ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ಶಿಕ್ಷಣ’

Last Updated 30 ಸೆಪ್ಟೆಂಬರ್ 2020, 3:53 IST
ಅಕ್ಷರ ಗಾತ್ರ

ವಾಡಿ: ‘ಶಿಕ್ಷಣ ರಂಗದ ಮೇಲೆ ಬಂಡವಾಳಶಾಹಿಯ ಕಬಂಧ ಬಾಹುಗಳು ಚಾಚಿದ್ದು, ಅದರ ಕರಿನೆರಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಭಿವ್ಯಕ್ತಗೊಂಡಿದೆ’ ಎಂದು ಶಿಕ್ಷಣ ತಜ್ಞ ಹಾಗೂ ಹೋರಾಟಗಾರ ಬಿ.ಶ್ರೀಪಾದ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸ್ಥಳೀಯ ಸಂಚಲನ ಸಾಹಿತ್ಯ ಮತ್ತು ಸಾಂಸ್ಕ್ರತಿಕ ವೇದಿಕೆ ಸೋಮವಾರ ಹಮ್ಮಿಕೊಂಡ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ– 2020 ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿಡಿದರು.

ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದ ಶಿಕ್ಷಣ ಕ್ಷೇತ್ರ ಕೇಂದ್ರೀಕರಣವಾಗುತ್ತಿದೆ. ಪ್ರಗತಿಪರ ಆಶಯಗಳಿಗೆ ತಿಲಾಂಜಲಿ ನೀಡಿ ಹಳೆಯ ಉಳಿಗಮಾನ್ಯ ವ್ಯವಸ್ಥೆಯ ಕಂದಾಚಾರಗಳು, ಮೌಢ್ಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುವುದರ ಮೂಲಕ ಸಂವಿಧಾನ ಹಾಗೂ ಪ್ರಜಾತಂತ್ರಕ್ಕೆ ಮಾರಣಾಂತಿಕ ಪೆಟ್ಟು ನೀಡಲು ಹೊರಟಿದ್ದು, ಸರ್ಕಾರದ ಈ ಷಡ್ಯಂತ್ರದ ವಿರುದ್ಧ ಜನಾಂದೋಲನ ಬೆಳೆಯಬೇಕು ಎಂದರು.

ಉಪನ್ಯಾಸಕಿ ಅಶ್ವಿನಿ ಎಂ. ಮಾತನಾಡಿ, ಕೊರೊನಾ ಸಂಕಷ್ಟದ ಸಮಯವನ್ನು ದುರುಪಯೋಗ ಪಡಿಸಿಕೊಂಡು ಕೇಂದ್ರ ಬಿಜೆಪಿ ಸರ್ಕಾರ ಯಾರೊಂದಿಗೂ ಚರ್ಚಿಸದೆ ಏಕಾಏಕಿ ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಹೊರಟಿರುವುದು ಅಧಿಕಾರದ ದುರ್ಬಳಕೆಯಾಗಿದೆ ಎಂದರು.

ಪುರಸಭೆ ಅಧ್ಯಕ್ಷೆ ಝರೀನಾ ಬೇಗಂ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆ ಸದಸ್ಯ ಯುವ ಸಾಹಿತಿ ಕಾಶಿನಾಥ ಹಿಂದಿನಕೇರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಅಧ್ಯಕ್ಷ ವಿಕ್ರಂ ನಿಂಬರ್ಗಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಚಲನ ವೇದಿಕೆ ಸದಸ್ಯರಾದ ಸಿದ್ದಯ್ಯ ಶಾಸ್ತ್ರಿ, ವೀರಣ್ಣ ಯಾರಿ, ಮಲ್ಲೇಶಿ ನಾಟೇಕಾರ, ಚಂದ್ರು ಕರುಣಿಕ, ಮಲ್ಲಿನಾಥ ತಳವಾರ, ದೇವಿಂದ್ರ ಕರದಳ್ಳಿ, ರಾಯಪ್ಪ ಕೊಟಗಾರ ಮಲ್ಲಿಕಪಾಷಾ ಮೌಜಾನ, ರವಿ ಕೊಳಕೂರು, ಮುಖಂಡರಾದ ಚಂದ್ರಸೇನ ಮೇನಗಾರ, ಮಹಮದ್ ಅಶ್ರಫ್, ಬಾಬು ಮಿಯ್ಯಾ, ಶರಣು ಹೆರೂರು, ಶಿಕ್ಷಕರಾದ ಸಿದ್ದಲಿಂಗ ಬಾಳಿ, ಮಹಾನಂದ ನಿಲೂರೆ, ಪದ್ಮರೇಖಾ ಆರ್.ಕೆ, ಇಮ್ಯಾನುವೇಲ್, ಯೇಶಪ್ಪ ಕೇದಾರ, ಶರಣು ದೊಶೆಟ್ಟಿ ಇದ್ದರು. ಮಡಿವಾಳಪ್ಪ ಹೆರೂರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT