ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ: ನೆಲ ಬಿಟ್ಟು ಮೇಲೇಳದ 110 ಕೆವಿ ಸ್ಟೇಷನ್

Published 17 ಮೇ 2024, 5:13 IST
Last Updated 17 ಮೇ 2024, 5:13 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಕೊಳ್ಳೂರು ಗ್ರಾಮದಲ್ಲಿ ಸುಮಾರು ₹13 ಕೋಟಿ ಅಂದಾಜು ವೆಚ್ಚದ 110 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ಭೂಮಿ ಪೂಜೆ ನಡೆದು 15 ತಿಂಗಳು ಗತಿಸಿದರೂ ಕಾಮಗಾರಿ ನೆಲ ಬಿಟ್ಟು ಮೇಲೆದ್ದಿಲ್ಲ.

ತಾಲ್ಲೂಕಿನಲ್ಲಿ 110 ಕೆವಿ ಸಾಮರ್ಥ್ಯದ ವಿದ್ಯುತ್ ಉಪ ಕೇಂದ್ರ ಇಲ್ಲಿನ ಚಂದಾಪುರದಲ್ಲಿದೆ. ಇದರ ಮೇಲೆ ಭಾರಿ ಪ್ರಮಾಣದ ಭಾರ ಇರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯ ಮತ್ತು ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ತಾಲ್ಲೂಕಿನ ಕೊಳ್ಳೂರಿನಲ್ಲಿ ಹೆಚ್ಚುವರಿಯಾಗಿ 110 ಕೆವಿ ಸಾಮರ್ಥ್ಯದ ವಿದ್ಯುತ್ ಉಪ ಕೇಂದ್ರ ಮಂಜೂರು ಮಾಡಿಸಿ ಕಾಮಗಾರಿ ಪ್ರಾರಂಭಿಸಲಾಗಿತ್ತು.

2023ರ ಫೆಬ್ರವರಿಯಲ್ಲಿ ಕಾಮಗಾರಿಗೆ ಭೂಮಿ ಪೂಜೆ ನಡೆಸಲಾಗಿತ್ತು. ಇದಾಗಿ ಈಗ 15 ತಿಂಗಳು ಗತಿಸಿದರೂ ಕಾಮಗಾರಿ ಮಾತ್ರ ನೆಲಬಿಟ್ಟು ಮೇಲೆ ಬಂದಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿಂಚೋಳಿ ತಾಲ್ಲೂಕಿನ ಅರ್ಧದಷ್ಟು ಪ್ರದೇಶಕ್ಕೆ ವರದಾನವಾಗಬಲ್ಲ ವಿದ್ಯುತ್ ಉಪಕೇಂದ್ರದ ಕಾಮಗಾರಿಗೆ ಗ್ರಹಣ ಹಿಡಿದಿರುವುದು ರೈತರಲ್ಲೂ ಅಸಮಾಧಾನ ತಂದಿದೆ. ‘ಈ ಕೇಂದ್ರ ಸ್ಥಾಪನೆಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ನಮ್ಮ ಊರಿನ ರೈತ ಜಮೀನು ನೀಡಿದ್ದರು. ಆದರೆ ಕಾಮಗಾರಿ ನಿಂತಲ್ಲೆ ನಿಂತಿರುವುದು ಬೇಸರಕ್ಕೆ ಕಾರಣವಾಗಿದೆ. ಆದಷ್ಟು ಬೇಗ ಕಾಮಗಾರಿ ಪುನರ್ ಆರಂಭಿಸಬೇಕು. ಅಧಿಕಾರಿಗಳು ಇಲ್ಲಸಲ್ಲದ ನೆಪ ಹೇಳಿ ವಿಳಂಬ ಮಾಡುವುದು ಸಲ್ಲದು’ ಎಂದು ಯುವ ಮುಖಂಡ ಶಿವಕುಮಾರ ಪವಾಡಶೆಟ್ಟಿ ಹೇಳಿದ್ದಾರೆ.

ಶಾಸಕ ಡಾ.ಅವಿನಾಶ ಜಾಧವ ಮನವಿ ಮೇರೆಗೆ ಹಿಂದಿನ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇಂಧನ ಸಚಿವ ವಿ.ಸುನೀಲಕುಮಾರ ಕೇಂದ್ರ ಮಂಜೂರು ಮಾಡಿದ್ದರು. ಆದರೆ ಕಾಮಗಾರಿ ಬಾಲಗ್ರಹ ಪೀಡೆಗೆ ಒಳಗಾದಂತಾಗಿದೆ. ಕೆಪಿಟಿಸಿಎಲ್ ವತಿಯಿಂದ ಗುತ್ತಿಗೆ ಸಂಸ್ಥೆಯೊಂದು ಕಾಮಗಾರಿ ಪ್ರಾರಂಭಿಸಿತು ಆದರೆ ಸದರಿ ಗುತ್ತಿಗೆ ರದ್ದುಪಡಿಸಿದ್ದರಿಂದ ಗುತ್ತಿಗೆದಾರ ಜಾಗ ಖಾಲಿ ಮಾಡಿದ್ದಾರೆ. ಹೀಗಾಗಿ ಈ ಸ್ಥಳ ಬಿಕೋ ಎನ್ನುತ್ತಿದೆ.

Quote - ಗುತ್ತಿಗೆದಾರ ನಿಧಾನಗತಿಯಲ್ಲಿ ಕಾಮಗಾರಿ ನಡೆಸಿದ್ದಲ್ಲದೇ ಈ ಕಾಮಗಾರಿ ಬಗ್ಗೆ ಉದಾಸೀನ ತೋರಿದ್ದರಿಂದ ಗುತ್ತಿಗೆ ರದ್ದುಪಡಿಸಲಾಗಿದೆ. ಮತ್ತೊಮ್ಮೆ ಅಂದಾಜು ಪಟ್ಟಿ ಸಲ್ಲಿಸಲಾಗಿದೆ - ರಾಜೇಶ ಹಿಪ್ಪರಗಿ ಕಾರ್ಯಪಾಲಕ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT