ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ನಗರದಲ್ಲಿ ಕುಡಿಯುವ ನೀರಿಗೆ ನಿಲ್ಲದ ತತ್ವಾರ

ಸರಡಿಗಿ ಬ್ಯಾರೇಜ್‌ನಲ್ಲಿ ಕುಸಿದ ಭೀಮಾ ನದಿ ನೀರಿನ ಸಂಗ್ರಹ ಸಾಮರ್ಥ್ಯ
Published 20 ಮಾರ್ಚ್ 2024, 7:47 IST
Last Updated 20 ಮಾರ್ಚ್ 2024, 7:47 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ ನಗರದಲ್ಲಿ ಕುಡಿಯುವ ನೀರಿನ ಹಾಹಾಕಾರ ಮುಂದುವರಿದಿದೆ. ಸಮರ್ಪಕವಾಗಿ ನೀರು ಪೂರೈಕೆ ಮಾಡದ ಮಹಾನಗರ ಪಾಲಿಕೆ ಮತ್ತು ಎಲ್‌ ಆ್ಯಂಡ್‌ ಟಿ ಕಂಪನಿಯ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆ ಉದ್ಭವಿಸಿದಾಗ ಸಹಾಯವಾಣಿ ಸಂಖ್ಯೆಗೆ ದೂರು ಸಲ್ಲಿಸಿದ 24 ಗಂಟೆಯೊಳಗೆ ನೀರು ಪೂರೈಸುವುದಾಗಿ ಜಿಲ್ಲಾಡಳಿತ, ಪಾಲಿಕೆ ಹೇಳಿತ್ತು. ಆದರೆ, ದೂರು ಕೊಟ್ಟು 24 ಗಂಟೆ ಅಲ್ಲ, 48 ಗಂಟೆಗಳು ಕಳೆದರೂ ನೀರು ಸಿಗುತ್ತಿಲ್ಲ ಎಂಬುದು ಬ್ರಹ್ಮಪುರ, ಶಕ್ತಿ ನಗರ ಸೇರಿದಂತೆ ಇತರೆ ಬಡಾವಣೆಗಳ ನಿವಾಸಿಗಳ ದೂರು.

ವಿವೇಕಾನಂದ ನಗರ, ಲಕ್ಷ್ಮಿ ನಗರ, ಮಾತಾ ಮಾಣಿಕೇಶ್ವರಿ ನಗರ, ದೇವಿ ನಗರ, ಸಂಗಮತಾಯಿ ಕಾಲೊನಿ, ಶಕ್ತಿ ನಗರ, ಸಂತೋಷ ಕಾಲೊನಿ, ಭವಾನಿ ನಗರ ಸೇರಿ ಹಲವೆಡೆ ನೀರು ಸರಬರಾಜಿನಲ್ಲಿ ವ್ಯತ್ಯವಾಗುತ್ತಿದೆ. ವಾರದಲ್ಲಿ ಒಂದೆರಡು ಬಾರಿ ಮಾತ್ರ ನೀರು ಪೂರೈಕೆ ಆಗುತ್ತಿದೆ. ಕೊಳವೆಬಾವಿ ಇದ್ದವರ ಮನೆಗಳಿಗೆ ಹೋಗಿ, ಕಾಡಿ ಬೇಡಿ ತರುವ ಸ್ಥಿತಿ ನಿರ್ಮಾಣವಾಗಿದೆ. ಉಳ್ಳವರು ₹400ರಿಂದ ₹500 ಕೊಟ್ಟು ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದಾರೆ.

‘ಪಾಲಿಕೆಯ ನಲ್ಲಿಯಲ್ಲಿ ಆರು ತಿಂಗಳಿಂದ ತೊಟ್ಟು ನೀರು ಬಂದಿಲ್ಲ. ಪಕ್ಕದ ಮನೆಯಲ್ಲಿದ್ದ ಕೊಳವೆ ಬಾವಿಯಿಂದ ನೀರು ತರುತ್ತಿದ್ದೇವು. ಅದು ಕೂಡ ಈಗ ಬಂದ್ ಆಗಿದೆ. ನೀರಿಲ್ಲದೆ ಬಹಳ ಹೈರಾಣು ಆಗಿದ್ದು, ತುಪ್ಪದಂತೆ ಬಳಸುವ ಪರಿಸ್ಥಿತಿ ಬಂದಿದೆ. ಎರಡ್ಮೂರು ದಿನಕ್ಕೆ ಒಮ್ಮೆ ₹ 400 ಕೊಟ್ಟು ಟ್ಯಾಂಕರ್ ನೀರು ತರಿಸುತ್ತಿದ್ದೇವೆ’ ಎಂದು ಬ್ರಹ್ಮಪುರ ನಿವಾಸಿ ನೀಲಮ್ಮ ಅಲವತ್ತುಕೊಂಡರು.

‘ನಿತ್ಯ ₹ 60 ಕೊಟ್ಟು ಕುಡಿಯುವ ನೀರು ಖರೀದಿಸುವ ಪರಿಸ್ಥಿತಿ ಬಂದಿದೆ. ಕೂಲಿ ಕೆಲಸದ ಹಣವನ್ನು ನೀರಿಗಾಗಿ ಬಡಿಯುತ್ತಿದ್ದೇವೆ. ಪಾಲಿಕೆಯ ಸಹಾಯವಾಣಿಗೆ ಕರೆ ಮಾಡಿದರು ಸ್ಪಂದನೆ ಸಿಕ್ಕಿಲ್ಲ. ವಾರ್ಡ್‌ನ ಪಾಲಿಕೆಯ ಸದ್ಯಸರ ಗಮನಕ್ಕೆ ತಂದರೂ ನನಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಾರೆ. ನಿಮ್ಮ ಮನೆ ಎತ್ತರದಲ್ಲಿದೆ ನೀರು ಬರುವುದಿಲ್ಲ ಎಂದು ಕೈತೊಳೆದುಕೊಳ್ಳುತ್ತಾರೆ’ ಎನ್ನುತ್ತಾರೆ ವಿಜಯ ನಗರ ನಿವಾಸಿ ಶ್ರೀಕಾಂತ.

‘ಐದು ದಿನಕ್ಕೆ ಒಮ್ಮೆ ನೀರು’

‘ಭೀಮಾ ನದಿಯ ಸರಡಗಿ ಬ್ಯಾರೇಜ್‌ನಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದೆ. ಹೀಗಾಗಿ ಮೂರು ದಿನಗಳಿಗೆ ಒಮ್ಮೆ ಬದಲು ಈಗ ಐದು ದಿನಗಳಿಗೆ ಒಮ್ಮೆ ಪೂರೈಸುತ್ತಿದ್ದೇವೆ’ ಎಂದು ಎಲ್‌ ಆ್ಯಂಡ್ ಟಿ ಸಾಮಾಜಿಕ ಅಭಿವೃದ್ಧಿ ಅಧಿಕಾರಿ ಎಸ್.ವೈ.ಸಾಲಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸರಡಗಿ ಬ್ಯಾರೇಜ್‌ನ ಪೂರೈಕೆ ಸಾಮರ್ಥ್ಯ 73 ಎಂಎಲ್‌ಡಿಯಿಂದ 63 ಎಂಎಲ್‌ಡಿಗೆ ತಲುಪಿದೆ. ಜಿಲ್ಲಾಧಿಕಾರಿಗಳು ನಾರಾಯಣಪುರ ಜಲಾಶಯದಿಂದ ನೀರು ಹರಿಸುವ ವ್ಯವಸ್ಥೆ ಮಾಡಿದ್ದಾರೆ. ಸರಡಗಿ ಬ್ಯಾರೇಜ್‌ಗೆ ಜಲಾಶಯದ ನೀರು ಬಂದರೆ ಮುಂದಿನ ಎರಡು ತಿಂಗಳು ನೀರಿನ ಸಮಸ್ಯೆ ಇರುವುದಿಲ್ಲ’ ಎಂದರು.

ಪಾಚಿ ನೀರು ಸರಬರಾಜು

ಶೋರ್ ಗುಂಬಜ್ ಸಮೀಪದ ನೀರು ಶುದ್ಧೀಕರಣ ಘಟಕದಿಂದ ಹಸಿರು ಬಣ್ಣದ ಪಾಚಿ ನೀರು ಪೂರೈಕೆ ಆಗುತ್ತಿದೆ. ಕಲುಷಿತ ನೀರು ಬಳಸುವುದರಿಂದ ಚರ್ಮ ಸಂಬಂಧಿತ ರೋಗಗಳ ಭೀತಿ ನಿವಾಸಿಗಳಲ್ಲಿ ಆವರಿಸಿದೆ. ನಲ್ಲಿಯಿಂದ ಬಂದ ನೀರು ಸೋಸಿದರೂ ನೀರಿನ ಹಸಿರು ಬಣ್ಣ ಬದಲಾಗುತ್ತಿಲ್ಲ. ಒಂದೆರಡು ದಿನ ಬಿಟ್ಟರೆ ಪಾಚಿಯಾದ ಹಸಿರ ನೀರಿನಲ್ಲಿ ಚಿಕ್ಕ ಹುಳುಗಳು ಕಾಣಿಸಿಕೊಂಡು ದುರ್ವಾಸನೆ ಬರುತ್ತದೆ ಎಂಬುದು ನಿವಾಸಿಗಳ ದೂರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್.ವೈ.ಸಾಲಿಮನಿ ‘ಭೀಮಾ ನದಿಯಲ್ಲಿ ನಿಂತ ನೀರು ಬಹಳಷ್ಟು ಗಲೀಜು ಆಗಿದೆ. ಶುದ್ಧೀಕರಣ ಘಟಕದಲ್ಲಿ ಎಷ್ಟೇ ಟ್ರೀಟ್‌ಮೆಂಟ್ ಮಾಡಿದರೂ ಕಲುಷಿತ ಪ್ರಮಾಣ ತಗ್ಗುತ್ತಿಲ್ಲ. ಕೆಲವೊಮ್ಮೆ ಹಸಿರು ನೀರು ವಾಸನೆ ಬರುತ್ತಿದ್ದು ಕುಡಿಯಲು ಯೋಗ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT