ಶನಿವಾರ, ಮೇ 8, 2021
17 °C
ನಿತ್ಯ 30 ರೋಗಿಗಳಿಗೆ ಡಯಾಲಿಸಿಸ್; ಖಾಸಗಿ ಸಂಸ್ಥೆಯಿಂದ ಘಟಕ ನಿರ್ವಹಣೆ

ಡಯಾಲಿಸಿಸ್‌: ರೋಗಿಗಳೇ ತರಬೇಕು ಔಷಧಿ ಸಾಮಗ್ರಿ!

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಒಳಗಾಗಬೇಕೆಂದರೆ ಅದಕ್ಕೆ ಬೇಕಾಗುವ ಔಷಧಿಯನ್ನು ಅವರೇ ಹೊರಗಡೆಯಿಂದ ದುಬಾರಿ ಬೆಲೆ ಖರೀದಿಸಿ ತರಬೇಕಿದೆ. ಕಳೆದ ಒಂದೂವರೆ ತಿಂಗಳಿಂದ ಈ ಸಮಸ್ಯೆ ಎದುರಾಗಿದ್ದು, ಹಲವು ರೋಗಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಕಲಬುರ್ಗಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್‌ ಘಟಕದಲ್ಲಿ 12 ಬೆಡ್‌ ಗಳಿದ್ದು, ನಿತ್ಯ 30 ಜನರಿಗೆ ಡಯಾಲಿಸಿಸ್‌ ಮಾಡಬಹುದು. ಅಲ್ಲದೇ, ತಾಲ್ಲೂಕು ಆಸ್ಪತ್ರೆಗಳಲ್ಲಿ ನಿತ್ಯ ನಾಲ್ಕೈದು ಜನರಿಗೆ ಡಯಾಲಿಸಿಸ್‌ ಮಾಡಲಾಗುತ್ತಿದೆ. ₹ 500 ಪಾವತಿಸಿದರೆ ಆಸ್ಪತ್ರೆಯಿಂದ ಡಯಾಲಿಸಿಸ್ ಮಾಡಲಾಗುತ್ತಿತ್ತು.

‘ಒಂದೂವರೆ ತಿಂಗಳಿಂದ ಆಸ್ಪತ್ರೆಯ ಡಯಾಲಿಸಿಸ್‌ ಘಟಕದಲ್ಲಿ ಸಮರ್ಪಕ ವೈದ್ಯಕೀಯ ಸೇವೆ ಸಿಗುತ್ತಿಲ್ಲ. ಸಾವಿರಾರು ರೂಪಾಯಿ ಬೆಲೆ ಬಾಳುವ ಡಯಾಲಸರ್, ಟ್ಯೂಬಿಂಗ್, ಹೆಪರಿನ್ ಇಂಜೆಕ್ಷನ್, ಸ್ಟಿಕಿಂಗ್ ಪ್ಲಾಸ್ಟರ್, ಎನ್‌ಎಸ್‌ ಬಾಟಲ್‌ಗಳನ್ನು ರೋಗಿಗಳೇ ತರಬೇಕು ಎಂದು ಡಯಾಲಿಸಿಸ್‌ ಕೇಂದ್ರದ ಸಿಬ್ಬಂದಿ ತಿಳಿಸುತ್ತಿದ್ದಾರೆ. ಅಷ್ಟೊಂದು ಖರ್ಚು ಮಾಡಿ ತರುವುದು ಬಡ ರೋಗಿಗಳೇ ಸಾಧ್ಯವೇ’ ಎಂದು ಪ್ರಶ್ನಿಸುತ್ತಾರೆ ಡಯಾಲಿಸಿಸ್‌ಗೆ ಒಳಗಾಗಿರುವ ವ್ಯಕ್ತಿ.

ಡಯಾಲಿಸಿಸ್‌ ಘಟಕದ ಅವ್ಯವಸ್ಥೆ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ‘ಹೊರಗಿನಿಂದ ಡಯಾಲಿಸಿಸ್‌ ಸಾಮಗ್ರಿಗಳನ್ನು ಹೊರಗೆ ತರಿಸುವುದಲ್ಲದೇ ಡಯಾಲಿಸಿಸ್‌ಗೆ ನೀಡಬೇಕಿದ್ದ ಸಮಯದಲ್ಲಿಯೂ ಕಡಿತ ಮಾಡಿದ್ದಾರೆ. ಮುಂಚೆ ನಾಲ್ಕು ಗಂಟೆವರೆಗೆ ಡಯಾಲಿಸಿಸ್‌ ನಡೆಯುತ್ತಿತ್ತು. ಈಗ ಎರಡು ಗಂಟೆಗೇ ಮುಗಿಸುತ್ತಿದ್ದಾರೆ. ಇಷ್ಟು ಕಡಿಮೆ ಸಮಯದಲ್ಲಿ ಡಯಾಲಿಸಿಸ್‌ ಮಾಡಲು ಅಸಾಧ್ಯ. ತಜ್ಞ ವೈದ್ಯರು ಕೇಂದ್ರದಲ್ಲಿ ಇರುವುದಿಲ್ಲ. ಎಲ್ಲವನ್ನೂ ನರ್ಸ್‌ಗಳೇ ನಿಭಾಯಿಸುತ್ತಾರೆ. ಏರ್‌ ಕೂಲರ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅಲ್ಲದೇ, ಡಯಾಲಿಸಿಸ್‌ ಮಾಡುವ ಎರಡು ಯಂತ್ರ ಕೆಟ್ಟಿವೆ’ ಎಂದು ಆರೋಪಿಸಿದರು.

ಬಿ.ಆರ್‌. ಶೆಟ್ಟಿ ನಿರ್ವಹಣೆ: ರಾಜ್ಯದ ಎಲ್ಲ 31 ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿನ ಡಯಾಲಿಸಿಸ್‌ ಕೇಂದ್ರಗಳ ನಿರ್ವಹಣೆಯನ್ನು ಆರೋಗ್ಯ ಇಲಾಖೆ ಉದ್ಯಮಿ ಬಿ.ಆರ್. ಶೆಟ್ಟಿ ಅವರ ಒಡೆತನದ ಸಂಸ್ಥೆಗೆ ನೀಡಿದೆ. ಪ್ರತಿ ರೋಗಿಗೆ ಸರ್ಕಾರ ₹ 1100 ಪಾವತಿ ಮಾಡುತ್ತಿದ್ದು, ಐದು ವರ್ಷಗಳವರೆಗೆ ಡಯಾಲಿಸಿಸ್‌ ಕೇಂದ್ರಗಳನ್ನು ನಿರ್ವಹಿಸಬೇಕಿದೆ. ಡಯಾಲಿಸಿಸ್ ಕೇಂದ್ರ ಆರಂಭಕ್ಕೆ ಜಾಗ, ಬೆಡ್, ವಿದ್ಯುತ್ ಹಾಗೂ ನೀರನ್ನು ಆಸ್ಪತ್ರೆಯವರು ನೀಡಬೇಕು. ವೈದ್ಯಕೀಯ ಹಾಗೂ ನರ್ಸಿಂಗ್ ಸಿಬ್ಬಂದಿ, ವೈದ್ಯಕೀಯ ಪರಿಕರಗಳನ್ನು ಬಿ.ಆರ್. ಶೆಟ್ಟಿ ಅವರ ಸಂಸ್ಥೆ ನೀಡಬೇಕು. ಈ ಒಪ್ಪಂದವಾಗಿ ಇದೀಗ 3 ವರ್ಷಗಳು ಕಳೆದಿವೆ.

ರಾಜ್ಯ ಸರ್ಕಾರ ಬಿ.ಆರ್. ಶೆಟ್ಟಿ ಅವರಿಗೆ ಡಯಾಲಿಸಿಸ್‌ ಕೇಂದ್ರಗಳ ನಿರ್ವಹಣೆಗೆ ನೀಡಬೇಕಿದ್ದ ₹ 20 ಕೋಟಿಯನ್ನು ಬಾಕಿ ಉಳಿಸಿಕೊಂಡಿದೆ. ಹಾಗಾಗಿ ವೈದ್ಯಕೀಯ ಪರಿಕರಗಳನ್ನು ಸಂಸ್ಥೆ ಪೂರೈಸುವುದನ್ನು ಸ್ಥಗಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಪರ್ಯಾಯ ಸಂಸ್ಥೆ ಹುಡುಕಾಟಕ್ಕೆ ಸೂಚನೆ

ಉದ್ಯಮಿ ಬಿ.ಆರ್. ಶೆಟ್ಟಿ ಅವರು ಡಯಾಲಿಸಿಸ್‌ ಕೇಂದ್ರಗಳ ನಿರ್ವಹಣೆಯನ್ನು ಸರಿಯಾಗಿ ಮಾಡದೇ ಇರುವುದರಿಂದ ಆರೋಗ್ಯ ಇಲಾಖೆಯು ಜಿಲ್ಲಾ ಮಟ್ಟದಲ್ಲಿ ಡಯಾಲಿಸಿಸ್‌ ಮಾಡುವ ಸಂಸ್ಥೆಗಳನ್ನು ಹುಡುಕುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಶಸ್ತ್ರಚಿಕಿತ್ಸಕರಿಗೆ ಪತ್ರ ಬರೆದಿದೆ. ಅಂತಹ ಸಂಸ್ಥೆಗಳನ್ನು ಗುರುತಿಸಿ ಪಟ್ಟಿಯನ್ನು ಕಳಿಸಿಕೊಡುವಂತೆ ಇಲಾಖೆ ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು