ಸೋಮವಾರ, ಏಪ್ರಿಲ್ 19, 2021
31 °C
ರೈಲು ನಿಲ್ದಾಣ; ಸಾಮಾನ್ಯ, ಪ್ಲಾಟ್‌ಫಾರ್ಮ್‌ ಟಿಕೆಟ್‌ಗಳ ವಿತರಣೆ ಸ್ಥಗಿತ

ನಿರ್ಬಂಧಗಳ ಮಧ್ಯೆ ಪ್ರಯಾಸದ ಪ್ರಯಾಣ

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕೊರೊನಾ ಸೋಂಕಿನ ಪ್ರಭಾವ ಕಡಿಮೆಯಾದ ಬಳಿಕ ಬಸ್ ಮತ್ತು ವಿಮಾನಗಳು ಎಂದಿನಂತೆ ಸಂಚರಿಸುತ್ತಿವೆ. ಆದರೆ, ರೈಲ್ವೆ ಪ್ರಯಾಣಿಕರು ಮಾತ್ರ ನಿರ್ಬಂಧಗಳ ಸುಳಿಯಲ್ಲಿ ಸಿಲುಕಿ, ಪ್ರಯಾಣಿಸಲು ಪ್ರಯಾಸ ಪಡುವಂತಾಗಿದೆ’.

ಕಲಬುರ್ಗಿಯಿಂದ ನಿತ್ಯವೂ ಸುತ್ತಮುತ್ತಲ ಊರುಗಳಿಗೆ ರೈಲುಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರ ವೇದನೆಯಿದು. ಕೂಲಿಕಾರ್ಮಿಕರು, ಸರ್ಕಾರಿ-ಖಾಸಗಿ ಸಂಸ್ಥೆ ನೌಕರರು, ಸಣ್ಣಪುಟ್ಟ ವ್ಯಾಪಾರಸ್ಥರು, ರೈತರಿಗೆ ರೈಲು ಕಡಿಮೆ ಖರ್ಚಿನ ‘ಪುಷ್ಪಕ ವಿಮಾನ’ವಾಗಿತ್ತು. ಆದರೆ, ಸದ್ಯಕ್ಕೆ ಪ್ರಯಾಣ ದುರ್ಬರವಾಗಿದೆ!

ಬೆಳಿಗ್ಗೆ ಮತ್ತು ಸಂಜೆ ವೇಳೆ ಸಂಚರಿಸುವ ಪ್ಯಾಸೆಂಜರ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು ಬಹುತೇಕ ಜನರಿಗೆ ತಮ್ಮೂರು ಮತ್ತು ಹಳ್ಳಿಗಳಿಗೆ ಹೋಗಲು ಆಶ್ರಯವಾಗಿದ್ದವು. ₹ 10 ರಿಂದ ₹ 30ರ ದರ ಪ್ರಯಾಣದ ಟಿಕೆಟ್ ತೆಗೆದುಕೊಂಡರೆ ಸಾಕಿತ್ತು. ಆದರೆ, ಈಗ ಟಿಕೆಟ್ ತೆಗೆದುಕೊಳ್ಳುವುದಿರಲಿ, ರೈಲು ನಿಲ್ದಾಣ ಪ್ರವೇಶಿಸುವುದೇ ಕಷ್ಟವಾಗಿದೆ.

‘ಪ್ರಯಾಣಿಸುವ ರೈಲಿನ ಸೀಟು ಕಾಯ್ದಿರಿಸಿದ ಟಿಕೆಟ್ ಇಲ್ಲದೇ ರೈಲು ನಿಲ್ದಾಣ ಪ್ರವೇಶಿಸುವಂತಿಲ್ಲ. ಸಾಮಾನ್ಯ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ವಿತರಿಸುವುದಿಲ್ಲ. ಕಾಯ್ದಿರಿಸಿದ ಟಿಕೆಟ್‌ಗಳನ್ನು ಒಂದೆರಡು ದಿನ ಮುಂಚಿತವಾಗಿ ತೆಗೆದುಕೊಳ್ಳಬೇಕು. ಆಯಾ ದಿನದಂದೇ ನೀಡುವುದಿಲ್ಲ’ ಎಂದು ರೈಲ್ವೆ ಇಲಾಖೆಯು ರೂಪಿಸಿರುವ ನಿಯಮಗಳು ಪ್ರಯಾಣಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗಿವೆ.

‘ವಾಡಿ, ಶಹಾಬಾದ್ ಅಲ್ಲದೇ ಬೇರೆ ಊರುಗಳಿಗೆ ಹೋಗಲು ರೈಲು ಹೊರಡುವ 10 ನಿಮಿಷ ಮುಂಚಿತವಾಗಿ ಟಿಕೆಟ್ ಪಡೆಯುತ್ತಿದ್ದೆ. ಕೆಲವೊಮ್ಮೆ ಅವಸರದಲ್ಲಿ ಹತ್ತಿಕೊಂಡಾದರೂ ಊರು ತಲುಪುತ್ತಿದ್ದೆ. ಆದರೆ, ಈಗ ಕಾಯ್ದಿರಿಸಿದ ಟಿಕೆಟ್ ಇಲ್ಲದೇ ನಿಲ್ದಾಣದೊಳಗೆ ಪ್ರವೇಶಿಸಲು ರೈಲ್ವೆ ಇಲಾಖೆ ಸಿಬ್ಬಂದಿ ಬಿಡುವುದಿಲ್ಲ. ಹೀಗಾದರೆ, ಓಡಾಡುವುದು ಹೇಗೆ’ ಎಂದು ಶಹಾಬಾದ್‌ನ ಚಂದ್ರು ಪ್ರಶ್ನಿಸಿದರು.

ರೈಲಿನಲ್ಲಿ ಸೀಟು, ಬರ್ತ್‌, ಎಸಿ–1,2,3ಗೆ ಸೀಟು ಕಾಯ್ದಿರಿಸಿಕೊಳ್ಳಬೇಕು. ಕೂತು ಪ್ರಯಾಣಿಸುವ ಕೋಟಾ ಭರ್ತಿಯಾದರೆ, ಅನಿವಾರ್ಯವಾಗಿ ಸ್ಲೀಪರ್ ಅಥವಾ ಎಸಿಗೆ ಸೀಟು ಕಾಯ್ದಿರಿಸಬೇಕು. ಅಷ್ಟೆಲ್ಲ ಖರ್ಚು ಮಾಡಲು ಜನಸಾಮಾನ್ಯರು, ಬಡವರ ಬಳಿ ಹಣವೆಲ್ಲಿರುತ್ತದೆ’ ಎಂದು ಶಹಾಬಾದ್‌ನ ನಿವಾಸಿ ರಮೇಶ ನಾಯಕ ತಿಳಿಸಿದರು.

‘ಕಲಬುರ್ಗಿಯಿಂದ ಲಾಡ್ಲಾಪುರದ ಸರ್ಕಾರಿ ಶಾಲೆಗೆ ಪ್ರತಿ ದಿನ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಆದರೆ, ಹೊಸ ನಿಯಮಗಳಿಂದಾಗಿ ಅನಿವಾರ್ಯವಾಗಿ ಬಸ್‌ನಲ್ಲಿ ಪ್ರಯಾಣಿಸಬೇಕಿದೆ. ಬಸ್‌ಗೆ ಪ್ರತಿ ದಿನ ₹ 120 ಕೊಡಬೇಕು. ರೈಲಿನಲ್ಲಿ ತಿಂಗಳ ಪಾಸ್‌ ದರ ₹ 140 ಇತ್ತು. ಅನಾರೋಗ್ಯದಿಂದ ಬಳಲುವವರು ಬಸ್‌ನಲ್ಲಿ ಓಡಾಡುವುದು ತುಂಬಾನೇ ಕಷ್ಟ’ ಎಂದು ಶಿಕ್ಷಕಿ ಜಗದೇವಿ ತಿಳಿಸಿದರು.

‘ಕೊರೊನಾ ನೆಪದಲ್ಲಿ ರೈಲ್ವೆ ಪ್ರಯಾಣಿಕರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಲಾಗುತ್ತಿದೆ ಹೊರತು ಪ್ರಯಾಣಿಕಸ್ನೇಹಿ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ. ರೈಲ್ವೆ ಇಲಾಖೆಯನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಹೊರತು ಮತ್ತೇನೂ ಅಲ್ಲ. ಸಾಮಾನ್ಯ ಪ್ರಯಾಣಿಕರ ಬಗ್ಗೆ ಯಾರೂ ಕಾಳಜಿ ತೋರುತ್ತಿಲ್ಲ’ ಎಂದು ಎಸ್‌ಯುಸಿಐ ಪಕ್ಷದ ನಾಯಕಿ ನಾಗಮ್ಮಾಳ ತಿಳಿಸಿದರು.

ಕಲಬುರ್ಗಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ನಾನು ಪ್ರತಿ ದಿನ ವಾಡಿಯಿಂದ ಬಸ್‌ನಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ರೈಲಿನಲ್ಲಿ ₹ 10ಕ್ಕೆ ಬರುತ್ತಿದ್ದ ನಾನು ಈಗ ₹ 50ರವರೆಗೆ ನೀಡಬೇಕಿದೆ ಎಂದು ವಾಡಿಯ ದೇವಾನಂದ ತಿಳಿಸಿದರು.

ಕಲಬುರ್ಗಿಯ ಮಿನಿ ವಿಧಾನಸೌಧದಲ್ಲಿ ಹೊರ ಗುತ್ತಿಗೆ ಕಾರ್ಮಿಕನಾದ ನಾನು ತಿಂಗಳ ರೈಲ್ವೆ ಪಾಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಈಗ ಬಸ್‌ ಪಾಸ್‌ಗಾಗಿ ₹ 1000ಕ್ಕೂ ಹೆಚ್ಚು ಖರ್ಚು ಮಾಡಬೇಕಾದ ಪರಿಸ್ಥಿತಿಯಿದೆ ಎಂದು ಗುತ್ತಿಗೆ ಕಾರ್ಮಿಕ ಚಂದ್ರಶೇಖರ ಧನ್ನೇಕರ ಹೇಳಿದರು.

ರೈಲ್ವೆ ಇಲಾಖೆಯ ಹೊಸ ನಿಯಮಾವಳಿಗಳಿಂದ ಕಲಬುರ್ಗಿ, ಯಾದಗಿರಿ, ಶಹಾಬಾದ್‌ ಮುಂತಾದ ಕಡೆಯವರಿಗೆ ಸೊಲ್ಲಾಪುರಕ್ಕೆ ಆಸ್ಪತ್ರೆಗೆ ಹೋಗಲು ಕಷ್ಟವಾಗುತ್ತಿದೆ. ರೋಗಿಗಳಿಗೆ ಕಷ್ಟವಾಗಿದೆ ಎನ್ನುತ್ತಾರೆ ಎಐಯುಟಿಯುಸಿ ಶರಣು ಹೇರೂರ

‘ವಿಶೇಷ ರೈಲಿಗೆ ನಿಯಮಗಳ ಪಾಲನೆ ಅವಶ್ಯ’

ಕಲಬುರ್ಗಿ: ‘ಸದ್ಯ ವಿಶೇಷ ರೈಲುಗಳು ಮಾತ್ರ ಸಂಚರಿಸುತ್ತಿದ್ದು, ಪ್ಯಾಸೆಂಜರ್ ರೈಲುಗಳನ್ನು ಇನ್ನೂ ಆರಂಭಿಸಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ನಿಯಮಗಳನ್ನು ರೂಪಿಸಲಾಗಿದ್ದು, ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕಿದೆ' ಎಂದು ಕಲಬುರ್ಗಿ ರೈಲ್ವೆ ಸ್ಟೇಷನ್ ವ್ಯವಸ್ಥಾಪಕ ಪ್ರಸಾದ್ ರಾವ್ ತಿಳಿಸಿದರು.

‘ಕಲಬುರ್ಗಿ ರೈಲು ನಿಲ್ದಾಣದಿಂದ ನಿತ್ಯವೂ 30 ರೈಲುಗಳು ಸಂಚರಿಸುತ್ತಿದ್ದು, ಅವುಗಳ ವೇಳಾಪಟ್ಟಿ ಬದಲಾಗಿದೆ. ನಿಲ್ದಾಣದ ಸೂಚನಾ ಫಲಕದಲ್ಲಿ ತಿಳಿಸಲಾದ ನಿಗದಿತ ಸಮಯದ ಆಸುಪಾಸಿನಲ್ಲಿ ರೈಲುಗಳು ಬರುತ್ತವೆ. ಪ್ರಯಾಣಿಕರು ಹಳೆಯ ಸಮಯ ಅನುಸರಿಸುವ ಬದಲು ಹೊಸ ಸಮಯವನ್ನು ಒಮ್ಮೆ ಪರಿಶೀಲಿಸಿಕೊಳ್ಳಬೇಕು. ಮುಂಗಡವಾಗಿ ಕಾಯ್ದಿರಿಸಿದ ಸೀಟುಗಳ ಪಟ್ಟಿಯ ಮಾಹಿತಿಯನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಪಡೆಯಬಹುದು' ಎಂದು ತಿಳಿಸಿದರು.

‘ಪ್ರಯಾಣಿಕರು 90 ನಿಮಿಷ ಮುಂಚಿತವಾಗಿ ರೈಲು ನಿಲ್ದಾಣಕ್ಕೆ ಬರಬೇಕು. ಕಾಯ್ದಿರಿಸಿದ ಅಥವಾ ಆರ್‌ಎಸಿ ಟಿಕೆಟ್ ಹೊಂದಿರುವವರು ಮಾತ್ರ ನಿಲ್ದಾಣದೊಳಗೆ ಪ್ರವೇಶಿಸಬಹುದು. ವೇಟಿಂಗ್ ಲಿಸ್ಟ್ ಟಿಕೆಟ್ ಹೊಂದಿರುವವರಿಗೆ ನಿಲ್ದಾಣ ಪ್ರವೇಶಿಸಲು ಅಥವಾ ಪ್ರಯಾಣಿಸಲು ಅವಕಾಶ ಇರುವುದಿಲ್ಲ. ಕಾಯ್ದಿರಿಸಿದ ಪಟ್ಟಿಯನ್ನು ರೈಲು ಹೊರಡುವ ಮೂರು ಅಥವಾ ನಾಲ್ಕು ಗಂಟೆ ಮುಂಚಿತವಾಗಿ ಸಿದ್ಧಪಡಿಸಲಾಗುತ್ತದೆ’ ಎಂದು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.