ಯಾಲಯದ ಎಂ.ಎ ಪಠ್ಯದಲ್ಲಿ ಸೇರಿದ್ದು ವಿಶೇಷ.‌

ಹಲವಾರು ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ ಅವರು ತಮ್ಮದೇ ಆದ ಕಂಪನಿ ಕಟ್ಟಿದ್ದರು. ಅದಕ್ಕಾಗಿ ಇದ್ದ ಮೂರು ಎಕರೆ ಜಮೀನೂ ಕಳೆದುಕೊಂಡರು. ಆದರೂ ಅವರು ರಂಗಭೂಮಿ ಬಿಡಲಿಲ್ಲ. ರಂಗಭೂಮಿಗೆ ಸಂಬಂಧಿಸಿದಂತೆ ಅವರು ರಿಚಿಸಿದ ಒಟ್ಟು ಕೃತಿಗಳ ಸಂಖ್ಯೆ 50ಕ್ಕೂ ಹೆಚ್ಚು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಕೂಡ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT