ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನದ ಅಡಿಯಾಳು ಆಗಬೇಡಿ: ಪ್ರಾಧ್ಯಾಪಕ ರಮೇಶ ಲಂಡನಕರ್ ಸಲಹೆ

ಜಿಲ್ಲಾ ವಿಜ್ಞಾನ ಕೇಂದ್ರದ ವಾರ್ಷಿಕೋತ್ಸವ
Last Updated 6 ಜನವರಿ 2022, 11:34 IST
ಅಕ್ಷರ ಗಾತ್ರ

ಕಲಬುರಗಿ: ‘ತಂತ್ರಜ್ಞಾನವನ್ನು ಸೃಷ್ಟಿ ಮಾಡಿದ್ದೇ ಮನುಷ್ಯ. ಅದೇ ತಂತ್ರಜ್ಞಾನ ಇಂದು ಮನುಷ್ಯನನ್ನೇ ನಿಯಂತ್ರಣ ಮಾಡುತ್ತಿದೆ. ತಾಂತ್ರಿಕ ಕೌಶಲದ ಮಿತಿಮೀರಿದ ಬಳಕೆಯೇ ಈ ದುಸ್ಥಿತಿಗೆ ಕಾರಣ’ ಎಂದುಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ರಮೇಶ ಲಂಡನಕರ್ ಅಭಿಪ್ರಾಯ ಪಟ್ಟರು.

ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರದ 38ನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ ‘ಸಪ್ತಾಹ’ಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ತಾಂತ್ರಿಕ ಶಕ್ತಿ ಶೋಧಿಸಿದ್ದು ನಮ್ಮ ಅನುಕೂಲಕ್ಕಾಗಿ. ಈಗ ಅದನ್ನೇ ಅವಲಂಬಿಸುವಷ್ಟು ಪರಿಸ್ಥಿತಿ ಬದಲಾಗಿದೆ. ನಮ್ಮ ಬುದ್ಧಿಮತ್ತೆಗಿಂತ ತಂತ್ರಜ್ಞಾನವನ್ನೇ ನಂಬುವ ಮಟ್ಟಕ್ಕೆ ಬಂದು ನಿಂತಿದ್ದೇವೆ’ ಎಂದರು.

‘ಆಧುನಿಕ ಪ್ರಪಂಚದ ಎಲ್ಲ ರಂಗಗಳಲ್ಲೂ ಕೃತಕ ಬುದ್ಧಿವಂತಿಕೆಯ ಪ್ರಯೋಗ ಹೆಚ್ಚಾಗುತ್ತಿದೆ. ಟಿ.ವಿ, ಮೊಬೈಲ್‌ ಮುಂತಾದ ಸೌಕರ್ಯಗಳ ವಿಪರೀತ ಬಳಿಕೆಯಿಂದ ಹೊಸ ತಲೆಮಾರು ರೋಗಗ್ರಸ್ಥವಾಗುತ್ತಿದೆ. ಊಟಕ್ಕೆ, ನೀರಿಗೆ, ಆರೋಗ್ಯಕ್ಕೂ ಇಂದು ತಂತ್ರಜ್ಞಾನ ಬೇಕಾಗಿದೆ. ಕಿಡ್ನಿಯಂತೆ ಕೆಲಸ ಮಾಡುವ ಕೃತಕ ಯಂತ್ರಗಳನ್ನೂ ಕಂಡುಹಿಡಿಯಲಾಗಿದೆ. ಆದರೆ, ಯಾವುದೇ ಕ್ಷೇತ್ರದಲ್ಲಿ ಅವಶ್ಯಕತೆಗೆ ತಕ್ಕಷ್ಟು ಮಾತ್ರ ತಂತ್ರಜ್ಞಾನ ಬಳಸಿಕೊಳ್ಳಬೇಕು. ಇಲ್ಲದಿದ್ದರೆ ಈ ಡಿಜಿಟಲ್‌ ಯುಗದಲ್ಲಿ ನಾವು ಮಷಿನ್‌ಗಳ ಅಡಿಯಾಳು ಆಗಬೇಕಾಗುತ್ತದೆ’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆನ್‌ಲೈನ್‌ ಮೂಲಕ ಪಾಲ್ಗೊಂಡ ಬೆಂಗಳೂರಿನ ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ವಸ್ತುಸಂಗ್ರಹಾಲಯದ ನಿರ್ದೇಶಕಿ ಕೆ.ಎ.ಸಾಧನಾ ಮಾತನಾಡಿ, ‘ಕಲಬುರಗಿ ವಿಜ್ಞಾನ ಕೇಂದ್ರವು ದಕ್ಷಿಣ ಭಾರತದ ಎರಡನೆಯ ಜಿಲ್ಲಾ ವಿಜ್ಞಾನ ಕೇಂದ್ರ ಎಂದು ಹೆಗ್ಗಳಿಕೆ ಪಡೆದಿದೆ. ಬೆಂಗಳೂರು ಹೊರತುಪಡಿಸಿದರೆ ಅತ್ಯಂತ ಕ್ರಿಯಾಶೀಲವಾಗಿ ನಡೆಯುತ್ತಿರುವ ಕೇಂದ್ರವಿದು. 1984ರ ಜನವರಿ 6ರಿಂದ ಇಲ್ಲಿಯವರೆಗೆ ಕೇಂದ್ರವು ಸಾಕಷ್ಟು ಪರಿವರ್ತನೆಗಳೊಂದಿಗೆ ಬೆಳವಣಿಗೆ ಕಂಡಿದೆ’ ಎಂದರು.

‘ಜಗತ್ತಿನ ಮೊದಲ ವಿಜ್ಞಾನ ಕೇಂದ್ರವು 1851ರಲ್ಲಿ ಲಂಡನ್‌ನಲ್ಲಿ ಆರಂಭವಾಗಿದೆ. 1903ರಲ್ಲಿ ಜರ್ಮನಿಯಲ್ಲಿ ಇಂಥ ಪ್ರಯೋಗ ನಡೆಯಿತು. 1959ರಲ್ಲಿ ಕೋಲ್ಕತ್ತದಲ್ಲಿ ಭಾರತದ ಮೊದಲ ವಿಜ್ಞಾನ ಕೇಂದ್ರ ಆರಂಭವಾಯಿತು. ಈಗಲೂ ದೇಶದಲ್ಲಿ ನಡೆಯುತ್ತಿರುವ 25 ಸಮರ್ಥ ವಿಜ್ಞಾನ ಕೇಂದ್ರಗಳಲ್ಲಿ ಕಲಬುರಗಿ ಕೇಂದ್ರವೂ ಸೇರಿದೆ ಎಂಬುದು ಹೆಮ್ಮೆಯ ಸಂಗತಿ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಿಜ್ಞಾನ ಅಧಿಕಾರಿ ಸಿ.ಎನ್.ಲಕ್ಷ್ಮಿನಾರಾಯಣ ಕೇಂದ್ರದ ಚಟುವಟಿಕೆಗಳ ಮಹಿತಿ ನೀಡಿದರು. ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಪೇಂಟಿಂಗ್‌, ಕ್ವಿಜ್‌ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT