ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ‘ಕಲ್ಯಾಣದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಅಪ್ಪ’

ಡಾ. ಶರಣಬಸವಪ್ಪ ಅಪ್ಪ ಅವರ ಜನ್ಮದಿನ; ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
Last Updated 15 ನವೆಂಬರ್ 2021, 4:14 IST
ಅಕ್ಷರ ಗಾತ್ರ

ಕಲಬುರಗಿ: ‘ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರಿಗೆ ಕರ್ನಾಟಕ ರತ್ನ, ಪದ್ಮಭೂಷಣ ಪ್ರಶಸ್ತಿ ನೀಡಬೇಕು’ ಎಂದು ಶ್ರೀಶೈಲ ಸಾರಂಗಮಠ ಮತ್ತು ಸುಲಫಲ ಮಠದ ಪೀಠಾಧಿಪತಿ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಒತ್ತಾಯಿಸಿದರು.

ನಗರದ ಬಸವರಾಜಪ್ಪ ಅಪ್ಪ ಸ್ಮಾರಕ ಸಭಾಭವನದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಡಾ.ಅಪ್ಪ ಅವರ 87ನೇ ಜನ್ಮದಿನ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಡಾ.ದಾಕ್ಷಾಯಣಿ ಅಪ್ಪ ಅವರ 51ನೇ ಹಾಗೂ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪನವರ 5ನೇ ಜನ್ಮ ದಿನೋತ್ಸವ, ಮಕ್ಕಳ ದಿನಾಚರಣೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ, ಕೃತಿಗಳ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಚವದಾಪುರಿ ಹಿರೇಮಠ ಡಾ.ರಾಜಶೇಖರ ಶಿವಾಚಾರ್ಯರು, ಮುಗಳನಾಗಾಂವ ಕಟ್ಟಿಮನಿ ಸಂಸ್ಥಾನದ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಬೆಳಗುಂಪಾ ಬ್ರಹನ್ಮಠದ ಅಭಿನವ ಪರ್ವತೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಅಪ್ಪ ಅವರ ತುಲಾಭಾರ ಮಾಡಿ ಗೌರವಿಸಲಾಯಿತು.

ಗೀತಾಂಜಲಿ ಮತ್ತು ದಾಸೋಹ ಸೂತ್ರಗಳು, ತಬಲಾ ವಾದನಕ್ಕೆ ಸ್ಪೂರ್ತಿ ಹಾಗೂ ಶರಣಬಸವೇಶ್ವರ ಚರಿತ್ರಾಮೃತ ಕೃತಿಗಳನ್ನು ದಾಕ್ಷಾಯಣಿ ಅವರು ಬಿಡುಗಡೆ ಮಾಡಿದರು. ನೀಟ್‌ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ, ವಿವಿಧ ಪರೀಕ್ಷೆಗಳಲ್ಲಿ ರ‍್ಯಾಂಕ್ ಪಡೆದವರು ಹಾಗೂ ಪಿಎಚ್‌.ಡಿ ಮಾಡಿದ ಉಪನ್ಯಾಸಕರನ್ನು ಗೌರವಿಸಲಾಯಿತು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಎಸ್‌ಬಿಯು ಕುಲಪತಿ ಡಾ.ನಿರಂಜನ್ ನಿಷ್ಠಿ, ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷ ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಶಾಸಕರಾದ ಶಶೀಲ್ ನಮೋಶಿ, ಬಸವರಾಜ ಮತ್ತಿಮೂಡ, ಮಾಜಿ ಶಾಸಕರಾದ ಅರುಣಾ ಪಾಟೀಲ್ ರೇವೂರ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಎಚ್‌ಕೆಇ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ, ಪ್ರಮುಖರಾದ ಶಕುಂತಲಾ ಭೀಮಳ್ಳಿ, ರಾಜಾ ಭೀಮಳ್ಳಿ , ನಂದಿನಿ ನಿಷ್ಠಿ, ಶಾಂತಲಾ ನಿಷ್ಠಿ, ಮಾಜಿ ಮೇಯರ್ ಭೀಮರಡ್ಡಿ ಪಾಟೀಲ್ ಕುರಕುಂದಾ, ಹುಟ್ಟು ಹಬ್ಬ ಆಚರಣೆ ಸಮಿತಿಯ ಪ್ರಮುಖರಾದ ಎನ್.ಎಸ್.ದೇವರಕಲ್, ಅನಿಕುಮಾರ ಬಿಡವೆ, ಕಿರಣ ಮಾಕಾ, ಲಕ್ಷ್ಮಿ ಪಾಟೀಲ್ ಮಾಕಾ, ಇಂದಿರಾ ಶೆಟಕಾರ, ಶಂಕರಗೌಡ ಹೊಸಮನಿ, ಶಿವಕುಮಾರ ರಾಚೋಟಿ, ನೀಲಾಂಬಿಕಾ ಪೊಲೀಸ್ ಪಾಟೀಲ್, ಟಿ.ವಿ.ಶಿವಾನಂದನ್ ಇದ್ದರು.

ಹೊಸ ಎತ್ತರಕ್ಕೆ ಶರಣಬಸವ ವಿ.ವಿ: ಡಾ. ಅಪ್ಪ

ಶರಣಬಸವ ವಿಶ್ವವಿದ್ಯಾಲಯ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಹೊಸ ಉತ್ತುಂಗಕ್ಕೇರುತ್ತಿದ್ದು, ಇತರ ಶಿಕ್ಷಣ ಸಂಸ್ಥೆಗಳು ಅಸೂಯೆ ಪಡುವಂತಾಗಿದೆ ಎಂದು ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶರಣಬಸವಪ್ಪ ಅಪ್ಪ ಹೇಳಿದರು.

ಕಲಬುರಗಿಯಲ್ಲಿ ಸಂಘದಿಂದ ಶತಮಾನಕ್ಕೂ ಹಿಂದೆ ಕನಿಷ್ಠ ವಿದ್ಯಾರ್ಥಿನಿಯರಿಂದ ಪ್ರಥಮ ಬಾಲಕಿಯರ ಶಾಲೆ ಆರಂಭಗೊಂಡಿದ್ದು, ಇದೀಗ ದೊಡ್ಡ ಆಲದ ಮರವಾಗಿ ಬೆಳೆದು ಇಡೀ ಕಲ್ಯಾಣ ಕರ್ನಾಟಕದಲ್ಲಿ ಶರಣಬಸವ ವಿಶ್ವವಿದ್ಯಾಲಯ ಮೊದಲ ಖಾಸಗಿ ವಿಶ್ವವಿದ್ಯಾಲಯವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT