ಕಲಬುರಗಿ: ನಗರದ ಹೊರವಲಯದ ತಾವರಗೇರಾ ಕ್ರಾಸ್ ಸಮೀಪದಲ್ಲಿ ಇಬ್ಬರು ಮಹಿಳಾ ಕಾರ್ಮಿಕರನ್ನು ಕೊಲೆ ಮಾಡಿ ಐದು ತಿಂಗಳು ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ, ಜಿಲ್ಲಾಡಳಿತ ಪರಿಹಾರವೂ ನೀಡಿಲ್ಲ ಎಂದು ಶ್ರಮಯೋಗಿ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಟ್ರೇಡ್ ಯೂನಿಯನ್ ಮುಖಂಡರು ದೂರಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಕೊಲೆಯಾದ ಮಹಿಳೆಯರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಲಾಗಿತ್ತು. ಕಾಟಾಚಾರಕ್ಕೆ ಎಂಬಂತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಟ್ಟಡ ಕಾರ್ಮಿಕರ ಮರಣ ಪರಿಹಾರ ಧನ ಅಡಿ ₹75 ಸಾವಿರ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಇಬ್ಬರೂ ಮಹಿಳಾ ಕಾರ್ಮಿಕರ ಕುಟುಂಬಸ್ಥರು ಕಡುಬಡವರಾಗಿದ್ದು, ರಾಜ್ಯ ಸರ್ಕಾರ ತಲಾ ₹10 ಲಕ್ಷ ಹಾಗೂ ಇಲಾಖೆ ತಲಾ ₹5 ಲಕ್ಷ ಪರಿಹಾರ ನೀಡಬೇಕು. ಒಬ್ಬ ಸದಸ್ಯರಿಗೆ ಸರ್ಕಾರ ನೌಕರಿ ಕೊಡಬೇಕು ಎಂದು ಯೂನಿಯನ್ ಮುಖಂಡರಾದ ಮಲ್ಲಿಕಾರ್ಜುನ ಎಸ್.ಮಾಳಗೆ, ಸಂಜುಕುಮಾರ ಗುತ್ತೇದಾರ ಕೋರಿದ್ದಾರೆ.