ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳೆಯುತ್ತಿದೆ ₹ 329 ಕೋಟಿ ‘ಖನಿಜ ನಿಧಿ’!

ಜಿಲ್ಲಾ ಖನಿಜ ನಿಧಿಯಲ್ಲಿ ₹ 571.82 ಕೋಟಿ ಸಂಗ್ರಹ: ಕಾಮಗಾರಿ ಪೂರ್ಣಗೊಳಿಸಲು ಉದಾಸೀನ, ನಿರ್ಲಕ್ಷ್ಯ
Published 22 ಫೆಬ್ರುವರಿ 2024, 4:35 IST
Last Updated 22 ಫೆಬ್ರುವರಿ 2024, 4:35 IST
ಅಕ್ಷರ ಗಾತ್ರ

ಕಲಬುರಗಿ: ಗಣಿಗಾರಿಕೆಯಿಂದ ನಲುಗಿ ಹೋಗಿರುವ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯ ಮತ್ತು ಪರಿಸರ ಸಂರಕ್ಷಣೆ ಕೈಗೊಳ್ಳಲು ಸ್ಥಾಪಿಸಲಾಗಿರುವ ಜಿಲ್ಲಾ ಖನಿಜ ನಿಧಿಯ (ಡಿಎಂಎಫ್‌) ₹ 329.45 ಕೋಟಿ ವೆಚ್ಚವಾಗದೆ ಬ್ಯಾಂಕ್‌ ಖಾತೆಯಲ್ಲಿ ಕೊಳೆಯುತ್ತಿದೆ.

ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿ ಅನುದಾನ ಕೊರತೆಯಿಂದಾಗಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಕೆಲವು ಕಾಮಗಾರಿಗಳು ಆರಂಭವೇ ಆಗಿಲ್ಲ. ಗುತ್ತಿಗೆದಾರರ ಬಿಲ್ ಪಾವತಿಯಾಗಿಲ್ಲ. ಆದರೆ, ಖನಿಜ ನಿಧಿ ಪ್ರತಿಷ್ಠಾನದಲ್ಲಿನ ಅನುದಾನ ಸದುಪಯೋಗವೇ ಆಗುತ್ತಿಲ್ಲ.

ಡಿಎಂಎಫ್‌ ನೀಡಿದ ಮಾಹಿತಿ ಅನ್ವಯ, 2015–16ರಿಂದ 2024ರ ಜನವರಿ ಅಂತ್ಯದವರೆಗೆ ಒಟ್ಟು ₹ 571.82 ಕೋಟಿ ನಿಧಿ ಸಂಗ್ರಹಿಸಲಾಗಿದೆ. ಕೋವಿಡ್‌–19ಗಾಗಿ ₹59.51 ಕೋಟಿ ಹಾಗೂ ಪಿಎಂ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯ ಮಾರ್ಗಸೂಚಿ ಕಾಮಗಾರಿಗಳಿಗೆ ₹ 182.86 ಕೋಟಿ ಸೇರಿ ಒಟ್ಟು ₹242.38 ಕೋಟಿ ಖರ್ಚು ಮಾಡಲಾಗಿದೆ. ₹ 329.45 ಕೋಟಿ ಖರ್ಚಾಗದೆ ಉಳಿದೆ.

ಇದುವರೆಗೆ 2,688 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. 957 ಕಾಮಗಾರಿಗಳು ಪೂರ್ಣಗೊಂಡಿದ್ದರೆ, 1,067 ಕಾಮಗಾರಿಗಳು ಇನ್ನೂ ಆರಂಭವಾಗಬೇಕಿದೆ. 339 ಕಾಮಗಾರಿಗಳು ಆರಂಭಕ್ಕೂ ಮುನ್ನವೇ ರದ್ದಾಗಿವೆ. ಕ್ರಿಯಾ ಯೋಜನೆ ಸಿದ್ಧವಿದ್ದರೂ ಅನುಷ್ಠಾನ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ.

ಸೇಡಂ, ಚಿಂಚೋಳಿ, ಶಹಾಬಾದ್, ಚಿತ್ತಾಪುರ, ಕಲಬುರಗಿ, ಕಮಲಾಪುರ ಸೇರಿದಂತೆ ಇತರೆಡೆ 246ಕ್ಕೂ ಅಧಿಕ ಕಲ್ಲು ಗಣಿಗಳು ಸಕ್ರಿಯವಾಗಿವೆ. ಎಂಟು ಸಿಮೆಂಟ್ ಕಾರ್ಖಾನೆಗಳು 4,485 ಹೆಕ್ಟೇರ್‌ ಪ್ರದೇಶದಲ್ಲಿನ ಸಣ್ಣ ಕಲ್ಲುಗಳನ್ನು ಸಿಮೆಂಟ್ ತಯಾರಿಕೆಗೆ ಬಳಸಿಕೊಳ್ಳುತ್ತಿವೆ. ಮರಳು ಸೇರಿದಂತೆ ಇತರೆ ಗಣಿಗಾರಿಕೆಯಿಂದಾಗಿ ಸಮೃದ್ಧವಾಗಿ ಬೆಳೆಗಳು ಬೆಳೆಯುತ್ತಿದ್ದ ಕಪ್ಪು ಮಣ್ಣಿನ ನೆಲ ಕಾಣೆಯಾಗಿ, ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿವೆ.

ಕಲುಷಿತ ನೀರು ಸೇವೆನೆ, ದೂಳಿನಿಂದಾಗಿ ಜನರು ಅಸ್ತಮಾ, ಅಲರ್ಜಿ, ಚರ್ಮ ರೋಗ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಗಣಿಗಾರಿಕೆ ಪ್ರದೇಶಗಳಲ್ಲಿನ ಜನರ ದೀರ್ಘಾವಧಿಯ ಸುಸ್ಥಿರ ಜೀವನೋಪಾಯಕ್ಕೆ ನೆರವಾಗಬೇಕಿದ್ದ ಡಿಎಂಎಫ್‌ ನಿಧಿಗೆ ಗ್ರಹಣ ಹಿಡಿದಿದೆ ಎನ್ನುತ್ತಾರೆ ಸ್ಥಳೀಯರು.

ಪಿಎಂ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ ಮಾರ್ಗಸೂಚಿ ಅನ್ವಯ ಈ ನಿಧಿಯನ್ನು ಸರ್ಕಾರದ ವಿವಿಧ ಇಲಾಖೆಗಳಿಗೆ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಕೆ ಹಾಗೂ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ನೀಡಲಾಗುತ್ತದೆ. ಆದರೆ, ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಈ ನಿಧಿ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಸರ್ಕಾರದ ಅನುಷ್ಠಾನ ಏಜೆನ್ಸಿಗಳು ಬಹು ವರ್ಷಗಳಿಂದ ಕಾಮಗಾರಿಗಳನ್ನು ಬಾಕಿ ಉಳಿಸಿವೆ. ನಿಯಮದ ಪ್ರಕಾರ ಹೊಸದಾಗಿ ಶುರು ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದು ಕ್ರಮ ತೆಗೆದುಕೊಳ್ಳಲಾಗುವುದು -ರೋಹಿತ್ ಎಸ್‌. ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ

‘ನೇರ–ಪರೋಕ್ಷ ಪರಿಣಾಮ ಪ್ರದೇಶದಲ್ಲಿ ಗೊಂದಲ’

‘ಗಣಿಗಾರಿಕೆಯ ನೇರ ಮತ್ತು ಪರೋಕ್ಷ ಪರಿಣಾಮ ಬಾಧಿತ ಪ್ರದೇಶಗಳಿಗೆ ನಿಧಿ ಹಂಚಿಕೆಯಲ್ಲಿ ಸ್ಥಳೀಯರಲ್ಲಿ ಒಂದಿಷ್ಟು ಗೊಂದಲ ಇದೆ. ಈ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಬರುವವರೆಗೂ ಹೊಸ ಕ್ರಿಯಾಯೋಜನೆಗಳನ್ನು ತಡೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಈ ಹಿಂದೆ ಸರ್ಕಾರ ಆದೇಶದಂತೆ ಶೇ 60ರಷ್ಟು ನಿಧಿಯು ನೇರ ಪರಿಣಾಮ ಹಾಗೂ ಶೇ 40ರಷ್ಟು ನಿಧಿಯು ಪರೋಕ್ಷ ‍ಪರಿಣಾಮ ಬಾಧಿತ ಪ್ರದೇಶಗಳಿಗೆ ಹೋಗುತ್ತಿತ್ತು. ಒಂದೂವರೆ ವರ್ಷದ ಹಿಂದಿನ ಹೊಸ ಆದೇಶ ಬಂದಿದ್ದು ನೇರ ಪರಿಣಾಮ ಪೀಡಿತ ಪ್ರದೇಶಗಳಿಗೆ ಶೇ 40ರಷ್ಟು ಹಾಗೂ ಪರೋಕ್ಷ ಪೀಡಿತ ಪ್ರದೇಶಗಳಿಗೆ ಶೇ 60ರಷ್ಟು ನಿಧಿ ಹಂಚಿಕೆಯಾಗಬೇಕು ಎಂದಿದೆ. ಆದರೆ ಈ ಬಗ್ಗೆ ಸ್ಥಳೀಯರಲ್ಲಿ ಗೊಂದಲ ಮೂಡಿದೆ. ಸರ್ಕಾರದಿಂದ ಸ್ಪಷ್ಟನೆ ಕೋರಲಾಗಿದೆ’ ಎಂದು ಮಾಹಿತಿ ನೀಡಿದರು. ‘ಈಗಾಗಲೇ ಅನುಮೋದನೆಯಾದ ಕಾಮಗಾರಿಗಳ ಕೆಲಸಗಳು ಸುಸೂತ್ರವಾಗಿ ನಡೆಯುತ್ತಿವೆ. ಬಿಲ್‌ಗಳು ಸಹ ಕ್ಲಿಯರ್ ಆಗುತ್ತಿದ್ದು ಮೂರನೇ ಪಾರ್ಟಿ ಅಥವಾ ಗುಣಮಟ್ಟ ಪರಿಶೀಲನೆಯ ವರದಿಗಳು ನಿಯಮಿತವಾಗಿ ಸಲ್ಲಿಕೆಯಾಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕಳುಹಿಸುವುದನ್ನು ವಿಲೇವಾರಿ ಮಾಡಲಾಗುತ್ತಿದೆ’ ಎಂದರು.

ಡಿಎಂಎಫ್‌ ನಿಧಿಯಲ್ಲಿ ವ್ಯತ್ಯಾಸ!

ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ವಿಧಾನ ಪರಿಷತ್ತನಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರು ನೀಡಿದ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಜಿಲ್ಲೆಯ ಅಧಿಕಾರಿಗಳ ಮಾಹಿತಿ ಪ್ರಕಾರ 2015–16ರಿಂದ 2024ರ ಜನವರಿ ಅಂತ್ಯದವರೆಗೆ ಒಟ್ಟು ₹ 571.82 ಕೋಟಿ ಸಂಗ್ರಹಿಸಲಾಗಿದೆ. ಇದೇ ಅವಧಿಯಲ್ಲಿ ಸಚಿವರು ನೀಡಿದ ಮಾಹಿತಿ ಅನ್ವಯ 2023 ಡಿಸೆಂಬರ್ ಅಂತ್ಯಕ್ಕೆ ಅನುಮೋದಿತ ಕ್ರಿಯಾ ಯೋಜನೆಯ ಒಟ್ಟು ಮೊತ್ತ ₹ 607.22 ಕೋಟಿಯಷ್ಟಿದೆ. ಈ ಬಗ್ಗೆ ಪ್ರತಿಕ್ರಿಯೆಗೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕರು ಲಭ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT