ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ಕೆರೆ ತುಂಬುವ ಯೋಜನೆಗೆ ಗ್ರಹಣ

18 ತಿಂಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿ 3 ವರ್ಷ ಕಳೆದರೂ ಪೂರ್ಣಗೊಂಡಿಲ್ಲ
Last Updated 29 ಜನವರಿ 2021, 1:50 IST
ಅಕ್ಷರ ಗಾತ್ರ

ಅಫಜಲಪುರ: ಸೊನ್ನ ಭೀಮಾ ಬ್ಯಾರೇಜ್‌ನಿಂದ ಪ್ರವಾಹದ ನೀರು ಹೆಚ್ಚಾಗಿ ನದಿಗೆ ಹರಿಯುವ ಸಂದರ್ಭದಲ್ಲಿ ನದಿ ನೀರನ್ನು ಲಿಫ್ಟ್ ಮೂಲಕ ಅಫಜಲಪುರ ಮತ್ತು ಆಳಂದ ತಾಲ್ಲೂಕಿನ ಕೆರೆಗಳಿಗೆ ತುಂಬುವ ಯೋಜನೆಯ ಕಾಮಗಾರಿ ಅನುದಾನ ಕೊರತೆಯಿಂದ ಸ್ಥಗಿತಗೊಂಡಿದೆ.

ಸುಮಾರು ₹318.48 ಕೋಟಿ ವೆಚ್ಚದ ಕಾಮಗಾರಿಗೆ 2017ರಲ್ಲಿ ಆಗಿನ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಬಳುಂಡಗಿ ಹತ್ತಿರ ಅಡಿಗಲ್ಲು ನೆರವೇರಿಸಿದರು. ಆದರೆ, 18 ತಿಂಗಳಲ್ಲೇ ಮುಗಿಯಬೇಕಿದ್ದ ಕಾಮಗಾರಿ 3 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಗುತ್ತಿಗೆದಾರರಿಗೆ ಸರ್ಕಾರ ಬಿಲ್‌ ನೀಡುತ್ತಿಲ್ಲ. ಇದರಿಂದಾಗಿ ಯೋಜನೆ ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದೆ.

ಈ ಯೋಜನೆಯಿಂದ ಅಫಜಲಪುರ ತಾಲ್ಲೂಕಿನ 10 ಕೆರೆಗಳು, ಆಳಂದ ತಾಲ್ಲೂಕಿನ 3 ಕೆರೆಗಳು ತುಂಬಿ ನಂತರ ಅಮರ್ಜಾ ಬ್ಯಾರೇಜ್‌ಗೆ 0.9 ಟಿಎಂಸಿ ನೀರು ಪೂರೈಕೆ ಮಾಡಬಹುದಾಗಿದೆ. ಈ ಯೋಜನೆಯಿಂದ ಆಳಂದ ಪಟ್ಟಣದ 40 ಸಾವಿರ ಜನರಿಗೆ ಕುಡಿಯುವ ನೀರು, 10 ಬಹುಗ್ರಾಮ ಕುಡಿಯುವ ನೀರು ಯೋಜನೆ, ಆಳಂದ ಸಕ್ಕರೆ ಕಾರ್ಖಾನೆ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಕುಡಿಯುವ ನೀರು ಲಭ್ಯವಾಗಲಿದೆ.

‘ಗುತ್ತಿಗೆದಾರ ವಿ.ಶಂಕರ ಅವರಿಗೆ ಟೆಂಡರ್ ನೀಡಿದ್ದು, ಈಗಾಗಲೇ ಅವರಿಗೆ ₹158 ಕೋಟಿ ಬಿಲ್ ಪಾವತಿ ಆಗಿದೆ. ಇನ್ನೂ ₹ 75 ಕೋಟಿ ಬಿಲ್‌ ತಯಾರಿಸಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಇನ್ನೂ ಬಿಲ್‌ ನೀಡಿಲ್ಲ. ಅದಕ್ಕಾಗಿ ಅವರು ಕೆಲಸ ಸ್ಥಗಿತ ಮಾಡಿದ್ದಾರೆ’ ಎಂದು ಭೀಮಾ ಏತ ನೀರಾವರಿ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಜಾಕಾ ತಿಳಿಸಿದರು.

‘ಶಾಸಕನಾಗಿರುವಾಗ ಕಷ್ಟಪಟ್ಟು ಕೆರೆಗೆ ತುಂಬುವ ಯೋಜನೆ ಜಾರಿ ಮಾಡಿಸಿಕೊಂಡು ಬಂದಿದ್ದೇನೆ. ನನ್ನ ಕಾಲಕ್ಕೆ ಅಡಿಗಲ್ಲು ನೆರವೇರಿಸಲಾಗಿದೆ. ನಂತರ ಅದು ಬೇರೆಯಾಯಿತು. ಈಗ ನಮ್ಮದೇ ಸರ್ಕಾರ ಇರುವುದರಿಂದ ಯಾವುದೇ ಪರಸ್ಥಿತಿಯಲ್ಲಿ ಯೋಜನೆ ವಿಳಂಬ ಮಾಡಲು ಬಿಡುವುದಿಲ್ಲ’ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ತಿಳಿಸುತ್ತಾರೆ.

‘ಆರಂಭದಲ್ಲಿ ಈ ಯೋಜನೆ ಕುರಿತು ಜನ ಸಾಕಷ್ಟು ಅಪಹಾಸ್ಯ ಮಾಡಿದ್ದರು. ಭೀಮಾ ನದಿಯಿಂದ ಅಮರ್ಜಾಗೆ ನೀರು ಹರಿಸಲು ಹೇಗೆ ಸಾಧ್ಯ ಎಂದು ಕೊಂಕು ಮಾತುಗಳನ್ನಾಡಿದ್ದಾರೆ. ನಾನು 2013ರಲ್ಲಿ ಶಾಸಕನಾಗಿದ್ದಾಗ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಮಂತ್ರಿ ಎಂ.ಬಿ ಪಾಟೀಲ, ಜಿಲ್ಲಾ ಉಸ್ತುವಾರಿ ಮಂತ್ರಿ ಖಮರುಲ್ ಇಸ್ಲಾಂ, ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ ಅವರೊಂದಿಗೆ ಮೂರು ಬಾರಿ ಸಭೆ ನಡೆಸಿ ಯೋಜನೆಯ ನೀಲನಕ್ಷೆ ಸಿದ್ಧಪಡಿಸಲಾಗಿತ್ತು. ನಂತರ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಇದನ್ನು ಘೋಷಣೆ ಮಾಡಿದರು’ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಮಾಹಿತಿ ನೀಡಿದರು.

‘ಗುತ್ತಿಗೆದಾರರು ಬಳೂರ್ಗಿ, ಬಡದಾಳ, ಅರ್ಜುಣಗಿ, ಬಳುಂಡಗಿ, ನಂದರ್ಗಾ ಇನ್ನೂ ಕೆಲವು ಗ್ರಾಮಗಳಲ್ಲಿ ಕೆರೆ ತುಂಬುವುದಕ್ಕಾಗಿ ಈಗಾಗಲೇ ಪೈಪ್‌ಲೈನ್ ಕೆಲಸ ಆರಂಭಿಸಿ ಅರ್ಧಕ್ಕೆ ಬಿಟ್ಟಿದ್ದಾರೆ. ರೈತರಿಗೆ ಬೆಳೆ ಪರಿಹಾರವೂ ನೀಡಿಲ್ಲ. ಕೆರೆಗೆ ನೀರು ತುಂಬುವ ಕೆಲಸವೂ ಆಗಲಿಲ್ಲ. ರೈತರಿಗೆ ಬೆಳೆ ಪರಿಹಾರ ನೀಡಿ ಗುತ್ತಿಗೆದಾರರು ಕೆಲಸ ಆರಂಭಿಸಬೇಕು’ ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT