ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತಾಕ್ಷಿ ಸೂಕ್ಷ್ಮ ಸಂವೇದನೆಯ ರೂಪಾಂತರ ನಾಟಕ

Published 18 ಫೆಬ್ರುವರಿ 2024, 16:17 IST
Last Updated 18 ಫೆಬ್ರುವರಿ 2024, 16:17 IST
ಅಕ್ಷರ ಗಾತ್ರ

ಕಲಬುರಗಿ: ‘ಒಂದು ತ್ರಿಕೋನ ಪ್ರೇಮ ಕಥಾ ಹಂದರವನ್ನು ವಿಭಿನ್ನ ಪಾತ್ರಗಳಲ್ಲಿನ ಸ್ಥಳೀಯ ಭಾಷೆ, ಕಾವ್ಯ ಮತ್ತು ಸೂಕ್ಷ್ಮ ಸಂವೇದನೆ ಅಂಶಗಳು ಇಂದಿಗೂ ಕುವೆಂಪು ಅವರ ರಕ್ತಾಕ್ಷಿ ರೂಪಾಂತರ ನಾಟಕದಲ್ಲಿ ಅಭಿವ್ಯಕ್ತವಾಗಿದೆ. ಆ ಮೂಲಕ ವರ್ತಮಾನದ ವೈಚಾರಿಕತೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ‘ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಅಪ್ಪಗೆರೆ ಸೋಮಶೇಖರ್ ಹೇಳಿದರು.

ನಗರದ ಜನರಂಗ ಹಾಗೂ ಸುಕಿ ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಶೇಕ್ಸ್‌ಪಿಯರ್ ರಂಗ ಪಠ್ಯ ಹ್ಯಾಮ್ಲೆಟ್ ನಾಟಕ ಅನುವಾದ ಹಾಗೂ ಕುವೆಂಪು ಅವರ ರಕ್ತಾಕ್ಷಿ ರೂಪಾಂತರದ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಶೇಕ್ಸ್‌ಪಿಯರ್ ಬರೆದಿರುವ ಹ್ಯಾಮ್ಲೆಟ್ ನಾಟಕದಲ್ಲಿನ ಮೂಲ ಪಾತ್ರಗಳನ್ನು ಬದಲಾಯಿಸಿ ರಾಜ ಪ್ರಭುತ್ವ ಮತ್ತು ಪೌರೋಹಿತ್ಯ ಶಾಹಿ ಪದ್ಧತಿಗಳನ್ನು ಧಿಕ್ಕರಿಸಿ ಸಾಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಚಿಂತನೆ ನಾಟಕದಲ್ಲಿದೆ. ಕುವೆಂಪು ಅವರು ಪಠ್ಯ ಮತ್ತು ವೈಯಕ್ತಿಕ ದೃಷ್ಟಿಯಿಂದಲೂ ಪ್ರಭುತ್ವವನ್ನು ನಿರಾಕರಿಸುವ ಮನಸ್ಥಿತಿಯನ್ನು ಈ ರಕ್ತಾಕ್ಷಿ ನಾಟಕದಲ್ಲಿಯೂ ವಿರೋಧಿಸಿದರು ಎಂಬುದನ್ನು ನಾಟಕದಲ್ಲಿನ ಪಾತ್ರಗಳಲ್ಲಿಯೂ ಒತ್ತಿ ಹೇಳಿದ್ದಾರೆ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಹೇಂದ್ರ ಅವರು ಹ್ಯಾಮ್ಲೆಟ್ ಅನುವಾದ ಕುರಿತು ಮಾತನಾಡಿ, ‘ಶೇಕ್ಸ್‌ಪಿಯರ್ ಬರೆದಿರುವ ಹ್ಯಾಮ್ಲೆಟ್ ಮೂಲ ನಾಟಕವಲ್ಲ. ಆದರೂ ಅವರ ನಾಟಕದಲ್ಲಿರುವ ಅಂಶಗಳು ರಾಜಕೀಯ ಚಿಂತನೆ ಮತ್ತು ವಿಚಾರಗಳು ಸರ್ವಕಾಲಕ್ಕೂ ಚರ್ಚೆಗೆ ಬರುತ್ತವೆ. ಅವರ ಸಾಹಿತ್ಯ ರಚನೆ ಹಾಗೂ ಸಮಾಕಾಲೀನ ವಸ್ತು ವಿಷಯಗಳ ಗಂಭೀರ ಚಿಂತನೆಗಳಿಗೆ ವಸ್ತುವಾಗಿವೆ. ಹ್ಯಾಮ್ಲೆಟ್ ರಾಜಕೀಯ ಪ್ರೇರಿತ ನಾಟಕವಾದರೆ, ರಕ್ತಾಕ್ಷಿ ಒಂದು ಪ್ರೇಮ ಪ್ರೇರಿತವಾಗಿದೆ‘ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಶಿವಗಂಗಾ ರುಮ್ಮಾ ಮಾತನಾಡಿದರು. ಜನರಂಗ ಅಧ್ಯಕ್ಷ ಶಂಕ್ರಯ್ಯ ಘಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಕಿರಣ ಪಾಟೀಲ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT